ಪಂಜ ಸೀಮೆ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಳದ ಜಾತ್ರೋತ್ಸವವು ಬ್ರಹ್ಮ ಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಜರುಗುತ್ತಿದ್ದು ಫೆ.6 ರಂದು ರಾತ್ರಿ ಶ್ರೀದೇವರ ಬ್ರಹ್ಮ ರಥೋತ್ಸವವು ಸಹಸ್ರ ಸಹಸ್ರ ಭಕ್ತಾದಿಗಳು ಪಾಲ್ಗೊಂಡು ಭಕ್ತಿ ಸಡಗರದಿಂದ ಜರುಗಿತು.

ಇದೇ ವೇಳೆ ಶ್ರೀ ಕಾಜು ಕುಜುಂಬ ದೈವದ ನರ್ತನ ಸೇವೆ, ಮಹಾಪೂಜೆ ಶ್ರೀ ಭೂತಬಲಿ ,ಶಯನೋತ್ಸವ, ಕವಾಟ ಬಂಧನ ಜರುಗಿತು. ವಿವಿಧ ವೈದಿಕ , ಧಾರ್ಮಿಕ ಕಾರ್ಯಕ್ರಮಗಳು ನಡೆದು ಶ್ರೀ ದೇವರ ಬ್ರಹ್ಮ ರಥೋತ್ಸವ ಜರುಗಿತು. ಪೂರ್ವ ಸಂಪ್ರದಾಯದಂತೆ ಪುತ್ಯ ,ಕುದ್ವ ಮನೆಯ ಪೈಯೋಳಿ ಮಕ್ಕಳನ್ನು ರಥೋತ್ಸವಕ್ಕೆ ಸ್ವಾಗತಿಸಲಾಯಿತು.
ಇದೇ ವೇಳೆ ಸಿಡಿಮದ್ದು ಪ್ರದರ್ಶನ ನಡೆಯಿತು. ರಥೋತ್ಸವಕ್ಕೆ ಭಕ್ತ ಸಾಗರವಾಗಿ ಕಂಡು ಬಂತು. ದೇವಳದ ಮೈದಾನದಲ್ಲಿ 35 ಭಜನಾ ತಂಡಗಳ ಭಜಕರಿಂದ ಕುಣಿತ ಭಜನೆ, ಗೊಂಬೆಗಳು ಹಾಗೂ ಬೇತಾಳಗಳು, ಚೆಂಡೆ ತಂಡ ವಿಶೇಷ ಆಕರ್ಷಣೆಯಾಗಿತ್ತು.
















ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸತ್ಯನಾರಾಯಣ ಭಟ್ ಕಾಯಂಬಾಡಿ, ಸಂತೋಷ್ ರೈ ಪಲ್ಲತ್ತಡ್ಕ, ಮಾಯಿಲಪ್ಪ ಗೌಡ ಎಣ್ಮೂರು ಪಟ್ಟೆ, ಧರ್ಮಣ್ಣ ನಾಯ್ಕ ಗರಡಿ,ಧರ್ಮಪಾಲ ಗೌಡ ಮರಕ್ಕಡ ಕಾಚಿಲ, ರಾಮಚಂದ್ರ ಭಟ್, ಶ್ರೀಮತಿ ಪವಿತ್ರ ಮಲ್ಲೆಟ್ಟಿ, ಶ್ರೀಮತಿ ಮಾಲಿನಿ ಕುದ್ವ, ಗೌರವ ಸಲಹೆಗಾರರಾದ ಮಹೇಶ್ ಕುಮಾರ್ ಕರಿಕ್ಕಳ, ಆನಂದ ಗೌಡ ಕಂಬಳ, ಪರಮೇಶ್ವರ ಬಿಳಿಮಲೆ, ಉದಯಕುಮಾರ್ ಬೆಟ್ಟ, ಉಮೇಶ್ ಬಳ್ಪ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರು, ಸದಸ್ಯರು,ವಿವಿಧ ಸಮಿತಿಗಳ ಸಂಚಾಲಕರು, ಸದಸ್ಯರು, ಸೀಮೆಯ ಭಕ್ತಾದಿಗಳು ಪಾಲ್ಗೊಂಡಿದ್ದರು.

ಫೆ.7 ಮುಂಜಾನೆ ಕವಾಟೋದ್ಘಾಟನೆ, ದೇವರಿಗೆ ಅಭಿಷೇಕ, ಪೂರ್ವಾಹ್ನ ಬಲಿ ಹೊರಟು, ಕಾಚುಕುಜುಂಬ ದೈವದ ನರ್ತನ ಸೇವೆಯೊಂದಿಗೆ ನಾಗತೀರ್ಥ ಜಳಕದ ಹೊಳೆಯಲ್ಲಿ ಶ್ರೀ ದೇವರ ಅವಭೃತ ಸ್ನಾನ, ಧ್ವಜಾವರೋಹಣ, ಮಹಾಪೂಜೆ, ಅನ್ನಸಂತರ್ಪಣೆ, ಅಪರಾಹ್ನ ದೇಗುಲದಿಂದ ಶ್ರೀ ಕಾಚುಕುಜುಂಬ ಉಳ್ಳಾಕುಲು ದೈವಗಳ ಭಂಡಾರವನ್ನು ಮೆರವಣಿಗೆ ಮೂಲಕ ಮೂಲಸ್ಥಾನ ಗರಡಿಬೈಲಿಗೆ ಹೋಗಿ ಸಂಜೆ ಧ್ವಜಾರೋಹಣ, ಭಜನಾ ಕಾರ್ಯಕ್ರಮ. ರಾತ್ರಿ ಶ್ರೀ ಕಾಚುಕುಜುಂಬ ದೈವದ ನೇಮ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.

ಫೆ.8.ರಂದು ಮುಂಜಾನೆ ಶ್ರೀ ಉಳ್ಳಾಕುಲು ದೈವದ ನೇಮ, ಪ್ರಸಾದ ವಿತರಣೆ, ಧ್ವಜಾವರೋಹಣ, ದೈವದ ಭಂಡಾರವನ್ನು ಮೆರವಣಿಗೆಯಲ್ಲಿ ದೇಗುಲದ ಭಂಡಾರ ಮನೆಗೆ ತರುವುದು. ಶ್ರೀ ದೇವಳ ದಲ್ಲಿ ಸಂಪ್ರೋಕ್ಷಣೆ. ವೈದಿಕ ಮಂತ್ರಾಕ್ಷತೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ಪುತ್ಯದಿಂದ ಶಿರಾಡಿ ದೈವದ ಭಂಡಾರ ತರುವುದು.ಫೆ.9 ರಂದು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಪೂಜೆ ಹಾಗೂ ಶಿರಾಡಿ ದೈವದ ನೇಮ, ಶ್ರೀ ರುದ್ರ ಚಾಮುಂಡಿ ದೈವದ ನೇಮ,ಅನ್ನಸಂತರ್ಪಣೆ ನಡೆಯಲಿದೆ.











