ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷತೆ ವಿವಾದಕ್ಕೆ ಟಿ.ಎಂ.ಶಹೀದ್ ಪ್ರತಿಕ್ರಿಯೆ
ಸುಳ್ಯ ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷತೆ ಕುರಿತಂತೆ ಪಕ್ಷದಲ್ಲಿ ಸಣ್ಣ ಮಟ್ಟಿಗಿನ ಗೊಂದಲ ಇದೆ. ಅದನ್ನು ಕೆಪಿಸಿಸಿ ಅಧ್ಯಕ್ಷರು ಪರಿಹಾರ ಮಾಡುತ್ತಾರೆ. ಈ ವಿಚಾರವನ್ನು ಮತ್ತಷ್ಟು ಗೊಂದಲಕ್ಕೆ ಎಡೆ ಮಾಡಲು ನಾಯಕರು, ಕಾರ್ಯಕರ್ತರು ಹೋಗಬಾರದು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ.ಶಹೀದ್ ಅಭಿಪ್ರಾಯಪಟ್ಟಿದ್ದಾರೆ.
ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷತೆ ಕುರಿತಂತೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ” ಒಮ್ಮೆ ಕಾಂಗ್ರೆಸ್ ಸೇರಿದರೆ ಅವರು ಕಾಂಗ್ರೆಸ್‌ನವರಾಗಿಯೇ ಇರುತ್ತಾರೆ. ರಾಧಾಕೃಷ್ಣ ಬೊಳ್ಳೂರು ಕಾಂಗ್ರೆಸ್‌ನವರೇ. ಮೊದಲೂ ಕಾಂಗ್ರೆಸ್ ನಲ್ಲಿದ್ದವರು. ಹೀಗಾಗಿ ಆ ಕಾರಣಕ್ಕೆ ಅವರು ಅಧ್ಯಕ್ಷರಾಗಬಾರದು ಎನ್ನುವುದು ಸರಿಯಲ್ಲ. ಬೇರೆ ಪಕ್ಷದವರಿಂದ ಬಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಉದಾಹರಣೆಗಳೂ ನಮ್ಮಲ್ಲಿವೆ ಎಂದರು.









ಒಮ್ಮೆ ಕೆಪಿಸಿಸಿ ಅಧ್ಯಕ್ಷರು ತೀರ್ಮಾನ ಮಾಡಿದರೆ ಅದನ್ನು ಎಲ್ಲರೂ ಪಾಲಿಸಬೇಕು. ಹೊಸ ಅಧ್ಯಕ್ಷರು ಕೂಡಾ ಎಲ್ಲರೊಂದಿಗೆ ಸೇರಿಕೊಂಡು ಪಕ್ಷ ಸಂಘಟನೆ ಮಾಡಬೇಕು. ಸುಳ್ಯದಲ್ಲಿ ಪಕ್ಷದೊಳಗೆ ಪ್ರೀತಿ, ವಿಶ್ವಾಸ ಕಡಿಮೆಯಾಗಿದೆ. ನಾವು ಹೋರಾಟ ಮಾಡಬೇಕಾಗಿರುವುದು ಬೇರೆ ಪಕ್ಷದವರೊಂದಿಗೆ. ಆದರೆ ಇಲ್ಲಿ ಬಿಜೆಪಿಯವರ ಕಾಲೆಳೆಯುವುದು ಬಿಟ್ಟು, ಪಕ್ಷದೊಳಗೇ ಕಾಲೆಳೆಯುವ ಸ್ಥಿತಿ ಇದೆ. ಇಲ್ಲಿ ಬಿಜೆಪಿ ಬಲಿಷ್ಠ ಆನೆ. ಅದರ ವಿರುದ್ಧ ನಾವು ಹೋರಾಡಬೇಕು. ನಾವು ಮೊಲಗಳಾಗಿ ಬೇರೆ ಬೇರೆ ಗುಂಪುಗಳಾಗಿ ಚದುರಿದರೆ ಹೋರಾಟ ಮಾಡುವುದು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ ಅವರು, ಬಿಜೆಪಿ ವಿರುದ್ಧ ಮಾತನಾಡಲು, ಅನ್ಯಾಯವನ್ನು ಪ್ರತಿಭಟಿಸಲು, ಪಕ್ಷ ಸಂಘಟಿಸಲು ರಾಧಾಕೃಷ್ಣ ಬೊಳ್ಳೂರು ಅವರು ಸಮರ್ಥರು ಎಂದರು.
ಬೊಳ್ಳೂರು ಅವರ ಅಧ್ಯಕ್ಷತೆ ಕುರಿತಂತೆ ಅವರೊಂದಿಗೆ ಕೆಪಿಸಿಸಿ ಅಧ್ಯಕ್ಷರ ಬಳಿ ಹೋದವರೇ ಈಗ ವಿರೋಧಿಸುತ್ತಿದ್ದಾರಂತೆ ಎಂದೂ ಅವರು ಹೇಳಿದರು.










