ಬಣ್ಣದ ಮಹಾಲಿಂಗ ಯಕ್ಷಸ್ಮೃತಿ ಸನ್ಮಾನ
ಬಣ್ಣದ ಮಹಾಲಿಂಗ ಯಕ್ಷ ಪ್ರತಿಷ್ಠಾನ(ರಿ.) ಪುತ್ತೂರು ಇದರ ವತಿಯಿಂದ ನಡೆಯುತ್ತಿರುವ ‘ಬಣ್ಣದಜ್ಜನ ಸ್ಮೃತಿಯಾನ’ ಸರಣಿ ಕಾರ್ಯಕ್ರಮದ ಎರಡನೇ ಕಾರ್ಯಕ್ರಮ ‘ಬಣ್ಣದ ಮಹಾಲಿಂಗರ ನೆನಪಿನಲ್ಲೊಂದು ಯಕ್ಷ ಪಯಣ’ ಎಂಬ ಧ್ಯೇಯ ವಾಕ್ಯದೊಂದಿಗೆ ಬಣ್ಣದ ಮಹಾಲಿಂಗರ ಸಂಸ್ಮರಣೆ- ಬಣ್ಣದ ಮಹಾಲಿಂಗ ಯಕ್ಷ ಸ್ಮೃತಿ ಸನ್ಮಾನ ಪ್ರದಾನ ಹಾಗೂ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮವು ಫೆ. 4 ರಂದು ನಿವೃತ್ತ ಪ್ರಾಂಶುಪಾಲರಾದ ಜಯನಗರ ಅಪ್ಪು ಪಾಟಾಳಿಯವರ ನಿವಾಸದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಣ್ಣದ ಮಹಾಲಿಂಗ ಯಕ್ಷ ಪ್ರತಿಷ್ಠಾನದ ಅಧ್ಯಕ್ಷರಾದ ಗೋಪಾಲಕೃಷ್ಣ ಮಾಸ್ತರ್ ಪಂಜತ್ತೊಟ್ಟಿ ವಹಿಸಿದ್ದರು.

ಜಯನಗರ ಅಪ್ಪು ಪಾಟಾಳಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಯಕ್ಷಗಾನದ ಮೌಲ್ಯ ಹಾಗೂ ಬಣ್ಣದ ಮಹಾಲಿಂಗರ ಸಾಧನೆಗಳ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಯಕ್ಷಗಾನ ಕಲಾವಿದರಾದ ರಾಮಕೃಷ್ಣ ರಾವ್ ರೆಂಜಾಳರಿಗೆ ಬಣ್ಣದ ಮಹಾಲಿಂಗ ಯಕ್ಷಸ್ಮೃತಿ ಸನ್ಮಾನ ನೀಡಿ ಗೌರವಿಸಲಾಯಿತು. ಹಿರಿಯ ಹವ್ಯಾಸಿ ಕಲಾವಿದರಾದ ಗೋಪಾಲಕೃಷ್ಣ ಭಟ್ ಶಾಂತಿನಗರ ಅಭಿನಂದನ ಭಾಷಣ ಮಾಡಿದರು. ವೇದಿಕೆಯಲ್ಲಿ ಬಣ್ಣದ ಮಹಾಲಿಂಗ ಯಕ್ಷ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಬಣ್ಣದ ಸುಬ್ರಾಯ ಸಂಪಾಜೆ ಗೌರವ ಉಪಸ್ಥಿತರಿದ್ದರು.















ಮುಖ್ಯ ಅತಿಥಿಗಳಾಗಿ ಹವ್ಯಾಸಿ ಯಕ್ಷಗಾನ ಕಲಾವಿದ ದಾಮೋದರ ಪಾಟಾಳಿ ಮಿತ್ತಡ್ಕ, ಬಣ್ಣದ ಮಹಾಲಿಂಗರ ಸಂಸ್ಮರಣೆ ನೆರವೇರಿಸಿದ ಹಿರಿಯ ಹವ್ಯಾಸಿ ಕಲಾವಿದರಾದ ಸುಬ್ಬನ್ ಚೆಟ್ಟಿಯಾರ್ ಕಲ್ಮಡ್ಕರು ಉಪಸ್ಥಿತರಿದ್ದರು.

ಅತಿಥಿಗಳಾಗಿ ನಿವೃತ್ತ ಯೋಧ ಹಾಗೂ ಬಣ್ಣದ ಮಹಾಲಿಂಗ ಸ್ಮೃತಿ ಅಭಿಯಾನದ ಸಂಚಾಲಕರಾದ ಸುಬ್ಬಪ್ಪ ಪಟ್ಟೆ, ಬಣ್ಣದ ಮಹಾಲಿಂಗ ಯಕ್ಷ ಪ್ರತಿಷ್ಠಾನದ ಸಂಚಾಲಕರಾದ ತಿಮ್ಮಪ್ಪ ಪಾಟಾಳಿ ಪುತ್ತೂರು, ಯಕ್ಷಗುರು ವಿಶ್ವ ವಿನೋದ ಬನಾರಿ ಉಪಸ್ಥಿತರಿದ್ದು, ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಪೋಷಕ ಸದಸ್ಯರಾದ ಸುಧೀರ್ ಕುಮಾರ್ ರೈ ಮುಳ್ಳೇರಿಯಾ, ಖ್ಯಾತ ಯಕ್ಷಗಾನ ಕಲಾವಿದರಾದ ಜಯರಾಮ ಪಾಟಾಳಿ ಪಡುಮಲೆ ಹಾಗೂ ಸುಕನ್ಯಾ ಟೀಚರ್ ದೇಲಂತಬೆಟ್ಟು ಉಪಸ್ಥಿತರಿದ್ದರು.
ಕು. ಲಹರಿ ಪ್ರಾರ್ಥಿಸಿ, ತಿಮ್ಮಪ್ಪ ಪುತ್ತೂರುರವರು ಪ್ರಾಸ್ತಾವಿಕ ಮಾತುಗಳನ್ನಾಡಿ, ಸ್ವಾಗತಿಸಿದರು. ಸಚಿತ್ ಕಲ್ಮಡ್ಕ ಕಾರ್ಯಕ್ರಮ ನಿರೂಪಿಸಿದರು. ಸುರೇಶ್ ಕರ್ಲಪ್ಪಾಡಿ ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಯಕ್ಷಗುರು ಶ್ರೀ ವಿಶ್ವ ವಿನೋದ ಬನಾರಿಯವರ ಮಾರ್ಗದರ್ಶನದಲ್ಲಿ, ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ನೇತೃತ್ವದಲ್ಲಿ ಅತಿಥಿ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ತಾಳಮದ್ದಳೆ ‘ಸಮರ ಸನ್ನಾಹ ಭೀಷ್ಮ ಸೇನಾಧಿಪತ್ಯ’ ಪ್ರಸಂಗ ನಡೆಯಿತು.










