ರಮಣೀಯ ತಾಣವಾಗಿರುವ ಕುರುಂಜಿಗುಡ್ಡೆ ಪಾರ್ಕ್ ನತ್ತ ಗಮನ ಹರಿಸುತ್ತಿಲ್ಲ ಸುಳ್ಯ‌ ನಗರ ಪಂಚಾಯತ್…!

0

ನಿರ್ವಹಣೆಗೆ ಯಾಕಿಷ್ಟು ವಿಳಂಬ…?

ಸುಳ್ಯದ ಜನರಿಗೆ ಉಪಯೋಗವಾಗಲೆಂದು ಸುಳ್ಯದ ನಗರ ಪಂಚಾಯತ್ 10 ಲಕ್ಷಕ್ಕೂ ಹೆಚ್ಚು ಅನುದಾನವನ್ನು ಬಳಸಿಕೊಂಡು ಕುರುಂಜಿಗುಡ್ಡೆಯಲ್ಲಿ ನಿರ್ಮಿಸಲಾಗಿದ್ದ ಪಾರ್ಕ್ ನಿರ್ವಹಣೆ ಇಲ್ಲದೆ ಸೊರಗಿದೆ.

ಪ್ರಕೃತಿಯ ರಮಣೀಯತೆ, ತೋಟಗಳ ಸೌಂದರ್ಯ ರಾಶಿ ಜತೆಗೆ ನಗರದ ವಿಹಂಗಮ ನೋಟ ಹೊಂದಿರುವ ಸುಳ್ಯ ನಗರದ ಅತೀ ಎತ್ತರದ ಕುರುಂಜಿಗುಡ್ಡೆಯಲ್ಲಿ ನಗರ ಪಂಚಾಯತ್ ಕೆಲ ವರ್ಷಗಳ ಹಿಂದೆ ಪಾರ್ಕ್ ನಿರ್ಮಾಣಕ್ಕೆ ಯೋಜನೆ ರೂಪಿಸಿತು.

ಸದಾ ಒತ್ತಡದಲ್ಲಿ ಇರುವ ಸುಳ್ಯದ ಜನರು ವಿಶ್ರಾಂತಿ, ಪ್ರಕೃತಿ ಸೌಂದರ್ಯ ಪಡೆಯಲು ನಾಲ್ಕು ಹೆಜ್ಜೆ ನಡೆದಾಡಲು ಒಂದು ಒಳ್ಳೆಯ ಉದ್ಯಾನವನ ಇಲ್ಲ ಎಂಬ ಕೊರಗು ಇಲ್ಲಿನ ಜನತೆಯನ್ನು ಕಾಡಿತ್ತು. ಹಲವು ವರ್ಷಗಳ ಯೋಜನೆ ಬಳಿಕ ಚೊಕ್ಕದಾದ ಉದ್ಯಾನವೊಂದು ಕುರುಂಜಿಗುಡ್ಡೆಯ ನೆತ್ತಿಯಲ್ಲಿ ತಲೆ ಎತ್ತಿತ್ತು. ಒಳಾಂಗಣ ಕ್ರೀಡಾಂಗಣದ ಮುಂಭಾಗದಲ್ಲಿ ಪಾರ್ಕ್ ನಿರ್ಮಿಸಲಾಗಿತ್ತು. ಅಲ್ಲಿ ಮರ ಗಿಡಗಳನ್ನು ನೆಟ್ಟು ಬೆಳೆಸಲಾಗಿದೆ.


ಹುಲ್ಲು ಹಾಸು ಹಾಕಲಾಗಿತ್ತು. ಪಾರ್ಕ್‌ ನಲ್ಲಿ ಕುಳಿತುಕೊಳ್ಳಲು ಬೆಂಚ್ ಗಳನ್ನು ನಿರ್ಮಿಸಲಾಗಿದೆ. ವಾಕಿಂಗ್ ಗೆ ಅನುಕೂಲವಾಗುವಂತೆ ಇಂಟರ್ ಲಾಕ್ ಅಳವಡಿಸಲಾಗಿದೆ. ಆದರೆ ವರ್ಷಗಳು ಉರುಳುವಂತೆ ಸುಳ್ಯ ನಗರ ಪಂಚಾಯತ್ ಅದರ ನಿರ್ವಹಣೆ ಮಾಡದೇ ಕೈ ಚೆಲ್ಲಿದಂತಿದೆ.

ಈಗ ಹೇಗಿದೆ ಪಾರ್ಕ್ !

