ಸುಳ್ಯ ಪೊಲೀಸ್ ಠಾಣೆಯಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಮುಖಂಡರುಗಳ ಸಭೆ ಪೊಲೀಸ್ ಠಾಣಾ ಸಭಾಂಗಣದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕ ಸಂತೋಷ್ ಬಿ.ಪಿ.ಯವರು ವಹಿಸಿದ್ದರು.
ಸಭೆಯಲ್ಲಿ ಮಾಹಿತಿ ನೀಡಿ ಮಾತನಾಡಿದ ಉಪ ನಿರೀಕ್ಷಕರು ‘ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ ಕಾನೂನು ಮಾಹಿತಿ ಮತ್ತು ಅರಿವು ನೀಡುವ ಉದ್ದೇಶದಿಂದ ಈ ರೀತಿಯ ಸಭೆಗಳನ್ನು ಮಾಡುತ್ತಿದ್ದು ಕಾನೂನಿನ ನೆರವು ಪಡೆಯಲು ಈ ಸಭೆಗಳು ಪ್ರಯೋಜನವಾಗಲಿದೆ. ಯಾವುದೇ ಕಾರಣಕ್ಕೂ ತಮ್ಮ ತಮ್ಮ ಪರಿಸರಗಳಲ್ಲಿ ಯಾವುದಾದರೂ ವಿಷಯಗಳ ಬಗ್ಗೆ ಗೊಂದಲಗಳು ಉಂಟಾದರೆ ಅದನ್ನು ತಾವುಗಳೇ ಪರಿಹರಿಸಲು ಹೋಗದೆ ಪೊಲೀಸ್ ಇಲಾಖೆಯ ಗಮನಕ್ಕೆ ಮಾಹಿತಿಯನ್ನು ನೀಡಬೇಕು. ಅಲ್ಲದೆ ವಾಸಿಸುವ ಪ್ರದೇಶಗಳಲ್ಲಿ ಯಾವುದಾದರೂ ಸಮಾಜ ಘಾತುಕ ಘಟನೆಗಳು ನಡೆದು ಬಂದಲ್ಲಿ ಠಾಣೆಗೆ ಮಾಹಿತಿ ನೀಡುವಂತೆ ಕೇಳಿಕೊಂಡರು.

ಸಭೆಯಲ್ಲಿ ಭಾಗವಹಿಸಿದ್ದ ಎಸ್ಸಿ,ಎಸ್ಟಿ ಸಮುದಾಯದ ಮುಖಂಡರುಗಳು ಮಾತನಾಡಿ ವಾರ್ಡ್ ಗಳಲ್ಲಿ ಬೀಟ್ ಪೊಲೀಸರ ನೇತೃತ್ವದಲ್ಲಿ ಸಭೆ ನಡೆಸುವಂತೆ,ಕೆಲವಡೆ ಕಂಡು ಬರುವ ಒಂದಕ್ಕಿ ಲಾಟರಿ ವ್ಯವಸ್ಥೆಯ ಬಗ್ಗೆ ಪೊಲೀಸ್ ಇಲಾಖೆಯಿಂದ ನಿಗಾ ವಹಿಸುವಂತೆ,ಕೆಲವು ಕಾಲೋನಿಗಳಲ್ಲಿ ಮದ್ಯಪಾನ ವ್ಯಸನಿಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಂತಹ ಕಾಲೋನಿಗಳಲ್ಲಿ ಸಭೆ ನಡೆಸಿ ಅವರಲ್ಲಿ ಜಾಗೃತಿ ಮೂಡಿಸುವ ಕುರಿತು ಅಭಿಪ್ರಾಯವನ್ನು ಸಭೆಯಲ್ಲಿ ಹಂಚಿಕೊಂಡರು.
ಸಾರ್ವಜನಿಕರ ಸೇವೆಗಾಗಿ ಪೊಲೀಸ್ ಇಲಾಖೆ ದುಡಿಯುತ್ತಿದ್ದು ಜನರ ಈ ಬೇಡಿಕೆಗೆ ಇಲಾಖೆಯಿಂದ ಸ್ಪಂದಿಸುವ ಭರವಸೆಯನ್ನು ನೀಡಿದರು.ಅಲ್ಲದೆ ಮಾದಕ ವ್ಯಸನಗಳಿಂದ ಪರಿಸರದ ಜನರನ್ನು ಜಾಗೃತಿಗೊಳಿಸಬೇಕು ಮತ್ತು ಯಾರಾದರೂ ವ್ಯಕ್ತಿಗಳು ಈ ರೀತಿಯ ಘಟನೆಗಳಲ್ಲಿ ಭಾಗಿಯಾಗಿದ್ದರೆ ಕೂಡಲೇ ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡಬೇಕೆಂದು ಮುಖಂಡರುಗಳಲ್ಲಿ ಅವರು ವಿನಂತಿಸಿಕೊಂಡರು.
ಸಭೆಯಲ್ಲಿ ಮುಖಂಡರುಗಳಾದ ನಂದರಾಜ್ ಸಂಕೇಶ್, ಸರಸ್ವತಿ ಬೊಳಿಯಮಜಲು, ಮೋನಪ್ಪ ಮಂಡೆಕೋಲು, ಮೋಹನ್ ಕಲ್ಲುಗುಂಡಿ,ರಮೇಶ್ ಬೂಡು, ರಮೇಶ್ ಕೊಡಂಕೇರಿ, ಆನಂದ ನಾಯ್ಕ ಆಲೆಟ್ಟಿ, ಶಕುಂತಳಾ ದೇವಿ ಹಳೆಗೇಟು, ಮೊಹನ್ ಕುಮಾರ್, ಯತೀಶ್ ಕೆ., ಚಂದ್ರ ಕುಮಾರ್, ಮೀನಾಕ್ಷಿ ಅರಂಬೂರು, ದೇವಪ್ಪ ನಾಯ್ಕ್, ಮಲ್ಲೇಶ್ ಕುಡೆಕಲ್ಲು ಮೊದಲಾದವರು ಉಪಸ್ಥಿತರಿದ್ದರು

























