ಜಾಲ್ಸೂರು: ಕದಿಕಡ್ಕದಲ್ಲಿ ವಯೋವೃದ್ಧೆಯರಿಗೆ ತಾತ್ಕಾಲಿಕ ಮನೆಯ ನಿರ್ಮಾಣ

0

ಜಾಲ್ಸೂರು ಗ್ರಾಮದ ಕದಿಕಡ್ಕದಲ್ಲಿ ಸಂಕಷ್ಟದ ಬದುಕು ಸಾಗಿಸುತ್ತಿದ್ದ ಇಬ್ಬರು ವಯೋವೃದ್ಧೆಯರಿಗೆ ಪುತ್ತಿಲ ಪರಿವಾರ ಸಂಘಟನೆ ಹಾಗೂ ಟೀಂ ಸ್ಕಂದ ಅಡ್ಕಾರು ಸದಸ್ಯರು ಸೇರಿ ತಾತ್ಕಾಲಿಕ ಮನೆ ನಿರ್ಮಿಸಿಕೊಟ್ಟಿದ್ದು, ‘ಸುದ್ದಿ’ ಪತ್ರಿಕೆ ಹಾಗೂ ಚಾನೆಲ್ ನಲ್ಲಿ ವರದಿ ಪ್ರಸಾರವಾದ ಕೇವಲ ಎರಡು ವಾರಗಳಲ್ಲಿ ಮನೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ.

ಕದಿಕಡ್ಕದಲ್ಲಿ ಬೇಬಿ ಹಾಗೂ ಭಾರತಿ ಎಂಬ ಇಬ್ಬರು ವಯೋವೃದ್ಧೆಯರು ಕಳೆದ ಮೂವತ್ತೈದು ವರ್ಷಗಳಿಂದ ಟರ್ಪಲ್ ಹಾಸಿದ ಗುಡಿಸಲಿನಲ್ಲಿ ಜೀವನ ನಡೆಸುತ್ತಿದ್ದು, ಈ ಬಗ್ಗೆ ಸುದ್ದಿ ಪತ್ರಿಕೆಯಲ್ಲಿ ಹಾಗೂ ಚಾನೆಲ್ ನಲ್ಲಿ ಸಂಕ್ಷಿಪ್ತವಾದ ವರದಿ ಪ್ರಕಟಗೊಂಡಿತ್ತು.

ಕಳೆದ ಕೆಲ ದಿನಗಳ ಹಿಂದೆ ಪುತ್ತೂರು ಉಪ ವಿಭಾಗಾಧಿಕಾರಿ ಜುಬಿನ್ ಮೊಹಪಾತ್ರ ಅವರು ಸುಳ್ಯಕ್ಕೆ ಬಂದಿದ್ದ ವೇಳೆ ಕದಿಕಡ್ಕದ ಈ ಸ್ಥಳಕ್ಕೆ ಮತ್ತೊಮ್ಮೆ ಭೇಟಿ ನೀಡಿ ಸ್ಥಳೀಯ ಜಾಲ್ಸೂರು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳ ಜೊತೆ ಮಾತನಾಡಿ ಪ್ರಾಕೃತಿಕ ವಿಕೋಪದಡಿಯಲ್ಲಿ ತಾತ್ಕಾಲಿಕ ಮನೆ ನಿರ್ಮಾಣ ಮಾಡುವಂತೆ ತಿಳಿಸಿದ್ದರೆನ್ನಲಾಗಿದೆ.
ಸುಳ್ಯ ತಹಶಿಲ್ದಾರ್ ಮಂಜುನಾಥ್ ಅವರು ಕೂಡ ಸ್ಥಳಕ್ಕೆ ಭೇಟಿ ನೀಡಿ ತಾತ್ಕಾಲಿಕ ಶೆಡ್ ನಿರ್ಮಾಣ ಮಾಡುವಂತೆ ಗ್ರಾ.ಪಂ.ಗೆ ಸೂಚಿಸಿದರೆನ್ನಲಾಗಿದೆ.

ಇದನ್ನು ಗಮನಿಸಿದ ಪುತ್ತಿಲ ಪರಿವಾರ ಸಂಘಟನೆಯ ಮುಖಂಡ ದಿನೇಶ್ ಅಡ್ಕಾರು ಅವರು ಸ್ಥಳಕ್ಕೆ ಭೇಟಿ ನೀಡಿ ಅಡ್ಕಾರಿನ ಟೀಂ ಸ್ಕಂದ ಸದಸ್ಯರ ಸಹಕಾರದೊಂದಿಗೆ ಸಿಮೆಂಟ್ ಕಂಬ, ಕಬ್ಬಿಣದ ರಾಡ್, ಸಿಮೆಂಟ್ ಶೀಟ್ ಮತ್ತು ಸಿಮೆಂಟ್ ಇಟ್ಟಿಗೆಯ ಮೂಲಕ ತಾತ್ಕಾಲಿಕವಾಗಿ ಜೂ.30ರಂದು ಮನೆ ನಿರ್ಮಿಸಿಕೊಟ್ಟಿದ್ದಾರೆ.