ಕುರುಂಜಿಗುಡ್ಡೆಯ ಪಾರ್ಕ್ ನಿರ್ವಹಣೆ ಇಲ್ಲದೆ ಸಂಪೂರ್ಣ ಸೊರಗಿದೆ. ಹಣ ಕೊಟ್ಟು ತಂದು‌ ನೆಡಲಾಗಿರುವ ಗಿಡಗಳ ಮೈಂಟೆನೆನ್ಸ್ ಮಾಡದೇ ಕಾಡು ಬಳ್ಳಿಗಳು ಸುತ್ತಿಕೊಂಡಿವೆ. ಪಾರ್ಕ್ ನ ಹುಲ್ಲು ಹಾಸಿನಲ್ಲಿ ಕಾಡುಗಿಡಗಳು ಬೆಳೆದಿದೆ. ನಗರದ ಅಡಳಿತ ಸ್ವಚ್ಚತೆಯೇ ಧ್ಯೇಯ ಎಂದು ಹೇಳುತ್ತಿದೆಯಾದರೂ ಇಲ್ಲಿ ಮಾತ್ರ ಅದನ್ನು ಪಾಲಿಸುತ್ತಿಲ್ಲ.

ಪಾರ್ಟಿಗಳ ತಾಣ : ಕುರುಂಜಿಗುಡ್ಡೆ ಇಂದು ಪಾರ್ಟಿಗಳ ತಾಣವಾಗಿದೆಯೇ ಎಂದೆನಿಸುವಂತಿದೆ. ಗಿಡಗಳ ಮಧ್ಯೆ ಅಲ್ಲಲ್ಲಿ ಮದ್ಯದ ಬಾಟಲಿಗಳು‌ ಬಿದ್ದುಕೊಂಡಿದೆ. ಬರ್ತ್ ಡೇ ಪಾರ್ಟಿ ಮಾಡಿ ಕೇಕ್ ಗಳ ಪ್ಯಾಕೆಟ್ ಗಳು ಎಸೆಯಲಾಗಿದೆ. ಪ್ಲಾಸ್ಟಿಕ್, ಕಸಗಳು ಎಲ್ಲವೂ ಚೆಲ್ಲಾಡಿದಂತಿದೆ.

ಅನುದಾನ ವ್ಯಯಿಸಿ
ನಿಯಮ ಪಾಲಿಸದ ಆಡಳಿತ

ತಾಲೂಕು ಕೇಂದ್ರ, ಗ್ರಾಮ ಕೇಂದ್ರಗಳಿರಲಿ ಊರಿಗೊಂದು ಪಾರ್ಕ್ ಮಾಡಿದರೆ ಅದಕ್ಕೆ ನಿಯಮವನ್ನು ಅಳವಡಿಸಬೇಕಾಗುತ್ತದೆ. ಆದರೆ ಕುರುಂಜಿಗುಡ್ಡೆಯಲ್ಲಿ ನಿಯಮ ಪಾಲನೆ ಮಾಡಿಲ್ಲ. ಅನುದಾನ ವ್ಯಯಿಸಿದ್ದಾರೆ. ಎಷ್ಟು ಗಂಟೆಗೆ ಬರಬೇಕು..‌ಎಷ್ಟು ಗಂಟೆ ತನಕ ಇರಬೇಕು ಎಂಬ ನಿಯಮವಿಲ್ಲ. ಶಾಲಾ ಕಾಲೇಜು ವಿದ್ಯಾರ್ಥಿಗಳು ಬೆಳಗ್ಗೆ ಬಂದರೆ ಸಂಜೆ ತನಕ ಇರುತ್ತಾರೆ. ರಾತ್ರಿಯಲ್ಲಿಯೂ ಜನರು ಬಂದು ಇಲ್ಲಿ ಬರುತ್ತಾರೆ. ಕೇಳುವವರೇ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ಸ್ಥಳೀಯ ನಿವಾಸಿಗಳು.

ಇನ್ನಾದರೂ ಜನರ ಬೇಡಿಕೆಯಂತೆ ಸುಳ್ಯದ ನಗರಾಡಳಿತ ಪಾರ್ಕ್ ಗೆ ವ್ಯವಸ್ಥಿತ ಬೇಲಿ ರಚನೆಯೊಂದಿಗೆ ಪಾರ್ಕ್ ನಿರ್ವಹಣೆ ಮಾಡುವುದೋ ಕಾದು ನೋಡಬೇಕಾಗಿದೆ.