ಸಂಸತ್ ಮೇಲಿನ ದಾಳಿ ಘಟನೆ ಖಂಡನೀಯ

0

ದಾಳಿಕೋರರ ಜೊತೆಗೆ ಅವರಿಗೆ ಪಾಸ್ ನೀಡಿದ ಸಂಸದ ಪ್ರತಾಪಸಿಂಹರನ್ನೂ ಬಂಧಿಸಿ ವಿಚಾರಣೆಗೊಳಪಡಿಸಿ : ಎಂ.ವೆಂಕಪ್ಪ ಗೌಡ ಒತ್ತಾಯ

ಅಂದು ಪುಲ್ವಾಮ – ಇಂದು ಸಂಸತ್ ಭವನ : ಇದರ ಮರ್ಮವೇನು?

” ಸಂಸತ್ ಅಧಿವೇಶನ ನಡೆಯುತ್ತಿರುವಾಗಲೇ ಕೆಲವು ಯುವಕರು ಸಂಸತ್ತಿಗೆ ನುಗ್ಗಿ ಹೊಗೆ ಬಾಂಬ್ ದಾಳಿ ನಡೆಸಿದ ಘಟನೆ ಅತ್ಯಂತ ಖಂಡನೀಯವಾಗಿದ್ದು, ಇದರ ಬಗ್ಗೆ ಕೇಂದ್ರ ಸರ್ಕಾರ ಗಂಭೀರ ತನಿಖೆ ನಡೆಸಬೇಕು, ಮಾತ್ರವಲ್ಲದೆ ಆ ಯುವಕರಿಗೆ ಸಂಸತ್ ಪ್ರವೇಶಿಸಲು ಪಾಸ್ ನೀಡಿದ ಮೈಸೂರು ಸಂಸದ ಪ್ರತಾಪ ಸಿಂಹ ರನ್ನು ಕೂಡ ಬಂಧಿಸಿ ವಿಚಾರಣೆಗೊಳಪಡಿಸಬೇಕು” ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಹಾಗೂ ಸುಳ್ಯ ನಗರ ಪಂಚಾಯತ್ ಸದಸ್ಯ ಎಂ. ವೆಂಕಪ್ಪಗೌಡರು ಒತ್ತಾಯಿಸಿದ್ದಾರೆ.


ನಿನ್ನೆ ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ” 22 ವರ್ಷದ ಹಿಂದೆ ಡಿಸೆಂಬರ್ 13 ರಂದು ಸಂಸತ್ತಿಗೆ ಭಯೋತ್ಪಾದಕರು ದಾಳಿ ನಡೆಸಿದ್ದರು. ಆ ದಿನವನ್ನು ಮತ್ತೆ ನೆನಪಿಸುವಂತೆ ಮಾಡುವುದಾಗಿ ಖಲಿಸ್ತಾನ್ ಸಂಘಟನೆ ಬೆದರಿಕೆ ಒಡ್ಡಿತ್ತು. ಆದರೂ ಕೇಂದ್ರ ಸರ್ಕಾರ ಸರಿಯಾದ ಭದ್ರತಾ ವ್ಯವಸ್ಥೆ ಮಾಡಿಲ್ಲ. ಸರಿಯಾಗಿ ಅದೇ ದಿನ ಈ ಯುವಕರು ಸಂಸತ್ತಿಗೆ ನುಗ್ಗಿ ಸ್ಮೋಕ್ ಬಾಂಬ್ ಪ್ರಯೋಗಿಸಿದ್ದಾರೆ. ಆದ್ದರಿಂದ ಖಲಿಸ್ತಾನ್ ಬೆದರಿಕೆಗೂ ಈ ದಾಳಿಗೂ ಸಂಬಂಧವಿದೆಯೋ ಎಂದು ನೋಡಬೇಕು. ಕಳೆದ ಬಾರಿಯ ಸಂಸತ್ತು ಚುನಾವಣೆಯ ಸಂದರ್ಭ ಪುಲ್ವಾಮಾ ದಾಳಿ ನಡೆಸಿತ್ತು. ಈ ಬಾರಿ ಚುನಾವಣೆಗೆ ದಿನ ಹತ್ತಿರವಾಗುತ್ತಿರುವಾಗ ಸಂಸತ್ತು ದಾಳಿ ನಡೆದಿದೆ. ಇದರ ಹಿಂದಿನ ಮರ್ಮವೇನು ಎಂಬುದೂ ತನಿಖೆಯಾಗಬೇಕು. ಬಿಜೆಪಿ ಎಂ.ಪಿ.ಯೇ ಪಾಸ್ ಕೊಟ್ಟಿರುವುದರಿಂದ ಘಟನೆಯನ್ನು ಸಣ್ಣದುಗೊಳಿಸುವ ಸಾಧ್ಯತೆ ಕಾಣುತ್ತಿದೆ. ಒಂದು ವೇಳೆ ಕಾಂಗ್ರೆಸ್ ಎಂ.ಪಿ. ಪಾಸ್ ಕೊಟ್ಟಿರುತ್ತಿದ್ದರೆ ಅಥವಾ ಯುವಕರು ಅಲ್ಪಸಂಖ್ಯಾತರೇನಾದರೂ ಆಗಿರುತ್ತಿದ್ದರೆ ಬಿಜೆಪಿಯವರು ದೇಶಕ್ಕೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿರಲಿಲ್ಲವೇ?” ಎಂದು ಪ್ರಶ್ನಿಸಿದ ವೆಂಕಪ್ಪ ಗೌಡರು “ಪ್ರಕರಣದ ಸಮಗ್ರ ತನಿಖೆಯಾಗಬೇಕು” ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಕೆ. ಗೋಕುಲ್ ದಾಸ್, ಎಂ.ಜೆ. ಶಶಿಧರ್, ಭವಾನಿಶಂಕರ್ ಕಲ್ಮಡ್ಕ ಉಪಸ್ಥಿತರಿದ್ದರು.