ನಾಳೆಯಿಂದ ರಂಗಮಯೂರಿ ಕಲಾಶಾಲೆ ವತಿಯಿಂದ ರಾಜ್ಯಮಟ್ಟದ ರಂಗ ಶೈಲಿಯ ಮಕ್ಕಳ ಬೇಸಿಗೆ ಶಿಬಿರ









ವಿದ್ಯಾರ್ಥಿಗಳ ಕಲಾ ಭವಿಷ್ಯಕ್ಕಾಗಿ ರೂಪುಗೊಂಡ ಸುಳ್ಯದ ರಂಗ ಮಯೂರಿ ಕಲಾಶಾಲೆಯ ಮಕ್ಕಳ ನಗುವಿನ ಹಬ್ಬ ಅಭಿನಯ ಪ್ರಧಾನ ಮಕ್ಕಳ ನಗುವಿನ ಬೇಸಿಗೆ ‘ಬಣ್ಣ’ ಎ.12 ರಿಂದ 20 ರವರೆಗೆ ಸುಳ್ಯ ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ವಠಾರದಲ್ಲಿ ನಡೆಯಲಿದೆ ಎಂದು ರಂಗ ಮಯೂರಿ ಕಲಾ ಶಾಲೆಯ ಆಡಳಿತ ನಿರ್ದೇಶಕ ಲೋಕೇಶ್ ಊರುಬೈಲ್ ತಿಳಿಸಿದ್ದಾರೆ.
ಮಕ್ಕಳ ಪುಟಾಣಿ ಪ್ರಪಂಚದಲ್ಲಿ ಕಲೆ, ಸಾಹಿತ್ಯಕ್ಕೆ ಒತ್ತು ನೀಡಿ, ಗ್ರಾಮೀಣ ಮಕ್ಕಳ ಕನಸನ್ನ ಉತ್ತುಂಗಕ್ಕೆ ಏರಿಸುವ ಕಾರ್ಯ ಬಣ್ಣ ಶಿಬಿರದ ಮೂಲಕ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು. ಸುಳ್ಯದಲ್ಲಿ 2018ರಲ್ಲಿ ಆರಂಭಗೊಂಡ ರಂಗಮಯೂರಿ ಕಲಾಶಾಲೆ. ಕಲಾಶಿಕ್ಷಣದ ಜೊತೆಗೆ ಬೇಸಿಗೆ ರಜಾ ಸಮಯದಲ್ಲಿ ವಿದ್ಯಾರ್ಥಿಗಳನ್ನು ಮತ್ತಷ್ಟು ಕ್ರಿಯಾತ್ಮಕವಾಗಿ ವಿವಿಧ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡುವ ಉದ್ದೇಶದಿಂದ ಬೇಸಿಗೆ ಶಿಬಿರವನ್ನು ಆಯೋಜಿಸುತ್ತಾ ಬಂದಿರುತ್ತದೆ. ಪ್ರತೀ ವರ್ಷದಂತೆ ಈ ವರ್ಷವೂ ಮಕ್ಕಳ ಬೇಸಿಗೆ ಶಿಬಿರ ‘ಬಣ್ಣ 2025’ಶಿಬಿರ ಆಯೋಜನೆ ಮಾಡಲಾಗಿದೆ. ಶಿಬಿರದ ವಿಶೇಷವೆಂದರೆ ಈ ಬಾರಿ ಮಕ್ಕಳಲ್ಲಿ ಬಹುಭಾಷಾ ವೈವಿಧ್ಯತೆಯ ಜೊತೆ ಹೊಸ ಕ್ರಿಯಾತ್ಮಕ ಯೋಜನೆಯೊಂದಿಗೆ ಶಿಬಿರ ಮೂಡಿಬರಲಿದೆ. ಹೆಸರಾಂತ ರಂಗಸಂಸ್ಥೆಗಳಾದ ನೀನಾಸಂ, ರಂಗಾಯಣ, ರಂಗ ಅಧ್ಯಯನ ಕೇಂದ್ರ, ಶಿವಸಂಚಾರದ ನಾಟಕ ನಿರ್ದೇಶಕರು ಹಾಗೂ ಸಂಪನ್ಮೂಲ ವ್ಯಕ್ತಿಗಳು ತರಬೇತಿ ನೀಡಲಿದ್ದಾರೆ.
