ಪೆರುವಾಜೆ : ಮಾಪಳಮಜಲು ಬಳಿ ರಸ್ತೆ ಬದಿ ಕುಸಿತ – ಅಪಾಯದ ಭೀತಿ

0

ಪೆರುವಾಜೆಯಲ್ಲಿ ಎ.28 ರಂದು ರಾತ್ರಿ ಸುರಿದ ಭಾರೀ ಮಳೆಗೆ
ಬೆಳ್ಳಾರೆ-ಪೆರುವಾಜೆ-ಸವಣೂರು ರಸ್ತೆಯ ಪೆರುವಾಜೆಯ ಪುದ್ದೊಟ್ಟು ಸೇತುವೆ ಬಳಿ ಮಾಪ್ಲಮಜಲು ಎಂಬಲ್ಲಿ ರಸ್ತೆ ಬದಿ ಕುಸಿದಿದ್ದು ವಾಹನ ಸವಾರರಿಗೆ ಆತಂಕ ಎದುರಾಗಿದೆ.
ಗೌರಿ ಹೊಳೆಗೆ ತಾಗಿಕೊಂಡಿರುವ ರಸ್ತೆ ಬದಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಪೈಪ್ ಅಳವಡಿಕೆ ಕೆಲಸ ಮಾಡಿದ್ದು ಇದನ್ನು ಸರಿಯಾಗಿ ಮುಚ್ಚದೆ ಇದ್ದುದರಿಂದ ಈ ಪರಿಸ್ಥಿತಿ ನಿರ್ಮಾಣವಾಗಿರುವುದಾಗಿ ತಿಳಿದು ಬಂದಿದೆ.


ರಸ್ತೆ ಬದಿಯಲ್ಲಿ ಪೈಪ್ ಅಳವಡಿಸಿದಲ್ಲಿ ಮಳೆ ನೀರು ನಿಂತು ರಸ್ತೆ ಬದಿಯ ಮಣ್ಣು ಹೊಳೆಗೆ ಜರಿದು ಬಿದ್ದಿದ್ದು ಡಾಮರು ರಸ್ತೆಯೂ ಬಿರುಕು ಬಿಟ್ಟಿರುವುದಾಗಿ ತಿಳಿದು ಬಂದಿದೆ.
ಇನ್ನಷ್ಟು ಮಣ್ಣು ಜರಿದು ಬಿದ್ದಲ್ಲಿ ಡಾಮರು ರಸ್ತೆಯ ಒಂದು ಬದಿ ಜರಿದು ಬೀಳಲಿದ್ದು ವಾಹನ ಸವಾರರಿಗೆ ತೊಂದರೆಯಾಗಲಿದೆ ಎಂದು ತಿಳಿದು ಬಂದಿದೆ.