ರಾಜ್ಯ ಬಿಜೆಪಿಯವರು ಅವರ ಪಕ್ಷದಲ್ಲಿರುವ ಗೊಂದಲವನ್ನು ಮರೆಮಾಚಲು ಜನಾಕ್ರೋಶ ರ್ಯಾಲಿಯನ್ನು ಮಾಡುತ್ತಿದ್ದಾರೆ

0

ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ಮಾಡಿದ್ದು ಕಾಂಗ್ರೆಸ್ ಪಕ್ಷವೋ ಅಥವಾ ಕೇಂದ್ರ ಬಿ ಜೆ ಪಿ ಯೋ? ಪತ್ರಿಕಾ ಗೋಷ್ಠಿಯಲ್ಲಿ ಎಂ.ವೆಂಕಪ್ಪ ಗೌಡ ಪ್ರಶ್ನೆ

ಬಿಜೆಪಿ ಯವರು ರಾಜ್ಯದಲ್ಲಿ ಬೇರೆ ಬೇರೆ ಕಾರಣಗಳಿಂದ ಅವರ ಪಕ್ಷದಲ್ಲಿಯೇ ಒಮ್ಮತವಿಲ್ಲದೆ ಪರದಾಡುವ ಪರಿಸ್ಥಿತಿಯನ್ನು ನಿರ್ಮಾಣ ಮಾಡಿಕೊಂಡಿದ್ದಾರೆ.

ಇತ್ತೀಚೆಗೆ ಅವರ ಪಕ್ಷದ ಮುಖಂಡರಾದ ಯತ್ನಾಳ್ ರವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿದ್ದು, ಇದು ಅವರ ಪಕ್ಷದೊಳಗಿನ ಭಿನ್ನಮತ ಸ್ಫೋಟಕ್ಕೆ ಕಾರಣವಾಗಿದ್ದಲ್ಲದೇ,ಅವರ ಪಕ್ಷದ ಕಾರ್ಯಕರ್ತರಲ್ಲಿ ಒಡಕು ಮೂಡಿದೆ.


ಈ ಎಲ್ಲಾ ಸಮಸ್ಯೆಗಳನ್ನು ಮರೆಮಾಚಲು ಬಿ ಜೆ ಪಿ ಯವರು ಕಾಂಗ್ರೆಸ್ ಪಕ್ಷದ ವಿರುದ್ಧ ಜನಾಕ್ರೋಶ ರ್ಯಾಲಿ ಎಂಬ ಹೆಸರಿನಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದಾರೆ.ಇದು ಬಿಜೆಪಿ ಯವರ ಜನಾಕ್ರೋಶ ರ್ಯಾಲಿ ಅಲ್ಲ ಇದು ಅವರ ನಾಟಕ ರ್ಯಾಲಿ ಎಂದು ಕಾಂಗ್ರೆಸ್ ಪಕ್ಷದ ಮುಖಂಡ ನ ಪಂ ಸದಸ್ಯರಾದ ಎಂ ವೆಂಕಪ್ಪ ಗೌಡ ಏ 10 ರಂದು ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಹೇಳಿದರು.

ಪ್ರತಿಭಟನೆಯನ್ನು ಮತ್ತು ರ್ಯಾಲಿಯನ್ನು ಹಮ್ಮಿಕೊಂಡಿರುವ ಬಿಜೆಪಿಯವರು ತಮ್ಮ ಕೇಂದ್ರ ಸರ್ಕಾರದ ಬಗ್ಗೆ ಒಮ್ಮೆ ಆಲೋಚನೆ ಮಾಡಿಕೊಳ್ಳಲಿ.

ಕಾಂಗ್ರೆಸ್ ಸರಕಾರವು ಅಧಿಕಾರದಲ್ಲಿದ್ದಾಗ ಕೇವಲ ಸುಮಾರು 480 ರೂಪಾಯಿ ಇದ್ದ ಗ್ಯಾಸ್ ಸಿಲೆಂಡರ್ ಬೆಲೆಯನ್ನು ಇಂದು ಸುಮಾರು 860 ರೂಗಳಿಗೆ ಹೆಚ್ಚಳ ಮಾಡಿದ್ದಾರೆ.ಗ್ಯಾಸ್ ಬೆಲೆ ಮಾತ್ರವಲ್ಲದೆ ಇಂಧನ ಬೆಲೆ,ಚಿನ್ನದ ಬೆಲೆ,ದಿನನಿತ್ಯ ಜೀವನ ನಿರ್ವಹಿಸಲು ಉಪಯೋಗಿಸುವ ಆಹಾರ ಸಾಮಗ್ರಿಗಳ ಬೆಲೆಯನ್ನು ಕೂಡ ಗಗನಕ್ಕೆ ಏರಿಸಿರುವ ಇವರು ಇಂದು ರಾಜ್ಯದ ಅಭಿವೃದ್ಧಿಗಾಗಿ ಕಾಂಗ್ರೆಸ್ ಆಡಳಿತ ಸರಕಾರ ಡೀಸೆಲ್ ಮತ್ತು ಹಾಲಿನಲ್ಲಿ ಕೇವಲ ಎರಡೋ ನಾಲ್ಕೊ ರೂಪಾಯಿಗಳನ್ನು ಹೆಚ್ಚಳ ಮಾಡಿದ್ದಕ್ಕೆ ಈ ರೀತಿಯ ನಾಟಕದ ಪ್ರತಿಭಟನೆಯನ್ನು ಮಾಡುತ್ತಿದ್ದಾರೆ.

