ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠೆ ದಿನ ದೇವಾಲಯಗಳಲ್ಲಿ ವಿಶೇಷ ಪೂಜೆ

0

ಸರಕಾರದ ನಿರ್ಧಾರವನ್ನು ಸ್ವಾಗತಿಸಿದ ಸುಳ್ಯದ ಕಾಂಗ್ರೆಸ್ ನಾಯಕರು

ದೇವಾಲಯದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ಕಾರ್ಯಕರ್ತರಿಗೆ ಸೂಚನೆ

ಸುಳ್ಯ, ಅಡ್ಕಾರ್ ಗಳಲ್ಲಿ ಬ್ಯಾನರ್ ಗೆ ಹಾನಿ ಮಾಡಿದವರನ್ನು ಬಂಧಿಸಲು ಆಗ್ರಹ

ಜನವರಿ 22 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಶ್ರೀರಾಮ ವಿಗ್ರಹದ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದ ದಿನ ರಾಜ್ಯದ ಎಲ್ಲಾ ಧಾರ್ಮಿಕ ದತ್ತಿ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಸಲು ರಾಜ್ಯ ಸರಕಾರ ಹೊರಡಿಸಿದ ಸುತ್ತೋಲೆಯನ್ನು ಸ್ವಾಗತಿಸಿರುವ ಸುಳ್ಯದ ಕಾಂಗ್ರೆಸ್ ನಾಯಕರು , ಈ ಕಾರ್ಯಕ್ರಮಗಳಲ್ಲಿ ಎಲ್ಲ ಕಾರ್ಯಕರ್ತರೂ ಪಾಲ್ಗೊಳ್ಳುವಂತೆ ಕರೆ ನೀಡಿದೆ.

ಸುಳ್ಯ ಪ್ರೆಸ್‌ಕ್ಲಬ್‌ನಲ್ಲಿ ಇಂದು ಸುದ್ದಿಗೋಷ್ಠಿಯನ್ನುದ್ಧೇಶಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಜಯಪ್ರಕಾಶ್ ರೈಯವರು, ಸರಕಾರದ ಈ ಆದೇಶವನ್ನು ಕಾಂಗ್ರೆಸ್ ಪಕ್ಷ ಹಾಗೂ ರಾಮ ಭಕ್ತರಾದ ನಾವೆಲ್ಲರೂ ಸ್ವಾಗತಿಸಿ ಸರಕಾರಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.

ಅಂದು ಸುಳ್ಯದ ಶ್ರೀರಾಮ ಭಜನಾ ಮಂದಿರದಲ್ಲೂ ವಿಶೇಷ ಪೂಜಾ ಕಾರ್ಯಕ್ರಮ ನಡೆಸಲು ಯೋಜಿಸಿದ್ದು, ನಗರದ ನಾಯಕರು ಮತ್ತು ಕಾರ್ಯಕರ್ತರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.

ಶ್ರೀರಾಮಚಂದ್ರ ರಾಜಧರ್ಮ ಪಾಲಿಸಿದ ಮಹಾನ್ ವ್ಯಕ್ತಿತ್ವ. ಗಾಂಧೀಜಿ ಹೇಳಿದ ರಾಮರಾಜ್ಯದಲ್ಲೂ ಎಲ್ಲರೂ ಸಮಾನರೆಂಬ ಭಾವನೆ ಇತ್ತು. ಶ್ರೀರಾಮ ರಾಜ ಧರ್ಮದ ಪ್ರತೀಕ. ವಾಜಪೇಯಿಯವರು ಮೋದಿಯವರಿಗೆ ಹೇಳಿದ್ದೂ ಇದನ್ನೇ. ರಾಜಕೀಯ ಲಾಭ ನಷ್ಟದ ಲೆಕ್ಕಾಚಾರಗಳನ್ನು ಎಲ್ಲಾ ಪಕ್ಷಗಳೂ ಮಾಡುತ್ತವೆ. ಎಲ್ಲ ಪಕ್ಷಗಳೂ ಲಾಭ ಪಡೆಯಲಿ. ಇಂದು ರಾಮ ಮಂದಿರ ಮೋದಿಯವರ ಕಾಲದಲ್ಲಾದರೆ, ಅಂದು ಬೀಗ ತೆಗೆಸಿದ್ದು, ಶಿಲಾನ್ಯಾಸ ರಾಜೀವ್ ಗಾಂಧಿಯವರ ಕಾಲದಲ್ಲಿ ಆಗಿದೆ. ಶ್ರೀರಾಮಚಂದ್ರ ಎನ್ನುವುದು ದೇಶದ ಐಡೆಂಟಿಟಿ. ಹಾಗಾಗಿ ಹಿಂದೂಗಳ ಭವ್ಯ ಕ್ಷೇತ್ರವಾಗಿ ಬೆಳಗುವ ಅಯೋಧ್ಯೆಯ ಈ ಕಾರ್ಯಕ್ರಮಕ್ಕೆ ನಾವು ಪೂರ್ಣ ಸಹಕಾರ ನೀಡುತ್ತೇವೆ ಎಂದು ಜಯಪ್ರಕಾಶ್ ರೈ ಹೇಳಿದರು.

