ಭಾವನಾತ್ಮಕವಾಗಿ ಜನರನ್ನು ಯಾಮಾರಿಸಿದ್ದೇ ಬಿ.ಜೆ.ಪಿ. ಸಾಧನೆ

0

ಕ್ಷೇತ್ರದ ಸಮಸ್ಯೆಗಳೇ ನನಗೆ ಎದುರಾಳಿ: ಕಾಂಗ್ರೆಸ್ ಗೆಲುವು ನಿಶ್ಚಿತ

ಸುದ್ದಿ ಸಂದರ್ಶನದಲ್ಲಿ ಅಭ್ಯರ್ಥಿ ಪದ್ಮರಾಜ್ ರಾಮಯ್ಯ ಹೇಳಿಕೆ

ಈ ಲೋಕಸಭಾ ಕ್ಷೇತ್ರದಲ್ಲಿ ನಾಲ್ಕು ದಶಕದಲ್ಲಿ ಕಾಂಗ್ರೆಸ್ ಸಂಸದರು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಆ ಬಳಿಕ ಬಂದ ಬಿಜೆಪಿ ಸಂಸದರು ಮಾಡಿಲ್ಲ. ಕೇವಲ ಭಾವನಾತ್ಮಕವಾಗಿ ಜನರನ್ನು ಯಾಮಾರಿಸಿದ್ದೇ ಬಿಜೆಪಿ ಮಾಡಿದ ಸಾಧನೆ. ಇದನ್ನು ಕ್ಷೇತ್ರದ ಜನ ಅರ್ಥಮಾಡಿಕೊಂಡಿದ್ದಾರೆ. ಹಾಗಾಗಿ ಮತ್ತೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ದ.ಕ. ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ರಾಮಯ್ಯ ಹೇಳಿದ್ದಾರೆ.

ಕಾಂಗ್ರೆಸ್‌ನ ಚುನಾವಣಾ ಕಚೇರಿ ಉದ್ಘಾಟನೆ ಮತ್ತು ಚುನಾವಣಾ ಪ್ರಚಾರ ಕಾರ್ಯಕ್ರಮಗಳಿಗಾಗಿ ಸುಳ್ಯಕ್ಕೆ ಭೇಟಿ ನೀಡಿದ್ದ ಅವರು ಸುದ್ದಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಈ ಹೇಳಿಕೆ ನೀಡಿದರು.

ಈ ಕ್ಷೇತ್ರದಲ್ಲಿ ಸುಮಾರು 33 ವರ್ಷಗಳಿಂದ ಬಿಜೆಪಿ ಎಂಪಿಗಳಿದ್ದಾರೆ ನಿಜ. ಆದರೆ ಅದಕ್ಕಿಂತಲೂ ಮೊದಲು ನಾಲ್ಕು ದಶಕಗಳ ಕಾಲ ಇಲ್ಲಿ ಕಾಂಗ್ರೆಸ್ ಎಂಪಿಗಳಿದ್ದರು. ಈ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳು, ಅನುಷ್ಠಾನಗೊಂಡಿರುವ ಯೋಜನೆಗಳು ಕಾಂಗ್ರೆಸ್ ಎಂಪಿಗಳ ಕಾಲದಲ್ಲಿ ಆದದ್ದು ಎಂದು ಧರ್ಮರಾಜ್ ಹೇಳಿದರು.

ಬಿಜೆಪಿ ಕೇವಲ ಅಧಿಕಾರದ ಆಸೆಗಾಗಿ ಅಧರ್ಮದ ರಾಜಕಾರಣ ಮಾಡಿತು. ಧರ್ಮ, ಜಾತಿಗಳ ನಡುವೆ ವಿಷಬೀಜ ಬಿತ್ತುವ ಕಾರ್ಯ ಮಾಡಿತು. ಭಾವನಾತ್ಮಕವಾಗಿ ಜನರನ್ನು ಯಾಮಾರಿಸಿತು. ಅಪಪ್ರಚಾರದ ಮೂಲಕ ಅಧಿಕಾರ ಹಿಡಿಯಿತು. ಈ ಬಾರಿ ಕಾಂಗ್ರೆಸ್ ಮತ್ತೆ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಮೂಲಕ ಸಾಮರಸ್ಯದ ಗತವೈಭವವನ್ನು ಮರಳಿ ತರುತ್ತದೆ ಎಂದು ಪದ್ಮರಾಜ್ ಹೇಳಿದರು.

ನಾನು ಮಾನವ ಧರ್ಮದಲ್ಲಿ ನಂಬಿಕೆ ಇಟ್ಟವ. ಜಾತಿಯಲ್ಲಿ ಬಿಲ್ಲವನಾಗಿರಬಹುದು. ಹಿಂದೂ ಧರ್ಮದವನೆಂಬ ಹೆಮ್ಮೆಯಿದೆ. ಬಿಲ್ಲವ ಜಾತಿಗೆ ನಾನು ಸೀಮಿತನಾದವನಲ್ಲ ಎಂದ ಅವರು 33 ವರ್ಷಗಳ ಕಾಲ ಈ ಕ್ಷೇತ್ರದಿಂದ ಗೆಲುವು ಸಾಧಿಸಿದ ಬಿಜೆಪಿ ಸಂಸದರು ಯಾವ ಸಾಧನೆಯನ್ನೂ ಮಾಡಿಲ್ಲ. ಆದರೆ ಈಗಿನ ರಾಜ್ಯ ಸರ್ಕಾರ ನುಡಿದಂತೆ ನಡೆದು ಜನರ ಕಣ್ಣೀರು ಒರೆಸಿದೆ. ಇದನ್ನೇ ಮುಂದಿಟ್ಟು ಮತಯಾಚನೆ ಮಾಡುತ್ತೇವೆ ಎಂದು ಹೇಳಿದರು.

