ಕಲ್ಲುಗುಂಡಿ: ಕಳೆದುಹೋದ ಗ್ರಾಹಕನ ಚಿನ್ನದ ಸರ ಹಿಂತಿರುಗಿಸಿಕೊಟ್ಟು ಪ್ರಾಮಾಣಿಕತೆ ಮೆರೆದ ಅಂಗಡಿ ಮಾಲಕ

0

ಅಂಗಡಿಗೆ ಸಾಮಾಗ್ರಿ ಖರೀದಿಸಲು ಬಂದ ಗ್ರಾಹಕರೊಬ್ಬರ ಚಿನ್ನದ ಸರವೊಂದು ಅಂಗಡಿಯ ಬಳಿ ಬಿದ್ದಿದ್ದು, ಅಂಗಡಿ ಮಾಲಕರು ಅದನ್ನು ಸಾಮಾಜಿಕ ಜಾಲತಾಣದ ಮೂಲಕ ಪ್ರಚಾರ ಪಡಿಸಿ, ಹಿಂತಿರುಗಿಸಿಕೊಟ್ಟು ಪ್ರಾಮಾಣಿಕತೆ ಮೆರೆದ ಘಟನೆ ದ.ಕ. ಸಂಪಾಜೆ ಗ್ರಾಮದ ಕಲ್ಲುಗುಂಡಿಯಲ್ಲಿ ನ.20ರಂದು ಸಂಭವಿಸಿದೆ.

ಕಲ್ಲುಗುಂಡಿಯ ಶ್ರೀ ಲೇಡಿಸ್ ಕಾರ್ನಾರ್ ಮಾಲಿಕರಾದ ನೀಲೇಶ್ವರ ಅವರು ಕಲ್ಲುಗುಂಡಿಯ ಮೇಲಿನ ಪೇಟೆಯಲ್ಲಿರುವ ನ್ಯಾಷನಲ್ ಸ್ಟೋರ್ ಗೆ ಸಾಮಾಗ್ರಿ ಖರೀದಿಸಲು ಬಂದಿದ್ದ ವೇಳೆ, ಅವರಿಗೆ ಅರಿವಿಲ್ಲದೆ, ಕುತ್ತಿಗೆಯಲ್ಲಿದ್ದ ಒಂಭತ್ತು ಗ್ರಾಂ ತೂಕದ ಚಿನ್ನದ ಸರ ಅಂಗಡಿಯ ಬಳಿ ಬಿದ್ದು ಹೋಗಿತ್ತು.

ಅಂಗಡಿಯಿಂದ ಸಾಮಾಗ್ರಿ ಖರೀದಿಸಿ ನೀಲೇಶ್ವರ ಅವರು ಹೋದ ಬಳಿಕ ಅಂಗಡಿ ಮಾಲಕ ಹಾಜಿ ಅಬ್ಬಾಸ್ ಗೂನಡ್ಕ ಅವರು ಅಂಗಡಿಯ ಹೊರಬಂದು ನೋಡಿದಾಗ ಚಿನ್ನದ ಸರ ಅಂಗಡಿಯ ಬಳಿ ಬಿದ್ದಿತ್ತೆನ್ನಲಾಗಿದೆ.

ತಕ್ಷಣವೆ ಹಾಜಿ ಅಬ್ಬಾಸ್ ಅವರು ವಾಟ್ಸಾಪ್ ಗ್ರೂಪ್ ಗಳಲ್ಲಿ ಈ ವಿಷಯವನ್ನು ಹಾಕಿದ್ದರೆನ್ನಲಾಗಿದೆ.
ಸಾಮಾಜಿಕ ಜಾಲತಾಣದ ಮೂಲಕ ಈ ವಿಷಯ ಹರಡಿ, ನೀಲೇಶ್ವರ ಅವರಿಗೆ ಈ ವಿಷಯ ತಿಳಿದು ಅವರು ಮತ್ತೆ ಅಬ್ಬಾಸ್ ಹಾಜಿ ಅವರ ಅಂಗಡಿಗೆ ಬಂದು ಚಿನ್ನದ ಸರದ ಪರಿಚಯ ಹೇಳಿದ್ದು,
ಹಾಜಿ ಅಬ್ಬಾಸ್ ಗೂನಡ್ಕ ಅವರು ಅದನ್ನು ನೀಲೇಶ್ವರ ಅವರಿಗೆ ಹಿಂತಿರುಗಿಸಿ ಕೊಟ್ಟು ಪ್ರಾಮಾಣಿಕತೆ ಮೆರೆದಿದ್ದಾರೆ.