
” ಮಹಾನುಭಾವರುಗಳು ಒಮ್ಮಿಂದೊಮ್ಮಲೇ ಉದ್ಭವಿಸುವುದಿಲ್ಲ. ಒಂದು ಪ್ರದೇಶದ ಅಥವಾ ದೇಶದ ಪ್ರಾರ್ಥನೆ ಹಾಗೂ ತಪಸ್ಸಿನ ಫಲವಾಗಿ ಆ ಪ್ರದೇಶದಲ್ಲಿ ಮಹಾನುಭಾವರು ಹುಟ್ಟಿಕೊಳ್ಳುತ್ತಾರೆ. ಡಾ.ಕುರುಂಜಿ ವೆಂಕಟ್ರಮಣ ಗೌಡರಂತಹಾ ಮಹಾನುಭಾವರು ಈ ಪ್ರದೇಶದ ಜನರ ತಪಸ್ಸಿನ ಫಲವಾಗಿ ಹುಟ್ಟಿ ಸುಳ್ಯವನ್ನು ಶಿಕ್ಷಣದ ಕಾಶಿಯನ್ನಾಗಿಸಿದ್ದಾರೆ” ಎಂದು ಖ್ಯಾತ ವಾಗ್ಮಿ, ಮೈಸೂರು ಸಂತ ಫಿಲೋಮಿನಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಎಂ.ಕೃಷ್ಣೇ ಗೌಡರು ಹೇಳಿದ್ದಾರೆ.

ಕೆ.ವಿ.ಜಿ. ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ವತಿಯಿಂದ ಡಿ.26 ರಂದು ಕೆವಿಜಿ ಕಾನೂನು ಮಹಾವಿದ್ಯಾಲದ ಪರಿಸರದಲ್ಲಿ ನಡೆದ ಆಧುನಿಕ ಸುಳ್ಯದ ಭವ್ಯ ಶಿಲ್ಪಿ ಡಾ.ಕುರುಂಜಿ ವೆಂಕಟ್ರಮಣ ಗೌಡರ 96ನೇ ಜಯಂತ್ಯೋತ್ಸವ ‘ಕೆ.ವಿ.ಜಿ. ಸುಳ್ಯ ಹಬ್ಬ ಆಚರಣೆ’ಯಲ್ಲಿ ಕೆವಿಜಿ ಸಾಧನಾಶ್ರೀ ಮತ್ತು ಯುವ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು
ಕೆವಿಜಿ ಸಂಸ್ಮರಣಾ ಭಾಷಣ ಮಾಡಿ ಮಾತನಾಡಿದರು.
” ಯಾವುದೇ ವಿಷಯದಲ್ಲಿ ಏನಾದರೂ ಸಾಧಿಸಬೇಕು ಎಂದು ಉತ್ಕಟವಾಗಿ ಅನ್ನಿಸಿದರೆ ಸಾಧಕರಾಗುತ್ತಾರೆ. ಅನಾನುಕೂಲ, ತೊಂದರೆ, ಸವಾಲುಗಳು ಎದುರಾದರೆ ಮಾತ್ರ ಸಾಹಸಿಗಳು ಹುಟ್ಟುತ್ತಾರೆ” ಎಂದ ಅವರು ” ಆದ್ದರಿಂದಲೇ ಡಾ.ಕೆವಿಜಿ ಯವರು ಎಲ್ಲ ಸವಾಲುಗಳನ್ನು ಎದುರಿಸಿ ಸುಳ್ಯದಂತಹಾ ಗ್ರಾಮೀಣ ಪ್ರದೇಶದಲ್ಲಿ ಅದ್ಭುತವನ್ನು ಸಾಧಿಸಿದರು. ಉನ್ನತ ಶಿಕ್ಷಣ ಪಡೆಯದೇ ಜಗತ್ತಿಗೆ ವಿವೇಕವನ್ನು ಕೊಟ್ಟರು. ತನ್ನ ಬದುಕಿನ ಸ್ಪಷ್ಟ ಗುರಿ ಮತ್ತು ನಿರ್ಧಾರದಿಂದ ತಾವು ಬದುಕು ಕಟ್ಟಿಕೊಳ್ಳುವುದರ ಜೊತೆಗೆ ಇತರರಿಗೂ ಬದುಕು ಕಟ್ಟಿಕೊಟ್ಟರು” ಎಂದರು.

