ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಪ್ರೊ.ಎಲ್.ಎಸ್. ಶೇಷಗಿರಿ ರಾವ್ ಜನ್ಮ ಶತಮಾನೋತ್ಸವ ಮತ್ತು ವಿದ್ಯಾನಿಧಿ ಸ್ಥಾಪನೆ

0

ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ದ
ಎ.6ರಂದು ಪ್ರೊಫೆಸರ್ ಎಲ್.ಎಸ್.ಶೇಷಗಿರಿ ರಾವ್ ಜನ್ಮ ಶತಮಾನೋತ್ಸವ ಮತ್ತು ವಿದ್ಯಾನಿಧಿ ಸ್ಥಾಪನೆ ಕಾರ್ಯಕ್ರಮವು ನಡೆಯಿತು.


ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಾಕ್ಟರ್ ವೀಣಾ. ಎನ್. ರವರು “ಕನ್ನಡ ನಮ್ಮ ಭಾಷೆ. ಚಿಂತನೆಗಳನ್ನು ರೂಪಿಸಿದ ಭಾಷೆ. ಕನ್ನಡವನ್ನು ಉಳಿಸಿ ಬೆಳೆಸಲು ಮಕ್ಕಳಲ್ಲಿ ಕನ್ನಡ ಭಾಷೆ ಬೆಳೆಯಬೇಕು. ಎಲ್.ಎಸ್.ಎಸ್. ರವರು ಕರ್ನಾಟಕದಲ್ಲಿ ಜನಿಸಿದ್ದು ನಮ್ಮ ಪುಣ್ಯ. ಕನ್ನಡ ಸಾಹಿತ್ಯ ಲೋಕಕ್ಕೆ ಇವರ ಕೊಡುಗೆ ಅಪಾರ. ಕನ್ನಡದ ಉಳಿವಿಗಾಗಿ ಎಲ್ಲಾ ಕನ್ನಡದ ಮನಸ್ಸು ಒಗ್ಗೂಡಬೇಕು. ” ಎಂದು ಹೇಳಿದರು.

ಎಲ್. ಎಸ್. ಎಸ್. ರವರ ಧರ್ಮಪತ್ನಿ ಶ್ರೀಮತಿ ಭಾರತಿಯವರು ಎಲ್.ಎಸ್.ಎಸ್. ರವರ ಹೆಸರಿನಲ್ಲಿ ಸ್ಥಾಪಿಸಿದ ಐದು ಲಕ್ಷ ರೂಪಾಯಿ ಮೊತ್ತದ ದತ್ತಿನಿಧಿಯನ್ನು ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಿಗೆ ಕೃತಜ್ಞತೆ ಯೊಂದಿಗೆ ಹಸ್ತಾಂತರಿಸಿದರು.

ಸ್ನೇಹ ಶಿಕ್ಷಣ ಸಂಸ್ಥೆಯ ವತಿಯಿಂದ ಅವರನ್ನು ಸನ್ಮಾನಿಸಲಾಯಿತು.
ಎಲ್. ಎಸ್. ಶೇಷಗಿರಿ ರಾಯರ ಸಾಹಿತ್ಯಕ ಕೊಡುಗೆಗಳ ಬಗ್ಗೆ ಸಾಹಿತಿ, ಶಿಕ್ಷಣ ತಜ್ಞರಾಗಿರುವ ಶ್ರೀ ಅರವಿಂದ ಚೊಕ್ಕಾಡಿಯವರು ಮಾತಾಡಿದರು. ಎಲ್.ಎಸ್.ಎಸ್ ರವರು ಶ್ರೇಷ್ಠ ಕಥೆಗಾರ, ಸಾಹಿತಿ ಹಾಗೂ ವಿಮರ್ಶಕ ಎಂಬುದಾಗಿ ಅವರ ಸಾಹಿತ್ಯ ಕೃತಿಗಳನ್ನು ಉಲ್ಲೆಖಿಸಿ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ ರಾ.ನಂ. ಚಂದ್ರಶೇಖರ್ ಅವರು “ಆಧುನಿಕ ಸಾಹಿತ್ಯ ಪ್ರಕಾರದ ಪ್ರಾಚಾರ್ಯರಲ್ಲಿ ಒಬ್ಬರಾದ ಎಲ್.ಎಸ್. ಶೇಷಗಿರಿ ರಾವ್ ರವರು 19ನೇ ವರ್ಷದಲ್ಲಿ ಇಂಗ್ಲಿಷ್ ನಲ್ಲಿ ರ್‍ಯಾಂಕ್ ನೊಂದಿಗೆ ಎಂ.ಎ. ಪಡೆದರು. ಅವರಿಗೆ ಮಕ್ಕಳೆಂದರೆ ಪ್ರೀತಿ.ದೇಶ ,ಭಾಷೆ ಉಳಿಯಲು ಯುವ ಜನಾಂಗ ಉಳಿಯಬೇಕು. ಎಲ್ಲ ವಿದ್ಯಾರ್ಥಿಗಳಿಗೆ ಶಿಕ್ಷಣ ದೊರಕಬೇಕು ಎಂಬುದು ಅವರ ಆಶಯವಾಗಿತ್ತು. ಇವರು ಅಧ್ಯಾಪಕರಾಗಿ ತಮ್ಮನ್ನು ತಾವು ಗುರುತಿಸಿಕೊಂಡವರು.

ಜ್ಞಾನಗಂಗೋತ್ರಿ ವಿಶ್ವಕೋಶದ ಸಂಪಾದಕರಾಗಿದ್ದರು. ಸಾಮಾನ್ಯ ಜನರಿಗೆ ಯಾವ ಭಾಷೆಯಲ್ಲಿ ಅರ್ಥವಾಗುತ್ತದೆ ಎಂದು ತಿಳಿದುಕೊಂಡು ಸಾಹಿತ್ಯವನ್ನು ಬರೆಯುತ್ತಿದ್ದರು. ಕನ್ನಡದ ಶ್ರೇಷ್ಠತೆಯನ್ನು ಇಂಗ್ಲೀಷಿಗೆ ಪರಿಚಯಿಸಿದವರು ಎಲ್.ಎಸ್.ಎಸ್. ರವರು. ಈ ಕಾರ್ಯಕ್ರಮವನ್ನು ಆಯೋಜಿಸಿದ ಸ್ನೇಹ ಶಿಕ್ಷಣ ಸಂಸ್ಥೆಗೆ ಕೃತಜ್ಞತೆಗಳು.” ಎಂದು ಹೇಳಿದರು.


ಆರಂಭದಲ್ಲಿ ಸಂಸ್ಥೆಯ ವಿದ್ಯಾರ್ಥಿನಿಯರಿಂದ ಪ್ರಾರ್ಥನೆಯಾದ ಬಳಿಕ ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆ ಅವರು ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಸಂಸ್ಥೆಯ ಮುಖ್ಯೋಪಾಧ್ಯಾಯನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ ವಂದಿಸಿದರು. ಶಿಕ್ಷಕಿ ಶ್ರೀಮತಿ ಸವಿತಾ.ಎಂ. ಹಾಗೂ ದೇವಿಪ್ರಸಾದ್.ಜಿ.ಸಿ. ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.