ರಸ್ತೆ ತುಂಬೆಲ್ಲಾ ಕೆಸರು ಮಣ್ಣು ಹರಿದು ವಾಹನ ಸವಾರರಿಗೆ ತೊಂದರೆ
ಬಹುಗ್ರಾಮ ಕುಡಿಯುವ ನೀರಿನ ಗುತ್ತಿಗೆ ವಹಿಸಿಕೊಂಡ ಎಸ್ ಎನ್ ಸಿ ಕಂಪೆನಿಯ ಅವೈಜ್ಞಾನಿಕ ಕಾಮಗಾರಿಯಿಂದ ಏಪ್ರಿಲ್ 27ರಂದು ಸಂಜೆ ಸುರಿದ ಭಾರೀ ಮಳೆಗೆ ಚರಂಡಿ ನೀರು ರಸ್ತೆ ಮೇಲೆ ಹರಿದು ಪೈಪ್ ಹಾಕಲು ತೆಗೆದಿದ್ದ ಮಣ್ಣು ಮಳೆ ನೀರು ಜೊತೆಗೆ ಹರಿದು ನೆಟ್ಟಾರು ಜಂಕ್ಷನ್ ನಲ್ಲಿ ಕೆಸರು ನಿಂತು ವಾಹನ ಸವಾರರಿಗೆ, ಸಾರ್ವಜನಿಕರಿಗೆ ತೊಂದರೆಯಾಯಿತು.








ಹತ್ತಿರದ ಅಂಗಡಿಗೆ, ಮನೆಗಳಿಗೆ ಕೆಸರು ನೀರು ನುಗ್ಗಿ ತೀವ್ರ ತೊಂದರೆ ಅನುಭವಿಸಿದರು. ಕೂಡಲೇ ಗುತ್ತಿಗೆದಾರರಿಗೆ ಫೋನ್ ಮಾಡಿ ತಿಳಿಸಲಾಯಿತು.ಸುಮಾರು ರಾತ್ರಿ ಹೊತ್ತಿಗೆ ಜೆ ಸಿ ಬಿ ಬಂದು ರಸ್ತೆಯಲ್ಲಿದ್ದ ಮಣ್ಣನ್ನು ತೆರವುಗೊಳಿಸಲಾಯಿತು. ಸ್ಥಳೀಯರು ಗುತ್ತಿಗೆವಹಿಸಿಕೊಂಡ ಕಂಪನಿ ವಿರುದ್ದ ಆಕ್ರೋಶ ಹೊರಹಾಕಿದರು. ರಾಜ್ಯ ಹೆದ್ದಾರಿ ಬದಿಯಿದ್ದ ಸೂಕ್ತ ಚರಂಡಿಯನ್ನು ಕುಡಿಯುವ ನೀರಿನ ಬೃಹತ್ ಪೈಪ್ ಅಳವಡಿಸುವಾಗ ಬೇಕಾಬಿಟ್ಟಿ ಅಗೆದುಬಿಡಲಾಗಿತ್ತು ಈ ಸಂದರ್ಭದಲ್ಲಿ ಸ್ಥಳೀಯರು ಸೂಕ್ತ ಚರಂಡಿ ಮಾಡಿಕೊಡುವಂತೆ ಎಷ್ಟೇ ಬಾರಿ ವಿನಂತಿಸಿಕೊಂಡರೂ ಗುತ್ತಿಗೆ ವಹಿಸಿಕೊಂಡ ಕಂಪೆನಿ ಈ ಬಗ್ಗೆ ನಿರ್ಲಕ್ಷ ವಹಿಸಿತ್ತು. ಇತ್ತೀಚೆಗೆ ಜೋರಾದ ಮಳೆ ಬಿದ್ದು ಸಮಸ್ಯೆಯಾದಾಗ ಜೆ ಸಿ ಬಿ ತೆಗೆದುಕೊಂಡು ಬಂದು ಚರಂಡಿಯಲ್ಲಿ ಇದ್ದ ಮಣ್ಣು ತೆಗೆದು ರಸ್ತೆ ಬದಿ ಹಾಕಲಾಗಿತ್ತು ಮತ್ತು ಮೋರಿ ತುಂಬಾ ಮಣ್ಣು ತುಂಬಿದ್ದು ಅದನ್ನು ಹಾಗೆಯೇ ಬಿಡಲಾಗಿತ್ತು. ಅದರಿಂದ ಇಷ್ಟೆಲ್ಲಾ ಅನಾಹುತ ಆಗಲು ಕಾರಣವಾಗಿದೆ.ಸ್ಥಳಕ್ಕೆ ಶಾಸಕರಾದ ಕುಮಾರಿ ಭಾಗೀರಥಿ ಮುರುಳ್ಯ ಭೇಟಿ ನೀಡಿ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಇಂಜಿನಿಯರ್ ಹಾಗೂ ಗುತ್ತಿಗೆದಾರರಿಗೆ ಸೂಚಿಸಿದರು. ಸಾರ್ವಜನಿಕ ಆಸ್ತಿ ಪಾಸ್ತಿ ಹಾಳು ಮಾಡಿದ ಬಗ್ಗೆ ಸ್ಥಳೀಯರು ಶಾಸಕರಿಗೆ ಮನವರಿಕೆ ಮಾಡಿದರು.

ಇನ್ನು ಮುಂದೆ ಸಮಸ್ಯೆ ಉಂಟಾದರೆ ಕಂಪೆನಿಗೆ ಮುತ್ತಿಗೆ ಹಾಕೋದಾಗಿ ಸಾರ್ವಜನಿಕರು ಹೇಳಿದರು. ಶಾಸಕರ ಭೇಟಿ ಸಂದರ್ಭ ನೆಟ್ಟಾರು ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಪ್ರವೀಣ್ ಚಾವಡಿ ಬಾಗಿಲು, ಬೆಳ್ಳಾರೆ ಸಿ ಎ ಬ್ಯಾಂಕ್ ಉಪಾಧ್ಯಕ್ಷರಾದ ಪದ್ಮನಾಭ ಶೆಟ್ಟಿ ಪೆರುವಾಜೆ, ನಿರ್ದೇಶಕರಾದ ಭಾಸ್ಕರ್ ನೆಟ್ಟಾರು, ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು, ಇಲಾಖಾ ಎಇಇ, ಇಂಜಿನಿಯರ್, ಗುತ್ತಿಗೆ ಕಂಪೆನಿ ವಹಿಸಿಕೊಂಡ SNC ಯ ಶ್ರೀನಿವಾಸ್ ಕುಲಕರ್ಣಿ ಜೊತೆಗಿದ್ದರು.