ಅಧ್ಯಕ್ಷತೆ ವಹಿಸಿದ್ದ ಕೆ.ವಿ.ಜಿ. ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಡಾ.ಕೆ.ವಿ. ಚಿದಾನಂದರು ಸಮಾರಂಭವನ್ನು ಉದ್ಘಾಟಿಸಿದರು.
ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಅಧ್ಯಕ್ಷ ಡಾ.ಎನ್.ಎ.ಜ್ಞಾನೇಶ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಧಾನ ಕಾರ್ಯದರ್ಶಿ ಕೆ.ರಾಜು ಪಂಡಿತ್ ಸ್ವಾಗತಿಸಿ, ಕೋಶಾಧಿಕಾರಿ ಎಂ.ಎನ್.ಶ್ರೀಕೃಷ್ಣ ಸೋಮಯಾಗಿ ವಂದಿಸಿದರು.

ಸಾಧನಾಶ್ರೀ ಪ್ರಶಸ್ತಿ ಮತ್ತು ಯುವ ಸಾಧಕ ಪ್ರಶಸ್ತಿ ಪ್ರದಾನ















ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ, ನಿವೃತ್ತ ಪ್ರಾಂಶುಪಾಲ ಕೆ.ಆರ್.ಗಂಗಾಧರ್ ಹಾಗೂ ಹಿರಿಯ ವೈದ್ಯರಾದ ಡಾ.ಎಂ.ಎಸ್.ಶಂಕರ ಭಟ್ ಅವರಿಗೆ ಕೆವಿಜಿ ಸಾಧನಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಯುವ ಸಾಧಕರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಡಾ.ರವಿಕಾಂತ್ ಜಿ.ಒ (ವೈದ್ಯಕೀಯ), ಕಸ್ತೂರಿ ಶಂಕರ್(ಸ್ವ ಉದ್ಯೋಗ), ಅಶ್ರಫ್ ಕಮ್ಮಾಡಿ (ಉದ್ಯಮ), ಆದರ್ಶ್ ಎಸ್.ಪಿ. (ಕ್ರೀಡೆ), ಪ್ರಕಾಶ್ ಕುಮಾರ್ ಮುಳ್ಯ (ಕೃಷಿ ಮತ್ತು ಹೈನುಗಾರಿಕೆ) ಅವರಿಗೆ ಯುವ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಗಿರೀಶ್ ನಾರ್ಕೋಡು, ವೀರಪ್ಪ ಗೌಡ ಕಣ್ಕಲ್, ಚಂದ್ರಾಕ್ಷಿ ಜೆ ರೈ, ಪೂರ್ಣಿಮಾ ಮಡಪ್ಪಾಡಿ, ಕೆ.ಟಿ.ವಿಶ್ವನಾಥ್, ಡಿ.ಟಿ.ದಯಾನಂದ, ಡಾ.ಹರ್ಷವರ್ಧನ್ ಕುತ್ತಮೊಟ್ಟೆ ಪ್ರಶಸ್ತಿ ಪುರಸ್ಕೃತರ ಪರಿಚಯ ಮಾಡಿದರು. ಡಾ.ಲಕ್ಷ್ಮೀಶ ಕೆ.ಎಸ್. ಮುಖ್ಯ ಅತಿಥಿಗಳ ಪರಿಚಯ ಮಾಡಿದರು. ಸದಸ್ಯತ್ವ ಅಭಿಯಾನ ಸಮಿತಿ ಸಂಚಾಲಕ ಹರೀಶ್ ಬಂಟ್ವಾಳ್ ನೂತನ ಸದಸ್ಯರ ಪಟ್ಟಿ ವಾಚಿಸಿದರು. ನೂತನವಾಗಿ ಸದಸ್ಯರಾದವರನ್ನು ವೇದಿಕೆಗೆ ಕರೆದು ಸದಸ್ಯತ್ವ ಫಲಕ ನೀಡಲಾಯಿತು.
ಶ್ರೀಮತಿ ಲತಾಶ್ರೀ ಸುಪ್ರೀತ್ ಮೋಂಟಡ್ಕ ಹಾಗೂ ಶ್ರೀಮತಿ ಚಂದ್ರಾವತಿ ಬಡ್ಡಡ್ಕ ಕಾರ್ಯಕ್ರಮ ನಿರೂಪಿಸಿದರು.

ಸಮಾರಂಭದ ಬಳಿಕ ಜೀವನ್ ಟಿ.ಎನ್.ಬೆಳ್ಳಾರೆ ಸಾರಥ್ಯದ ಡ್ಯಾನ್ಸ್ & ಬೀಟ್ಸ್ ತಂಡದವರಿಂದ ನೃತ್ಯ ಸಂಭ್ರಮ ನಡೆಯಿತು. ಸಭೆಗಿಂತ ಮೊದಲು ಎನಗ.ಎಂ.ಸಿ. ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಪ್ರದರ್ಶನ ನಡೆಯಿತು.









