ಸುಳ್ಯ ನಗರ ಟ್ರಾಫಿಕ್ ಸಮಸ್ಯೆ ನಿವಾರಿಸುವ ಬಗ್ಗೆ ಸುಳ್ಯ ವರ್ತಕ ಸಂಘದೊಂದಿಗೆ ಪೋಲಿಸರ ಸಭೆ ಸಮಾಲೋಚನೆ

0

ಬಕ್ರೀದ್ ಹಬ್ಬದ ಹಿನ್ನಲೆಯಲ್ಲಿ ಶಾಂತಿ ಸಭೆ

ಇತ್ತೀಚಿನ ದಿನಗಳಲ್ಲಿ ಸುಳ್ಯ ನಗರದ ಮುಖ್ಯ ರಸ್ತೆಯಲ್ಲಿ ವಾಹನ ದಟ್ಟನೆ ಹೆಚ್ಚಾಹುತ್ತಿದ್ದು ಈ ಬಗ್ಗೆ ಟ್ರಾಫಿಕ್ ಸಮಸ್ಯೆಯನ್ನು ನಿವಾರಿಸುವ ಕುರಿತು ಸುಳ್ಯ ಪೋಲಿಸ್ ಠಾಣೆಯಲ್ಲಿ ಉಪನಿರೀಕ್ಷಕರಾದ ಸರಸ್ವತಿಯವರ ನೇತೃತ್ವದಲ್ಲಿ ಸುಳ್ಯ ವರ್ತಕಕರ ಸಂಘದ ಪದಾಧಿಕಾರಿಗಳ ಮತ್ತು ಸದಸ್ಯರ ಸಮಾಲೋಚನಾ ಸಭೆ ಜೂ.13 ರಂದು ನಡೆಯಿತು. ಸಭೆಯಲ್ಲಿ ಮುಖ್ಯ ರಸ್ತೆಯ ಬದಿಗಳಲ್ಲಿ ವಾಹನಗಳನ್ನು ಕ್ರಮ ಪ್ರಕಾರವಾಗಿ ಪಾರ್ಕ್ ಮಾಡುವ ಕುರಿತು ಮತ್ತು ಸ್ಥಳೀಯ ವ್ಯಾಪಾರ ಸಂಸ್ಥೆಗಳು ನೋ ಪಾರ್ಕಿಂಗ್ ಫಲಕ ಅಳವಡಿಸುವ ಕುರಿತು, ಸಿಸಿ ಕ್ಯಾಮರಾಗಳನ್ನು ಅಳವಡಿಸುವ ಬಗ್ಗೆ ಅಪಘಾತ ಹಾಗೂ ಇನ್ನಿತರ ಘಟನೆಗಳು ನಡೆದಾಗ ಸಂಬಂಧಪಟ್ಟವರು ಠಾಣೆಗೆ ಮಾಹಿತಿ ನೀಡುವ ಕುರಿತು ಸುಧೀರ್ಘ ಚರ್ಚೆಗಳು ನಡೆಯಿತು. ಈ ಸಂದರ್ಭದಲ್ಲಿ ಸಭೆಯಲ್ಲಿ ಭಾಗವಹಿಸಿದ್ದ ವರ್ತಕ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ್ ರೈ ಸುಳ್ಯದ ಪ್ರತಿಯೊಂದು ಸಂಸ್ಥೆಯ ಮಾಲಕರು ಪೋಲಿಸ್ ಇಲಾಖೆಯೊಂದಿಗೆ ಮೊದಲಿನಿಂದಲೇ ಸಹಕಾರ ನೀಡುತ್ತಾ ಬರುತ್ತಿದ್ದು, ಇಲಾಖೆಯ ವತಿಯಿಂದಲೂ ಕೂಡ ನಗರದ ಮುಖ್ಯ ಪೇಟೆಯಲ್ಲಿ ಹೊರಭಾಗದಿಂದ ಬರುವ ವಾಹನ ಸವಾರರಿಗೆ ಜಾಗೃತಿ ಮೂಡಿಸಲು ಕೆಲವು ಕಡೆಗಳಲ್ಲಿ ನೋ ಪಾರ್ಕಿಂಗ್ ಬೋರ್ಡ್ ಅನ್ನು ಅಳವಡಿಸಬೇಕಾಗಿದೆ.

