ಸೀತಾರಾಮ ರೈಯವರು ಸಂಸ್ಕರಣಾ ಘಟಕದ ಮೂಲಕ ರೈತರಿಗೆ ಶಕ್ತಿ ತುಂಬಿದ್ದಾರೆ : ಶಾಸಕಿ ಭಾಗೀರಥಿ ಮುರುಳ್ಯ

ಅಡಿಕೆ ಸಂಸ್ಕರಣಾ ಘಟಕವನ್ನು ಸುಳ್ಯದಲ್ಲಿ ಸ್ಥಾಪಿಸಿರುವುದು ನಮ್ಮ ಸೌಭಾಗ್ಯ. ಸೀತಾರಾಮ ರೈಯವರ ಈ ಯೋಜನೆ ರೈತರಿಗೆ ಶಕ್ತಿ ತುಂಬುವ ಜೊತೆಗೆ ಒಂದಷ್ಟು ಜನರಿಗೆ ಉದ್ಯೋಗ ಲಭಿಸಿದೆ. ಈ ಭಾಗದಲ್ಲಿ ಎಳೆಚುಕ್ಕಿ ರೋಗ ರೈತರನ್ನು ಕಂಗಾಲಾಗಿಸಿದೆ. ಇದಕ್ಕೆ ಶಾಶ್ವತ ಪರಿಹಾರವಾಗಬೇಕಿದೆ. ಸುಳ್ಯದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಬೇಕೆಂಬ ಕನಸು ಇದೆ. ನಿಮ್ಮೆಲ್ಲರ ಸಹಕಾರ ಬೇಕು ಎಂದರು.

ಅವರು ಫೆ. 28ರಂದು ಸುಳ್ಯದ ಎಪಿಎಂಸಿ ಸಮುದಾಯ ಭವನದಲ್ಲಿ ನಡೆದ ಮಾಸ್ ಲಿ.ನ ಅಡಿಕೆ ಸಂಸ್ಕರಣಾ ಘಟಕವನ್ನು ಉದ್ಘಾಟಿಸಿ ಮಾತನಾಡಿದರು. ಮಾಸ್ ಅಧ್ಯಕ್ಷ ಸಹಕಾರಿ ರತ್ನ ಸವಣೂರು ಕೆ. ಸೀತಾರಾಮ ರೈಯವರು ಪ್ರಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸುತ್ತಾ ಮಂಗಳೂರಿನಲ್ಲಿ 45 ಸೆಂಟ್ಸ್ ಜಾಗದಲ್ಲಿ 13,700 ಸ್ಕ್ವೇರ್ ಫೀಟ್ ನ ಸ್ವಂತ ಕಟ್ಟಡವನ್ನು ಹೊಂದಿರುವ ಮಂಗಳೂರು ಕೃಷಿಕರ ಸಹಕಾರಿ ಸಂಘ (ಮಾಸ್) ಕಳೆದ ಅವಧಿಯಲ್ಲಿ 167 ಕೋಟಿ ವ್ಯವಹಾರ ನಡೆಸಿದೆ. ಈ ಬಾರಿ ಅಡಿಕೆ ಉತ್ಪಾದನೆಯಲ್ಲಿ ಕುಸಿತ ಕಂಡಿದ್ದರೂ ಕಳೆದ 10 ತಿಂಗಳಲ್ಲಿ ಶೇ. 40ರಷ್ಟು ಹೆಚ್ಚುವರಿ ಅಡಿಕೆ ಖರೀದಿ ಮಾಡಲಾಗಿದೆ. ಕಾವು ಮತ್ತು ನಿಂತಿಕಲ್ಲಿನಲ್ಲಿ ಇತ್ತೀಚೆಗಷ್ಟೇ ಶಾಖೆ ತೆರೆದಿರುವ ಮಾಸ್ ಸಂಸ್ಥೆ ಮುಂದಿನ ತಿಂಗಳು ಉಬರಡ್ಕದಲ್ಲಿ ಶಾಖೆ ತೆರೆಯಲಿದೆ ಎಂದರು.















ಅಧ್ಯಕ್ಷತೆ ವಹಿಸಿದ್ದ ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಮಾತನಾಡಿ 10 ವರ್ಷಗಳ ಹಿಂದೆ ಸೀತಾರಾಮ ರೈಯವರು ಅಧ್ಯಕ್ಷರಾಗುತ್ತಿದ್ದರೆ ಇವತ್ತು ಮಾಸ್ ಕ್ಯಾಂಪ್ಕೋ ಸಂಸ್ಥೆಗೆ ಸರಿಸಾಟಿಯಾಗಿ ಬೆಳೆಯುತ್ತಿತ್ತು. ಕಳೆದ 25 ವರ್ಷಗಳಲ್ಲಿ ಸಂಸ್ಕರಣಾ ಘಟಕ ಸ್ಥಾಪನೆಯಾಗಲಿಲ್ಲ. ಅದಕ್ಕೆ ಸೀತಾರಾಮ ರೈಯವರೇ ಅಧ್ಯಕ್ಷರಾಗಿ ಬರಬೇಕಾಯಿತು. ಸಂಸ್ಥೆ ಶಾಖೆಗಳನ್ನು ವೃದ್ಧಿಗೊಳಿಸುವುದರ ಜೊತೆಗೆ ಒಂದಷ್ಟು ಮಂದಿಗೆ ಉದ್ಯೋಗ ಲಭಿಸಿದೆ ಎಂದರು.

ವೇದಿಕೆಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಸ್.ಎನ್. ಮನ್ಮಥ, ಸುಳ್ಯ ಎಪಿಎಂಸಿ ಮಾಜಿ ಅಧ್ಯಕ್ಷ ಎನ್. ಜಯಪ್ರಕಾಶ್ ರೈ, ಕಾರ್ಯದರ್ಶಿ ಎಸ್. ರವೀಂದ್ರ, ನಿರ್ದೇಶಕರಾದ ಶ್ರೀರಾಮ ಪಾಟಾಜೆ, ಶ್ರೀಮತಿ ಸುಧಾ ಎಸ್.ರೈ ಪುಣ್ಚಪ್ಪಾಡಿ ಮತ್ತು ಪುಷ್ಪರಾಜ ಅಡ್ಕಂತಾಯ ಮಂಚಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಾಸ್ ಮಂಗಳೂರಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿ. ಮಹಾಬಲೇಶ್ವರ ಭಟ್ ವಂದಿಸಿದರು. ಕು. ಈಶಾನ್ಯ ಪ್ರಾರ್ಥಿಸಿದರು. ಸವಣೂರು ಪ್ರಾ.ಕೃ.ಪ.ಸ.ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಪಿ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಲಘು ಉಪಾಹಾರ ನೀಡಲಾಯಿತು.