ಅಭಿನಯ ಪ್ರಧಾನ ರಂಗ ತರಬೇತಿಯೊಂದಿಗೆ ನಾಟಕ ರೂಪಕಗಳ ಹಬ್ಬದ ಜೊತೆ, ಕನ್ನಡ, ಅರೆಭಾಷೆ, ತುಳು, ಹಿಂದಿ, ಇಂಗ್ಲೀಷ್ ಭಾಷಾ ವೈವಿಧ್ಯ ನಾಟಕಗಳೊಂದಿಗೆ, ನವರಸಗಳ ಅಭಿನಯ ಕಾರ್ಯಾಗಾರವೂ ನಡೆಯಲಿದೆ. ಭಾಷಾ ಶುದ್ದಿ, ಸ್ಪಷ್ಟ ಉಚ್ಚಾರಣೆ, ರಂಗ ಚಲನೆ, ರಂಗ ಸಂಗೀತ, ರಂಗ ಪರಿಕರ ತಯಾರಿ, ರಂಗ ಪ್ರಸಾಧನ ಕಾರ್ಯಾಗಾರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಬಹುಭಾಷಾ ನಾಟಕಗಳ ಕಲಿಕೆ ಮತ್ತು ಅಭಿನಯ ಕಾರ್ಯಾಗಾರ ಹಾಗೂ ಪ್ರದರ್ಶನಕ್ಕೆ ಅವಕಾಶ ನೀಡಲಾಗುವುದು. ಕನ್ನಡ ತುಳು, ಅರೆಭಾಷೆ, ಇಂಗ್ಲೀಷ್, ಹಿಂದಿ ನಾಟಕಗಳ ಸಂಗಮ, ಭಾಷಾ ಪರಿಚಯ ಶಿಬಿರದ ವಿಶೇಷತೆಯಾಗಿದೆ ಎಂದು ಅವರು ವಿವರಿಸಿದರು.
ಪ್ರತೀ ಮಗುವಿಗೂ ದೈವ ಭಕ್ತಿಯ ಪಾಠ, ಸಹಭೋಜನ, ಆಟ ಪಾಠ ತರಬೇತಿಗೆ ವಿಶಾಲ ಸಭಾಂಗಣ, ಸ್ವಚ್ಛಗಾಳಿ, ಬೆಳಕು, ಕುಡಿಯುವ ನೀರು, ಅಚ್ಚುಕಟ್ಟಾದ ಶೌಚಾಲಯ ವ್ಯವಸ್ಥೆ ಜೊತೆಗೆ ಮಕ್ಕಳೊಂದಿಗೆ ಮಕ್ಕಳಾಗಿ ಬೆರೆಯುವ ತರಬೇತುದಾರರು, ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಲಿದ್ದಾರೆ.
7 ವಯಸ್ಸಿನಿಂದ 17 ವಯಸ್ಸಿನ ಮಕ್ಕಳಿಗೆ ಶಿಬಿರದಲ್ಲಿ ಭಾಗವಹಿಸುವ ಅವಕಾಶ ನೀಡಲಾಗಿದ್ದು ಹೆಸರು ನೋಂದಾಯಿಸಲು ಏಪ್ರಿಲ್ 11 ಕೊನೆಯ ದಿನವಾಗಿರುತ್ತದೆ. ಬೆಳಿಗ್ಗೆ 8.45ರಿಂದ ಸಂಜೆ 5 ಗಂಟೆಯ ತನಕ ಶಿಬಿರ ನಡೆಯಲಿದೆ ಎಂದು ಲೋಕೇಶ್ ಊರುಬೈಲು ತಿಳಿಸಿದರು.