ನಾನು ಯಾವುದೇ ಅಲೆಯ ಬಗ್ಗೆಯಾಗಲೀ , ಅಭ್ಯರ್ಥಿಯ ಬಗ್ಗೆಯಾಗಲೀ ಭಯ ಪಡುವುದಿಲ್ಲ. ನರೇಂದ್ರ ಮೋದಿಯವರ ಬಗ್ಗೆ ಗೌರವವಿದೆ. ಆದರೆ ಅವರು ಕಳೆದ 10 ವರ್ಷಗಳಲ್ಲಿ ಏನೆಲ್ಲ ಭರವಸೆ ನೀಡಿದ್ದಾರೆ? ಯಾವುದನ್ನೆಲ್ಲಾ ಈಡೇರಿಸಿದ್ದಾರೆ ಎನ್ನುವುದು ಜನರಿಗೆ ಗೊತ್ತಿದೆ. ಈ ಕ್ಷೇತ್ರದ ಜ್ವಲಂತ ಸಮಸ್ಯೆಗಳೇ ನನ್ನ ಎದುರಾಳಿ ಎಂದವರು ಹೇಳಿದರು.

ಬಿಜೆಪಿಯವರು ಸೋಲುವ ಭೀತಿಯಿಂದ ಅಪಪ್ರಚಾರದಲ್ಲಿ ತೊಡಗಿದ್ದಾರೆ. ನಾನು ಭಾಷಣವೊಂದರಲ್ಲಿ ” ದಕ್ಷಿಣ ಕನ್ನಡ ಜಿಲ್ಲೆ ಹಿಂದುತ್ವದ ಭದ್ರ ಕೋಟೆಯೇನಲ್ಲ ” ಎಂದು ಬಾಯಿತಪ್ಪಿ ಹೇಳಿದ್ದೆ. ಬಿಜೆಪಿ ಭದ್ರಕೋಟೆಯೇನಲ್ಲ ಎಂದು ಹೇಳಬೇಕಿತ್ತು. ನನ್ನ ಭಾಷಣ ಪೂರ್ತಿ ಕೇಳಿದರೆ ಇದು ಅರ್ಥವಾದೀತು. ಆದರೆ ಬಿಜೆಪಿಯವರು ಈ ವಿಚಾರದಲ್ಲಿ ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಪದ್ಮರಾಜ್ ಹೇಳಿದರು.

ಲಂಚ, ಭ್ರಷ್ಟಾಚಾರಕ್ಕೆ ನಾನು ಯಾವತ್ತೂ ವಿರೋಧಿ. ಜನಾರ್ಧನ ಪೂಜಾರಿ ನನ್ನ ರಾಜಕೀಯ ಗುರುಗಳು. ಅವರ ಭ್ರಷ್ಟಾಚಾರ ರಹಿತ ನಡುವಳಿಕೆಯಿಂದಲೇ ಇಡೀ ರಾಷ್ಟ್ರದಲ್ಲಿ ಅವರಿಗೆ ಗೌರವ ಬಂದಿದೆ. ಇದೇ ಮಾರ್ಗವನ್ನು ನಾನೂ ಅನುಸರಿಸುತ್ತೇನೆ. ಭ್ರಷ್ಟಾಚಾರ ಪದ್ಮರಾಜ್ ಮಾಡಿದರೂ ಸಹಿಸುವುದಿಲ್ಲ, ಪದ್ಮರಾಜ್ ಅಪ್ಪ ಮಾಡಿದರೂ ಸಹಿಸುವುದಿಲ್ಲ ಎಂದವರು ಹೇಳಿದರು.

ಕಾಂಗ್ರೆಸ್ ಯಾವತ್ತೂ ಸಾಮಾಜಿಕ ನ್ಯಾಯದ ಪರವಾಗಿ ಇದೆ. ಸುಳ್ಯದ ಮೀಸಲಾತಿ ಬದಲಾವಣೆ ವಿಚಾರ ಆಡಳಿತಾತ್ಮಕ ವಿಚಾರ. ಈ ಕ್ಷೇತ್ರದಿಂದ ಮೀಸಲಾತಿ ರೊಟೇಶನ್ ಆಗುವುದು ಈ ಭಾಗದ ಜನರ ಬಯಕೆ ಎನ್ನುವುದು ಗೊತ್ತಿದೆ. ಅದಕ್ಕಾಗಿ ಯೋಚಿಸಿ ಕಾರ್ಯಪ್ರವತ್ತನಾಗುತ್ತೇನೆ ಎಂದು ಪದ್ಮರಾಜ್ ಹೇಳಿದರು.