ದೇವರಹಳ್ಳಿ ಹೊಳೆಯಲ್ಲಿ ಹೂಳು ತುಂಬಿ ಸಮಸ್ಯೆ

0

ಯೇನೆಕಲ್ಲು, ಕಲ್ಲಾಜೆಯಲ್ಲಿ ಅಧಿಕಾರಿಗಳಿಂದ ಜಂಟಿ ಸ್ಥಳ ತನಿಖೆ

ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಯೇನೆಕಲ್ಲು ಗ್ರಾಮದ ದೇವರಹಳ್ಳಿ ಹೊಳೆಯಲ್ಲಿ ಹೂಳು ತುಂಬಿದ ಕಾರಣದಿಂದ ಮಳೆಗಾಲದಲ್ಲಿ ಜನ ವಸತಿ ಪ್ರದೇಶಕ್ಕೆ ನೆರೆ ನೀರು ನುಗ್ಗಿ ಸಮಸ್ಯೆಯಾಗುತ್ತಿರುವುದರಿಂದ ಪುತ್ತೂರು ಉಪವಿಭಾಗ ಸಹಾಯಕ ಆಯುಕ್ತರ ಸೂಚನೆಯಂತೆ ಅಧಿಕಾರಿಗಳು ಜಂಟಿಯಾಗಿ ಭೇಟಿ ನೀಡಿ ಜೂ.14 ರಂದು ಸ್ಥಳ ತನಿಖೆ ನಡೆಸಿದರು.

ಕಡಬ ಪ್ರಭಾರ ತಹಶೀಲ್ದಾರ್ ಖಜೂರೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಖೆಯ ಭೂ ವಿಜ್ಞಾನಿ ವಸೂದ ಅವರು ಯೇನೆಕಲ್ಲು ಗ್ರಾಮದ ಯೇನೆಕಲ್ಲು ದೇವಸ್ಥಾನದ ಜಳಕದ ಹೊಳೆ ಹಾಗೂ ದೇವರಹಳ್ಳಿ ಹೊಳೆಯ ಸಮಸ್ಯೆ ಸಂಭವಿಸುವ ಕಲ್ಲಾಜೆ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸ್ಥಳೀಯರಿಂದ ಮಾಹಿತಿ ಪಡೆದರು.

ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸದಸ್ಯ ದಿಲೀಪ್ ಕಲ್ಲಾಜೆ ಅವರು ಹೂಳಿನಿಂದಾಗುವ ಸಮಸ್ಯೆಯನ್ನು ಅಧಿಕಾರಿಗಳಿಗೆ ವಿವರಿಸಿ ದೇವರಹಳ್ಳಿ ಹೊಳೆಯಲ್ಲಿ ಬಾರೀ ಪ್ರಮಾಣದಲ್ಲಿ ಹೂಳು ತುಂಬಿರುವುದರಿಂದ ಮಳೆಗಾಲದ ಬಾರೀ ಮಳೆಗೆ ನೆರೆ ನೀರು ಸಮೀಪದ ಮನೆ, ತೋಟಕ್ಕೆ ನೀರು ನುಗ್ಗಿ ಸಮಸ್ಯೆ ಉಂಟು ಮಾಡುತ್ತಿದ್ದು, ಜನರು ಆತಂಕದಿಂದ ಬದುಕುತ್ತಿರುವುದು ಕಂಡು ಬಂದಿದೆ. ಕಳೆದ ಬಾರೀ ರಸ್ತೆಗೂ ನೀರು ನುಗ್ಗಿ ಸಮಸ್ಯೆ ಉಂಟಾಗಿದೆ. ಹೊಳೆಯಿಂದ ಉಂಟಾಗುವ ನೆರೆಯಿಂದ ಹಲವರು ಈ ವರೆಗೆ ನಷ್ಟ ಅನುಭವಿಸಿದ್ದಾರೆ, ಭೂಮಿ ಕಳೆದುಕೊಂಡಿದ್ದಾರೆ ಎಂದು ತಿಳಸಿದರು. ಸ್ಥಳದಲ್ಲಿದ್ದ ಸ್ಥಳೀಯರು ಹಾಗೂ ಸಾರ್ವಜನಿಕರು ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರು. ಸಮಸ್ಯೆ ಪರಿಹಾರದ ನಿಟ್ಟಿನಿಂದ ಹೊಳೆಯಲ್ಲಿ ಸಂಗ್ರಹಗೊಂಡಿರುವ ಹೂಳನ್ನು ಶೀಘ್ರವಾಗಿ ತೆರವು ಮಾಡುವಂತೆ ಹಾಗೂ ಇಲ್ಲಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವಂತೆ ಒತ್ತಾಯಿಸಿದರು.

ಹೂಳು ತೆರವಿಗೆ ಕ್ರಮಕ್ಕೆ ವರದಿ

ಸ್ಥಳಕ್ಕೆ ಬಂದ ಸಾರ್ವಜನಿಕರಿಗೆ ಉಂಟಾಗಿರುವ ಸಮಸ್ಯೆ ಬಗ್ಗೆ ಸ್ಥಳ ತನಿಖೆ ನಡೆಸಿದ್ದೇವೆ. ಸ್ಥಳೀಯರು ಇಲ್ಲಿನ ಸಮಸ್ಯೆ ಬಗ್ಗೆ ಮಾಹಿತಿ ನೀಡಿದ್ದು, ಹೂಳು ತೆರವಿಗೆ ಮನವಿ ಮಾಡುತ್ತಿದ್ದಾರೆ. ಇಲ್ಲಿನ ಸ್ಥಿತಿಗತಿ ಬಗ್ಗೆ ಹಾಗೂ ಹೂಳು ತೆರವು ಮಾಡಲು ಬೇಡಿಕೆ ಇರುವ ಬಗ್ಗೆ ನಾವು ವರದಿ ಸಲ್ಲಿಸುತ್ತೇವೆ. ಮುಂದೆ ಹೂಳು ತೆರವು ಮಾಡಲು ತಾಲೂಕು ಮರಳು ಸಮಿತಿ ಸಭೆಯಲ್ಲಿ ಇಟ್ಟು ನಿರ್ಧಾರ ಕೈಗೊಳ್ಳುತ್ತೇವೆ. ಹೂಳು ತೆರವಿಗೆ ಡಿಸಿ ಮತ್ತು ಶಾಸಕರ ಅನುದಾನ ಬಳಕೆ ಮಾಡಲು ಅನುಮತಿ ಪಡೆಯಲಾಗುವುದು ಎಂದು ಅಧಿಕಾರಿಗಳು ಮಾಧ್ಯಮದರಿಗೆ ಮಾಹಿತಿ ನೀಡಿದರು.

ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಜತಾ ಕಲ್ಲಾಜೆ, ಅರಣ್ಯ ಇಲಾಖೆಯ ಉಪವಲಯ ಅರಣ್ಯಾಧಿಕಾರಿ ಸಂತೋಷ್, ಅರಣ್ಯ ಇಲಾಖೆಯ ಧರ್ಣಪ್ಪ, ಗ್ರಾಮ ಪಂಚಾಯತ್ ಕಾರ್ಯದರ್ಶಿ ಮೋನಪ್ಪ ಸೇರಿದಂತೆ ಸ್ಥಳೀಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.