ಅಲ್ಲದೆ ಸುಳ್ಯ ಅಟೋ ಚಾಲಕರಿಗೆ ಮುಖ್ಯ ರಸ್ತೆಯಲ್ಲಿ ಅಟೋ ಪಾರ್ಕ್ ಮಾಡುವ ಸಂದರ್ಭ ನಿಯಮಿತವಾಗಿ ರಸ್ತೆಯನ್ನು ಬಳಸಿಕೊಂಡು ಇತರ ವಾಹನ ಸವಾರರಿಗೆ ಸಮಸ್ಯೆ ಆಗದ ರೀತಿಯಲ್ಲಿ ವಾಹನ ದಟ್ಟನೆ ಉಂಟಾಗದಂತೆ ನೋಡಿಕೊಳ್ಳಲು ಕೇಳಿಕೊಳ್ಳುವಂತೆ ತಮ್ಮ ಅಭಿಪ್ರಾಯವನ್ನು ತಿಳಿಸಿದರು. ಸಭೆಯಲ್ಲಿ ಉಪಸ್ಥಿತರಿದ್ದ ಸಂಘದ ಪ್ರಧಾನ ಕಾರ್ಯದರ್ಶಿ ಡಿ.ಎಸ್.ಗಿರೀಶ್ ಹಾಗೂ ಉಪಾಧ್ಯಕ್ಷ ಸಿ.ಎ.ಗಣೇಶ್ ಭಟ್ ರವರು ಕೂಡ ತಮ್ಮ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಬಳಿಕ ಸಂಘದ ಪದಾಧಿಕಾರಿಗಳು ನೀಡಿದ ಸಲಹೆಸೂಚನೆಗಳನ್ನು ಹಾಗೂ ಸುಳ್ಯ ನಗರ ಪಂಚಾಯತ್ ಕಛೇರಿಯ ಮೂಲಕ ಸಿಗಬೇಕಾದ ಸಹಕಾರದ ಕುರಿತು ಚರ್ಚೆಗಳು ನಡೆದು ನಗರ ಪಂಚಾಯತ್ ಆಡಳಿತಾಧಿಕಾರಿ ತಹಶೀಲ್ದಾರ್‌ರವರ ಗಮನಕ್ಕೆ ನೀಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು. ನಗರ ಪಂಚಾಯತ್ ಸದಸ್ಯ ಕೆ.ಎಸ್ ಉಮ್ಮರ್ ಮಾತನಾಡಿ ಪಂಚಾಯತ್ ವತಿಯಿಂದ ಬೇಕಾದ ಸಹಕಾರದ ಕುರಿತು ಮುಖ್ಯ ಅಧಿಕಾರಿಗಳೊಂದಿಗೆ ಮಾತನಾಡಿ ಸಂಪೂರ್ಣ ಸಹಕಾರ ನೀಡುವ ಬಗ್ಗೆ ಭರವಸೆಯನ್ನು ನೀಡಿದರು.