ಮನೆ ನಿರ್ಮಾಣಕ್ಕೆ ಬೇಕಾದ ಸಿಮೆಂಟ್ ಇಟ್ಟಿಗೆಗಳನ್ನು ಶ್ರೀಪಾದ ಕನ್ಸಲ್ ಟೆನ್ಸ್ ನ ಮಾಲಕರಾದ ಶ್ಯಾಮ್ ಪ್ರಸಾದ್ ಅಡ್ಡಂತಡ್ಕ ಅವರು ದಾನರೂಪದಲ್ಲಿ ‌ನೀಡಿದ್ದು, ಉಳಿದ ಸಲಕರಣೆಗಳನ್ನು ಪುತ್ತಿಲ ಪರಿವಾರ ಸಂಘಟನೆ ವತಿಯಿಂದ ನೀಡಲಾಗಿದ್ದು, ಅಂದಾಜು ಹದಿನೈದು ಸಾವಿರ ರೂ. ವೆಚ್ಚದಲ್ಲಿ ತಾತ್ಕಾಲಿಕ ಮನೆ ನಿರ್ಮಾಣ ಮಾಡಿಕೊಡಲಾಗಿದೆ.

ದಿನೇಶ್ ಅಡ್ಕಾರು ಅವರ ನೇತೃತ್ವದಲ್ಲಿ ಪುತ್ತಿಲ ಪರಿವಾರ ವತಿಯಿಂದ ಅಡ್ಕಾರಿನ ಟೀಂ ಸ್ಕಂದ ತಂಡದ ಸದಸ್ಯರು ಈ ವಯೋವೃದ್ಧೆಯರಿಗೆ ಮನೆ ನಿರ್ಮಾಣಕ್ಕೆ ಮುಂದೆ ಬಂದ ಕಾರಣ ಗ್ರಾ.ಪಂ.ಗೆ ಸಹಕಾರವಾಗಿದ್ದು, ಪುತ್ತೂರು ಉಪ ವಿಭಾಗಾಧಿಕಾರಿಗಳ ಸೂಚನೆಯಂತೆ ಮನೆ ನಿರ್ಮಾಣ ಕಾರ್ಯ ಮಾಡಲಾಗಿದೆ.

ಈ ಸಂದರ್ಭದಲ್ಲಿ ಮಂಡೆಕೋಲು ಗ್ರಾ.ಪಂ. ಸದಸ್ಯ ಡಿ.ಸಿ. ಬಾಲಚಂದ್ರ ದೇವರಗುಂಡ, ಜಾಲ್ಸೂರು ಗ್ರಾ.ಪಂ. ಪ್ರಭಾರ ಅಭಿವೃದ್ಧಿ ಅಧಿಕಾರಿ ಚೆನ್ನಪ್ಪ ನಾಯ್ಕ, ಸಿಬ್ಬಂದಿಗಳಾದ ಚಿದಾನಂದ ದರ್ಖಾಸ್ತು, ಸದಸ್ಯರುಗಳಾದ ಕೆ.ಎಂ. ಬಾಬು ಕದಿಕಡ್ಕ, ಸಂದೀಪ್ ಪಿ.ಆರ್. ಕದಿಕಡ್ಕ, ಎನ್.ಎಂ. ಸತೀಶ್ ಕೆಮನಬಳ್ಳಿ, ಗ್ರಾಮ ಲೆಕ್ಕಾಧಿಕಾರಿ ಶಾಹಿನ, ಪುತ್ತಿಲ ಪರಿವಾರದ ದಿನೇಶ್ ಅಡ್ಕಾರು, ಸುಧಾಕರ ಬೆಳ್ಳೂರು, ಸ್ವಾತಿಕ್ ಅರಂತೋಡು, ಪಿಗ್ಮಿ ಪುಟ್ಟ, ನಿತ್ಯಾನಂದ, ಟೀಂ ಸ್ಕಂದ ತಂಡದ ಅಧ್ಯಕ್ಷ ತೀಕ್ಷಣ್ ಕೋನಡ್ಕಪದವು, ರಕ್ಷಿತ್, ತೀರ್ಥೇಶ್, ರಾಜೇಶ್, ಉದಯ, ಸಂದೇಶ್, ಸುಖೇಶ್ ಅಡ್ಕಾರುಪದವು, ಪ್ರವೀಣ್, ಸಂದೀಪ್, ಅಖಿಲೇಶ್, ನಿಕ್ಚಿತ್, ಯಶೋದರ, ರಕ್ಷಿತ್ ಅಡ್ಕಾರುಬೈಲು, ಜಯನ್, ಶ್ರೇಯಸ್ ಹಾಗೂ ಸ್ಥಳೀಯರಾದ ಸುಲೈಮಾನ್ ಕದಿಕಡ್ಕ ಉಪಸ್ಥಿತರಿದ್ದರು.


ದಿನೇಶ್ ಅಡ್ಕಾರು ಅವರು ಮಧ್ಯಾಹ್ನದ ಭೋಜನದ ವ್ಯವಸ್ಥೆ ಮಾಡಿಸಿ ಸಹಕರಿಸಿದರು.