ಬೆಳ್ಳಾರೆ, ಗೌರಿಪುರಂ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಷಡಾಧಾರ ಪ್ರತಿಷ್ಠೆ

0

ಅಂತಃಕರಣ ಶುದ್ಧಿಯಿಂದ ದೇವಸ್ಥಾನ ಪ್ರವೇಶ ಮಾಡಿ ದೇವಸ್ಥಾನದ ಪರಿಸರ ಶುದ್ಧಿಯಾಗುತ್ತದೆ : ಮಾಣಿಲ ಸ್ವಾಮೀಜಿ

ಅನ್ಯ ಕ್ಷೇತ್ರದಲ್ಲಿ ಮಾಡಿದ ಪಾಪ ಕಳೆಯಲು ಪುಣ್ಯಕ್ಷೇತ್ರಕ್ಕೆ ಬರುತ್ತೇವೆ. ಪುಣ್ಯಕ್ಷೇತ್ರದಲ್ಲಿ ಪಾಪ ಮಾಡಬಾರದು. ದ್ವೇಷ, ವಿರೋಧಗಳನ್ನು ಬದಿಗಿಟ್ಟು ಒಗ್ಗಟ್ಟಿನಿಂದ ಪ್ರೀತಿ ಬಾಂಧವ್ಯದಿಂದ ಎಲ್ಲರೂ ನಮ್ಮವರೇ ಎಂಬ ಭಾವನೆಯಿಂದ, ಶುದ್ಧ ಮನಸ್ಸಿನಿಂದ ವರ್ತಿಸಬೇಕು. ಅಂತಃಕರಣ ಶುದ್ಧಿಯಿಂದ ದೇವಸ್ಥಾನ ಪ್ರವೇಶಿಸಿದರೆ ಪರಿಸರ ಶುದ್ಧಿಯಾಗುತ್ತದೆ ಎಂದು ಶ್ರೀಧಾಮ ಮಾಣಿಲದ ಮೋಹನದಾಸ ಪರಮಹಂಸ ಸ್ವಾಮೀಜಿ ತಮ್ಮ ಆಶೀರ್ವಚನದಲ್ಲಿ ಹೇಳಿದರು.

ಅವರು ಫೆ. 20-21ರಂದು ಬೆಳ್ಳಾರೆಯ ಗೌರಿಪುರಂನ ಶ್ರೀ ರಾಜರಾಜೇಶ್ವರಿ ಕ್ಷೇತ್ರದಲ್ಲಿ ನಡೆದ ಷಡಾಧಾರ ಪ್ರತಿಷ್ಠಾ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಆಡಳಿತ ಮಂಡಳಿ ಅಧ್ಯಕ್ಷ ಚಂದ್ರಹಾಸ ಮಣಿಯಾಣಿಯವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ರಾಜ್ಯ ಧಾರ್ಮಿಕ ಪರಿಷತ್‌ ಸದಸ್ಯೆ ಶ್ರೀಮತಿ ಮಲ್ಲಿಕಾ ಪಕ್ಕಳ ಮಲಾರ್ ಬೀಡು ಅತಿಥಿಯಾಗಿ ಭಾಗವಹಿಸಿದ್ದರು.

ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಾಲಯದ ಉತ್ಸವ ಸಮಿತಿ ಅಧ್ಯಕ್ಷ ಡಾ. ದೇವಿಪ್ರಸಾದ್ ಕಾನತ್ತೂರು, ಕೇರ್ಪಡ ಶ್ರೀ ಮಹಿಷ ಮರ್ಧಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಸಂತ ನಡುಬೈಲು, ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಸೇವಾ ಸಮಿತಿಯ ವಿಶ್ವಸ್ಥರಾದ ಎನ್. ವಿಶ್ವನಾಥ ರೈ ಕಳಂಜ‌, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ನಾಯಕ್ ಪೊಸವಳಿಗೆ, ಮಾತೃ ಮಂಡಳಿ ಅಧ್ಯಕ್ಷೆ ಶ್ರೀಮತಿ ಸುಮಾ ವಿ ಆಚಾರ್ ವೇದಿಕೆಯಲ್ಲಿ ಗೌರವ ಉಪಸ್ಥಿತರಾಗಿದ್ದರು. ಆಡಳಿತ ಸಮಿತಿ ಕಾರ್ಯದರ್ಶಿ ಕುಶಾಲಪ್ಪ ಗೌಡ ಬಿ ಮಣಿಮಜಲು, ಕೋಶಾಧಿಕಾರಿ ಆನಂದ ಗೌಡ ಪಡ್ಪು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಆರ್.ಕೆ. ಭಟ್ ಕುರುಂಬುಡೇಲು ಸ್ವಾಗತಿಸಿ ಜೀರ್ಣೋದ್ಧಾರ ಸಮಿತಿ ಕೋಶಾಧಿಕಾರಿ ಮೋಹನ ಗೌಡ ಇಡ್ಯಡ್ಕ ವಂದಿಸಿದರು. ನಿವೃತ್ತ ಮುಖ್ಯೋಪಾಧ್ಯಾಯರಾದ ಅಚ್ಚುತ ಅಟ್ಲೂರು ಕಾರ್ಯಕ್ರಮ ನಿರೂಪಿಸಿದರು. ಕು. ಕೇತನಾ ಮತ್ತು ಕು. ಶಿವಾನಿ ಪ್ರಾರ್ಥಿಸಿದರು.


ಫೆ. 20ರಂದು ಸಂಜೆ ವಿವಿಧ ವೈದಿಕ ಕಾರ್ಯಗಳು, ದುರ್ಗಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು. ಫೆ. 21ರಂದು ಬೆಳಿಗ್ಗೆ ವಿವಿಧ ವೈದಿಕ ಕಾರ್ಯಗಳು, ಮಧ್ಯಾಹ್ನ 12.21ರಿಂದ 1.39ರ ಶುಭ‌ ಮುಹೂರ್ತದಲ್ಲಿ ಷಡಾಧಾರ ಪ್ರತಿಷ್ಠಾದಿಗಳು ಹಾಗೂ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಮನು ತೊಂಡಚ್ಚನ್ ರವರ ನಿರ್ಮಾಣ ಮಾಡಿದ, ರಕ್ಷಿತ್ ಮಂಚಿಕಟ್ಟೆ ಸಾಹಿತ್ಯ, ನಿರ್ದೇಶನ ಮಾಡಿದ, ಚೇತನ್ ಚಳ್ಳಕೋಡಿ ಪಂಜ ಛಾಯಾಗ್ರಹಣ ಮತ್ತು ಸಂಕಲನ ಮಾಡಿದ ಗೌರಿಪುರಂ ಶ್ರೀ ರಾಜರಾಜೇಶ್ವರಿ ದೇವಿಯ ಬಗ್ಗೆ ಹಾಡಿದ ಭಕ್ತಿಗೀತೆಯ ಧ್ವನಿ ಸುರುಳಿಯನ್ನು ಸ್ವಾಮೀಜಿಯವರು ಬಿಡುಗಡೆಗೊಳಿಸಿದರು.