ಶೇಣಿ ಕೋಟಿ ಚೆನ್ನಯ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಭಕ್ತಿ ಸಂಭ್ರಮದ ನೇಮೋತ್ಸವ

0

ಸಹಸ್ರಾರು ಸಂಖ್ಯೆಯಲ್ಲಿ ಸೇರಿದ ಭಕ್ತ ಸಮೂಹ, ಭಜಕರಿಂದ ನೃತ್ಯ ಭಜನೆ, ಯಕ್ಷಗಾನ ಬಯಲಾಟ

ಅಮರಪಡ್ನೂರಿನ ಶೇಣಿ ಶ್ರೀ ಕೋಟಿ ಚೆನ್ನಯ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಜ.24 ರಂದು ವರ್ಷಂಪ್ರತಿ ನಡೆಯುವ ಶ್ರೀ ಬ್ರಹ್ಮ ಬೈದೇರುಗಳ ನೇಮೋತ್ಸವವು ಅತ್ಯಂತ ಭಕ್ತಿ‌ ಸಂಭ್ರಮದಿಂದ ಜರುಗಿತು.
ಜ.24 ರಂದು ಬೆಳಗ್ಗೆ ಬಂಟ್ವಾಳದ ಪುರೋಹಿತರಾದ ಪ್ರದೀಪ್ ಶಾಂತಿ ಯವರ ನೇತೃತ್ವದಲ್ಲಿ ಗಣಪತಿ ಹವನವಾಗಿ ಬೈದೇರುಗಳಿಗೆ ಕಲಶಾಭಿಷೇಕ ತಂಬಿಲ ಸೇವೆ ನಡೆದು ಪ್ರಸನ್ನ ಪೂಜೆಯು‌ ನೆರವೇರಿತು. ಮಧ್ಯಾಹ್ನ ಪೂಜೆಯಾಗಿ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆಯು ನೆರವೇರಿತು.

ಸಂಜೆ ಶ್ರೀ ದೈವಗಳ ಭಂಡಾರ ತೆಗೆದು ರಾತ್ರಿ ಬೈದೇರುಗಳು ಗರಡಿ ಇಳಿದು ಬಳಿಕ ಅಲ್ಲಿಂದ ಕಾಲ್ನಡಿಗೆಯಲ್ಲಿ ಚೊಕ್ಕಾಡಿ ಶ್ರೀ ಉಳ್ಳಾಕುಲು ದೈವಸ್ಥಾನಕ್ಕೆ ಆಗಮಿಸಿ ದೈವದ ಪಾದಕ್ಕೆ ಕಾಣಿಕೆ ಅರ್ಪಿಸುವ ವಿಶೇಷ ಕಾರ್ಯವು ನಡೆಯಿತು.
ಅಲ್ಲಿಂದ ಹಿಂತಿರುಗಿದ
ನಂತರ ಮಾನಿಬಾಲೆ ಗರಡಿ ಇಳಿದು ಧರ್ಮ ಚಾವಡಿಗೆ ಬಂದು ಹಾಲು ಕುಡಿಯುವ ಕಾರ್ಯಕ್ರಮ ನಡೆದು ಮರುದಿನ ಪ್ರಾತ:ಕಾಲ ತುಳುನಾಡಿನ ಇತಿಹಾಸದ ಕಾರಣಿಕದ ಕೋಟಿ ಚೆನ್ನಯ ರ ದರ್ಶನವಾಗಿ ನಂತರ ಬೈದೇರುಗಳ ಸೇಟು ನಡೆಯಿತು.
ಈ ಸಂದರ್ಭದಲ್ಲಿ
ಆಗಮಿಸಿದ ಎಲ್ಲಾ ಭಕ್ತಾದಿಗಳಿಗೆ ಪ್ರಸಾದ
ವಿತರಣೆಯಾಯಿತು.


ಆಕರ್ಷಕ ನೃತ್ಯ ಭಜನೆ :

ಸಂಜೆ ತಾಳ ನಿನಾದಂ ಭಜನಾ ತಂಡ ಪಡ್ಪಿನಂಗಡಿ ಇದರ ಸದಸ್ಯರಿಂದ ಆಕರ್ಷಕ ಕುಣಿತ ಭಜನೆಯು ನಡೆಯಿತು.
ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ಕಳಂಜ ಯುವಕ ಮಂಡಲದ ಹವ್ಯಾಸಿ ಕಲಾವಿದರಿಂದ “ಜಾಂಬವತಿ ಕಲ್ಯಾಣ ಅಗ್ರಪೂಜೆ” ಎಂಬ ಯಕ್ಷಗಾನವು ಪ್ರದರ್ಶನವಾಯಿತು.
ಸಹಸ್ರಾರು ಸಂಖ್ಯೆಯಲ್ಲಿ
ಆಗಮಿಸಿದ ಊರಿನ ಹಾಗೂ ಪರ ಊರಿನ
ಭಕ್ತಾದಿಗಳಿಗೆ ಪ್ರಸಾದ ವಿತರಣೆ ಹಾಗೂ ಅನ್ನ ಪ್ರಸಾದ ನಿರಂತರವಾಗಿ ವಿತರಣೆಯಾಯಿತು.
ಕ್ಷೇತ್ರದ ಅನುವಂಶಿಕ ಆಡಳ್ತೆದಾರ ಬಿ.ಕೆ.ಧರ್ಮಪಾಲ ಶೇಣಿ ಸರ್ವರನ್ನೂ ಸ್ವಾಗತಿಸಿದರು.
ದೈವದ ಪೂಜಾರಿಗಳಾದ ಹೊನ್ನಪ್ಪ ಪೂಜಾರಿ, ಕೋಟಿ ಪೂಜಾರಿ, ತಿಮ್ಮಪ್ಪ ಪೂಜಾರಿ, ಶೇಖರ ಪೂಜಾರಿ ಯವರು ಸೇವೆಯಲ್ಲಿ ಪಾಲ್ಗೊಂಡರು.
ಸ್ಥಳೀಯ ಸಂಘಟನೆಯ ಯುವಕರು ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸಿದರು. ಗರಡಿಗೆ ಆಗಮಿಸುವ ಪ್ರವೇಶದಲ್ಲಿ ಸ್ವಾಗತ ದ್ವಾರ ಹಾಗೂ ಕೇಸರಿ ಬಂಟಿಂಗ್ಸ್ ಹಾಗೂ ವಿದ್ಯುದೀಪಗಳಿಂದ ಶೃಂಗರಿಸಲಾಗಿತ್ತು. ಗರಡಿಯ ಎದುರಿನ ವಿಶಾಲವಾದ ಮೈದಾನದಲ್ಲಿ ದೈವದ ನೇಮವನ್ನು ವೀಕ್ಷಿಸಲು ಅಚ್ಚು ಕಟ್ಟಾದ ವ್ಯವಸ್ಥೆಯನ್ನು ಮಾಡಲಾಗಿತ್ತು.