ಬ್ಯಾನರ್ ಹಾನಿ ಪ್ರಕರಣಕ್ಕೆ ಖಂಡನೆ

ಇತ್ತೀಚೆಗೆ ಸುಳ್ಯದಲ್ಲಿ ನಡೆದ ಬ್ಯಾನರ್ ಹಾನಿ ಪ್ರಕರಣಕ್ಕೆ ಸಂಬಂಧಿಸಿ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕಾಂಗ್ರೆಸ್ ನಾಯಕರು ಇದೊಂದು ಸೆನ್ಸಿಟಿವ್ ವಿಷಯ. ಪೊಲೀಸ್ ಇಲಾಖೆ ಕೂಡಾ ಆರೋಪಿಗಳನ್ನು ಬಂಧಿಸಿ ಪ್ರಕರಣವನ್ನು ಬೇಧಿಸಬೇಕು. ಎಲ್ಲಾ ಕಡೆ ಸಿಸಿ ಕ್ಯಾಮರಾ ಇರುವಂತಹ ಈ ಸಂದರ್ಭದಲ್ಲಿ ಇದನ್ನು ಶೀಘ್ರ ಬೇಧಿಸುವ ಕಾರ್ಯ ಮಾಡಬೇಕು ಎಂದು ಎನ್.ಜಯಪ್ರಕಾಶ್ ರೈ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ್, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ. ವೆಂಕಪ್ಪ ಗೌಡ ಹೇಳಿದರು.

ಪೊಲೀಸ್ ಇಲಾಖೆ ಈ ಕುರಿತು ಕ್ರಮ ಕೈಗೊಳ್ಳಬೇಕು. ಶೇ. 90 ರಷ್ಟು ಅವರು ಯಶಸ್ವಿಯಾಗಿದ್ದಾರೆ ಕೂಡಾ. ಆದರೆ ವಾಸ್ತವದ ಅರಿವಿದ್ದೂ ಪ್ರತಿಭಟನೆಯ ನೆಪದಲ್ಲಿ ಸಮಾಜವನ್ನು ಉದ್ರೇಕಿಸಿ ಗಲಭೆ ಸೃಷ್ಟಿಸುವ ಹುನ್ನಾರವನ್ನು ಬಿಜೆಪಿ ನಾಯಕರು ಮಾಡುತ್ತಿದ್ದಾರೆ. ಪ್ರತಿಭಟನೆ ಮಾಡಲಿ. ಆದರೆ ಮಾಹಿತಿ ಇಲ್ಲದೆ ಇಂತಹ ಕೃತ್ಯವನ್ನು ಒಂದು ಧರ್ಮದ ತಲೆಗೆ ಕಟ್ಟುವ ಕೆಲಸವನ್ನು ಹರೀಶ್ ಕಂಜಿಪಿಲಿ ಮಾಡಿದ್ದಾರೆ. ಆರೋಪಿಗಳು ಯಾರೇ ಆದರೂ ಬಂಧಿಸಬೇಕೆನ್ನುವುದು ನಮ್ಮ ಆಗ್ರಹವೂ ಕೂಡಾ ಎಂದು ವೇಂಕಪ್ಪ ಗೌಡ ಹೇಳಿದರು.

ಸುಳ್ಯ ಜಾತ್ರಾ ಸಂದರ್ಭದಲ್ಲಿ ಸಂತೆಗೆ ಬಂದಿದ್ದ ಯುವಕನೊಬ್ಬನ ಮೇಲೆ ಅನ್ಯ ಧರ್ಮಕ್ಕೆ ಸೇರಿದವ ಎಂಬ ನೆಪದಲ್ಲಿ ಅನೈತಿಕ ಪೊಲೀಸ್‌ಗಿರಿ ನಡೆದಿದೆ. ಇಂತಹ ಭಯ ನಿರ್ಮಾಣದ ಕಾರ್ಯ ಸರಿಯಲ್ಲ ಎಂದು ವೆಂಕಪ್ಪ ಗೌಡರು ಹೇಳಿದರು.

ಮೊದಲೆಲ್ಲಾ ಜಾತ್ರೋತ್ಸವಗಳಂತಹ ಕಾರ್ಯಕ್ರಮದ ಪೂರ್ವಭಾವಿಯಾಗಿ ಊರಿನ ಎಲ್ಲಾ ಹಿರಿಯ ಮುಖಂಡರನ್ನು ಸೇರಿಸಿ ಶಾಂತಿ ಸಭೆ ಮಾಡಲಾಗುತ್ತಿತ್ತು. ಆದರೆ ಇತ್ತೀಚೆಗೆ ಕೆಲವು ಮಂದಿಯನ್ನು ಕರೆದು ಇಂತಹ ಸಭೆ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡ ಕೆ. ಗೋಕುಲ್‌ದಾಸ್ ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ್, ಸತ್ಯಕುಮಾರ್ ಆಡಿಂಜ, ನಂದರಾಜ ಸಂಕೇಶ, ಚೇತನ್ ಕಜೆಗದ್ದೆ, ಭವಾನಿಶಂಕರ ಕಲ್ಮಡ್ಕ ಮೊದಲಾದವರು ಉಪಸ್ಥಿತರಿದ್ದರು.