ಜಲಪಾತದಂತೆ ಹರಿದ ನೀರು : ಗುಡ್ಡದ ಕಸ, ಮಣ್ಣುಗಳೆಲ್ಲ ಸ್ಥಳೀಯ ಮನೆಯ ಅಂಗಳದಲ್ಲಿ
ಮನೆಯವರಿಗೆ ತೊಂದರೆ : ಸಮಸ್ಯೆಗೆ ನ.ಪಂ. ಸ್ಪಂದಿಸುವುದೇ ?

ಸುಳ್ಯ ಕುರುಂಜಿಗುಡ್ಡೆಯಲ್ಲಿ ಅಮೃತ್ 2 ಯೋಜನೆಯಲ್ಲಿ ನಿರ್ಮಾಣಗೊಂಡಿರುವ ನೀರಿನ ಟ್ಯಾಂಕ್ ನಿಂದ ನೀರು ಹೊರ ಹರಿಯಲು ಬಿಟ್ಟ ಪರಿಣಾಮ, ಅದು ಜಲಪಾತದಂತೆ ಹರಿದು ಗುಡ್ಡದ ಕಸ, ಮಣ್ಣುಗಳನ್ನು ಕೊಚ್ಚಿಕೊಂಡು ಹೋಗಿ ಸ್ಥಳೀಯ ಮನೆಯ ಅಂಗಳಕ್ಕೆ ನುಗ್ಗಿದ ಘಟನೆ ವರದಿಯಾಗಿದೆ. ಅಂಗಳದಲ್ಲಿ ಕೆಸರು, ಮಣ್ಣು ನಿಂತು ಮನೆಯವರು ತೊಂದರೆಗೊಳಗಾಗಿದ್ದಾರೆ.
ಅಮೃತ್ 2 ಯೋಜನೆಯಲ್ಲಿ ಸುಳ್ಯದಲ್ಲಿ ಕುಡಿಯುವ ನೀರಿನ ಕಾಮಗಾರಿ ನಡೆಯುತ್ತಿದೆ. ಕುರುಂಜಿಗುಡ್ಡೆಯಲ್ಲಿ ಬೃಹತ್ ಟ್ಯಾಂಕ್ ನಿರ್ಮಾಣ ಮಾಡಲಾಗಿದೆ. ಇಂದು ಕುರುಂಜಿಗುಡ್ಡೆ ಟ್ಯಾಂಕ್ ಗೆ ನೀರು ತುಂಬಿಸಲಾಗಿದ್ದು, ಬಳಿಕ ಮಧ್ಯಾಹ್ನ ಆ ನೀರನ್ನು ಹೊರ ಹರಿಯುವಂತೆ ಮಾಡಲಾಯಿತು. ಈ ನೀರು ಜಲಪಾತದ ರೀತಿಯಲ್ಲಿ ಹರಿಯಿತು. ಗುಡ್ಡೆಯ ಮೇಲಿನ ಟ್ಯಾಂಕ್ ನಿಂದ ಹೊರ ಬಂದ ನೀರು ಕಸ ಕಡ್ಡಿ, ಮಣ್ಣುಗಳನ್ನು ಕೊಚ್ಚಿ ಕೊಂಡು, ಶಂಕರ ಪಾಟಾಳಿಯವರ ಮನೆ ಬಳಿಯಾಗಿ ಹರಿದು, ಕೇರ್ಪಳದ ಮೋನಪ್ಪ ಎಂಬವರ ಅಂಗಳಕ್ಕೆ ನುಗ್ಗಿತು. ಕೆಸರು ನೀರು ದಪ್ಪಗೆ ಬರುತ್ತಿರುವುದನ್ನು ಕಂಡ ಮನೆಯವರು ಭಯಭೀತರಾದರು. ಕೆಲವೇ ಗಂಟೆಯಲ್ಲಿ ನೀರಿನ ಹರಿವು ನಿಂತಿತು. ಆದರೆ ಅಂಗಳದಲ್ಲಿ ದಪ್ಪಗೆ ಕೆಸರು ಹಾಗೂ ಕಸಗಳು ನಿಂತಿವೆ. ರಸ್ತೆಯಲ್ಲಿ ಪಕ್ಕದಲ್ಲಿ ನೀರು ಹರಿಯುವ ಮೋರಿ ಕೂಡಾ ಮಣ್ಣು ತುಂಬಿ ಬಂದ್ ಆಗಿದೆ.








ನೀರಿನ ವ್ಯವಸ್ಥೆಗಳು ನಗರಕ್ಕೆ ಅಗತ್ಯವಾಗಿ ಬೇಕು. ಆದರೆ ಅದರ ಎಕ್ಸ್ ಪರಿಮೆಂಟ್ ಮಾಡುವಾಗ ನೋಡಿಕೊಂಡು ಮಾಡಬೇಕು. ಜನರಿಗೆ ಸಮಸ್ಯೆ ಮಾಡಿಕೊಂಡು ಕೆಲಸ ಮಾಡುವ ಕ್ರಮ ಸರಿಯಲ್ಲ ಎಂದು ನೀರು ಹರಿಯುವುದನ್ನು ಕಂಡ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಣ್ಣುಮಿಶ್ರಿತ ನೀರು ದಪ್ಪಗೆ ಹರಿದು ನಮ್ಮ ಅಂಗಳಕ್ಕೆ ನುಗ್ಗಿದೆ. ಈ ರೀತಿ ಜನರಿಗೆ ತೊಂದರೆ ಕೊಟ್ಟು ಕೆಲಸ ಮಾಡುವ ಕ್ರಮ ಸರಿಯಲ್ಲ. ನಾವು ಈ ಭಾಗದ ವಾರ್ಡ್ ಸದಸ್ಯರಿಗೆ ತಿಳಿಸಿದ್ದೇವೆ. ಜನ ಕಳುಹಿಸಿ ಅಂಗಳದ ಕೆಸರು ತೆಗೆಯುವುದಾಗಿ ಹೇಳಿದ್ದಾರೆ. ಇನ್ನೂ ಜನ ಬಂದಿಲ್ಲ ಎಂದು ಮೋನಪ್ಪರು ತಿಳಿಸಿದ್ದಾರೆ.
ನ.ಪಂ ಮುಖ್ಯಾಧಿಕಾರಿ ಸುಧಾಕರ್ ರನ್ನು ಸುದ್ದಿ ವತಿಯಿಂದ ಸಂಪರ್ಕಿಸಿ ವಿಚಾರಿಸಿದಾಗ, ಟ್ಯಾಂಕ್ ಗೆ ನೀರು ಹರಿಯ ಬಿಡಲಾಗಿದೆ. ಆ ನೀರನ್ನು ಹೊರ ಹರಿಯಲು ಬಿಟ್ಟಿರಬಹುದು. ಈ ರೀತಿಯ ಸಮಸ್ಯೆ ಆದುದು ನೀವು ಹೇಳಿಯೇ ನಮಗೆ ಗೊತ್ತಾದುದು.ನಾವು ಜನ ಕಳುಹಿಸಿ ಕೆಸರು ತೆಗೆಸುತ್ತೇವೆ. ಮುಂದೆ ಈ ರೀತಿ ಸಮಸ್ಯೆ ಆಗದಂತೆ ಕೆಲಸ ನಿರ್ವಹಿಸಲು ಆ ಕಾಮಗಾರಿ ನಿರ್ವಹಿಸುವವರಿಗೆ ಸೂಚನೆ ನೀಡುತ್ತೇವೆ ಎಂದು ತಿಳಿಸಿದ್ದಾರೆ.