ಕಾಂಗ್ರೆಸ್ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಸಮಯಕ್ಕೂ ಪ್ರಸ್ತುತ ಸಂದರ್ಭದಲ್ಲಿ ಇರುವ ಪ್ರತಿಯೊಂದು ವಸ್ತುಗಳ ಬೆಲೆಯ ಬಗ್ಗೆ ಅವರು ಪರಿಶೀಲನೆ ಮಾಡಿಕೊಳ್ಳಲಿ ಮತ್ತು ಆ ಬಗ್ಗೆ ಆಲೋಚನೆ ಮಾಡಿ ತೀರ್ಮಾನ ಕೈ ಗೊಳ್ಳಲಿ ಜನಾಕ್ರೋಶ ಯಾತ್ರೆಯನ್ನು ಯಾರ ಮೇಲೆ ಮಾಡಬೇಕು. ಕಾಂಗ್ರೆಸ್ ಪಕ್ಷದ ಮೇಲೋ ಅಥವಾ ಅವರ ಸ್ವ ಪಕ್ಷವಾದ ಬಿ ಜೆ ಪಿ ಯ ಮೇಲೋ ಎಂದು ಪತ್ರಿಕಾಗೋಷ್ಠಿ ಮೂಲಕ ಬಿ ಜೆ ಪಿ ಯನ್ನು ಪ್ರಶ್ನೆ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ ಈ ಸಂದರ್ಭದಲ್ಲಿ ಮಾತನಾಡಿ ಸುಳ್ಯದಾದ್ಯಂತ ನಡೆಯುತ್ತಿರುವ ಕುಡಿಯುವ ನೀರಿನ ಅಮೃತ ಬಿಂದು ಯೋಜನೆಯು ಅದು ಕೇವಲ ಕೇಂದ್ರ ಸರ್ಕಾರದ ಯೋಜನೆ ಎಂದು ಬಿ ಜೆ ಪಿ ಯವರು ಬಿಂಬಿಸುತ್ತಿದ್ದಾರೆ.ಆದರೆ ಆ ಯೋಜನೆ ಕೇವಲ ಕೇಂದ್ರ ಸರ್ಕಾರದ ಯೋಜನೆ ಮಾತ್ರವಲ್ಲ ಅದರಲ್ಲಿ ಶೇಕಡ 40 ರಷ್ಟು ಅನುದಾನ ರಾಜ್ಯ ಸರ್ಕಾರದ್ದು ಕೂಡ ಇದೆ ಎಂದು ಹೇಳಿದರು.

ಕೇವಲ ಸುಳ್ಳುಗಳನ್ನೇ ಹೇಳಿ ಬಿ ಜೆ ಪಿ ಯವರು ಕಾಂಗ್ರೆಸ್ ಪಕ್ಷವನ್ನು ದೂರುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸುಳ್ಯ ನಗರ ಪ್ರಾಧಿಕಾರ ಅಧ್ಯಕ್ಷ ಕೆ ಎಮ್ ಮುಸ್ತಫಾ ಜನತಾ,ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿ ಪ್ರ. ಕಾರ್ಯದರ್ಶಿ ಪಿ ಎಸ್ ಗಂಗಾಧರ್,ನಗರ ಪಂಚಾಯತ್ ಸದಸ್ಯರುಗಳಾದ ಡೇವಿಡ್ ಧೀರಾ ಕ್ರಾಸ್ತಾ,ಬಾಲಕೃಷ್ಣ ಭಟ್ ಕೊಡಂಕೇರಿ, ರಿಯಾಜ್ ಕಟ್ಟೆಕ್ಕಾರ್ಸ್, ದಲಿತ ಮುಖಂಡರಾದ ನಂದರಾಜ್ ಸಂಕೇಶ್
ಉಪಸ್ಥಿತರಿದ್ದರು.