ಬಕ್ರೀದ್ ಹಬ್ಬದ ಹಿನ್ನಲೆಯಲ್ಲಿ ಶಾಂತಿ ಸಭೆ

ಸುಳ್ಯ ತಾಲೂಕಿನಾದ್ಯಂತ ಜೂ.17ರಂದು ಮುಸಲ್ಮಾನರ ಬಕ್ರೀದ್ ಹಬ್ಬ ನಡೆಯಲಿದ್ದು ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಶಾಂತಿ ಕಾಪಾಡಿಕೊಳ್ಳಲು ಎಸ್.ಐ ಸರಸ್ವತಿ ಮುಖಂಡರೊಂದಿಗೆ ಮಾತು ಕತೆ ನಡೆಸಿದರು. ಈ ವೇಳೆ ಮಾತನಾಡಿದ ಅವರು ಸುಳ್ಯ ಶಾಂತಿಯುತ ಪ್ರದೇಶವಾಗಿದ್ದು ಇಲ್ಲಿ ಎಲ್ಲರು ಪರಸ್ಪರ ಸೌಹಾರ್ದತೆಯಿಂದ ಇರುವುದು ಕಂಡುಬರುತ್ತಿದೆ. ಇದನ್ನು ಸುಳ್ಯದ ಜನತೆ ಕಾಪಾಡಿಕೊಂಡು ತಮ್ಮ ಪರಿಸರದಲ್ಲಿ ಯಾವುದೇ ಅಹಿತಕರ ಘಟನೆ ನಡೆದರೆ ಕೂಡಲೇ ಪೋಲಿಸ್ ಠಾಣೆಗೆ ಮಾಹಿತಿ ನೀಡಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತನ್ನಿ. ಅಲ್ಲದೇ ಸಾರ್ವಜನಿಕರೇ ಅದನ್ನು ಪ್ರಶ್ನಿಸಲು ಹೋದರೆ ಸಮಾಜದಲ್ಲಿ ಅಶಾಂತಿ ಉಂಟಾಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಆದ್ದರಿಂದ ಕಾನೂನನ್ನು ಯಾರು ಕೂಡ ಕೈಗೆತ್ತಿಕೊಳ್ಳದೆ ಹಬ್ಬ ಇನ್ನಿತರ ಕಾರ್ಯಕ್ರಮಗಳನ್ನು ಶಾಂತಿಯುತವಾಗಿ ನಡೆಸಿ ಸಮಾಜದಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಬೇಕೆಂದು ಮನವಿ ಮಾಡಿಕೊಂಡರು. ಈ ವೇಳೆ ಮಾತನಾಡಿದ ಕೆ.ಪಿ.ಸಿ.ಸಿ ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಎಂ.ಮುಸ್ತಫಾ ಜನತಾ “ಸುಳ್ಯ ತಾವು ಹೇಳಿದಂತೆ ಶಾಂತಿ ಸೌಹಾರ್ದತೆಗೆ ಆಧ್ಯತೆ ಕೊಡುವ ಪ್ರದೇಶವಾಗಿದ್ದು ಹಬ್ಬದ ದಿನಗಳಲ್ಲಿ ಇಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದ ನಿರ್ದಶನಗಳು ಇಲ್ಲ ಎಂದು ಹೇಳಿದರು.

ಇದಕ್ಕೆ ಧ್ವನಿಗೂಡಿಸಿದ ಕೆ.ಎಸ್.ಉಮ್ಮರ್ ಇದುವರೆಗೆ ಸುಳ್ಯದಲ್ಲಿ ಇರುವ ಯಾರೂ ಕೂಡ ಅಕ್ರಮ ಜಾನುವಾರು ಸಾಗಾಟ ಕೃತ್ಯಗಳಲ್ಲಿ ಭಾಗವಹಿಸಿಲ್ಲ ಹೊರ ಊರಿನಿಂದ ಜಾನುವಾರುಗಳನ್ನು ಸಾಗಾಟ ಮಾಡುವವರು ಸುಳ್ಯ ಭಾಗವಾಗಿ ಸಂಚರಿಸುವಾಗ ಅಂತವರನ್ನು ಹಿಡಿದ ಘಟನೆಗಳನ್ನು ಹೆಚ್ಚಾಗಿ ನಡೆದಿದೆ ಅಲ್ಲದೆ ರಸ್ತೆಯಲ್ಲಿ ಓಡಾಡುವ ಹೋರಿಗಳನ್ನು ಮುಂತಾದ ಸೀಮಿತ ಪ್ರದೇಶ ಮಾಡಿ ಅಲ್ಲಿ ಅವುಗಳನ್ನು ರಕ್ಷಿಸುವ ಕಾರ್ಯ ನಡೆಯಬೇಕಾಗಿದೆ ಎಂದು ಹೇಳಿದರು. ಸಭೆಯಲ್ಲಿ ಮೊರ್ಗಪಣೆ ಮಸೀದಿಯ ಪದಾಧಿಕಾರಿ ಸಿ.ಎಂ.ಉಸ್ಮಾನ್, ಝಿಯಾದ್ ಸುಳ್ಯ, ಎಂ.ಕೆ.ಹಮೀದ್, ಗೌತಮ್ ಭಟ್ ಹಳೆಗೇಟು, ಉನೈಸ್ ಜಟ್ಟಿಪಳ್ಳ ಮೊದಲಾದವರು ಭಾಗವಹಿಸಿದ್ದರು.