ಗೂನಡ್ಕ: ರಸ್ತೆ ಬದಿ ಇರಿಸಿದ್ದ ಗ್ಯಾಸ್ ಸಿಲಿಂಡರ್ ಕಳ್ಳತನ

0

ಮರ್ಕಂಜ ಬಳಿ ಕಳ್ಳನ ಸೆರೆ : ಪೊಲೀಸರಿಗೆ ಒಪ್ಪಿಸಿದ ಊರಿನವರು

ಗೂನಡ್ಕದ ಪೆಲ್ತಡ್ಕ ಬಳಿ ರಸ್ತೆ ಬದಿಯಲ್ಲಿ ಗ್ಯಾಸ್ ಪಡೆಯಲೆಂದು ಇಟ್ಟಿದ್ದ ಖಾಲಿ ಗ್ಯಾಸ್ ಹಂಡೆಯನ್ನು ಕಾರಿನಲ್ಲಿ ಬಂದ ಖದೀಮ ಹೊತ್ತೊಯ್ದು ಬಳಿಕ ಮರ್ಕಂಜ ಬಳಿ ಊರಿನವರ ಕೈಗೆ ಸಿಕ್ಕಿ ಈಗ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿದ ಘಟನೆ ಇಂದು ಮಧ್ಯಾಹ್ನ ವರದಿಯಾಗಿದೆ.

ಪೆಲ್ತಡ್ಕ ನಿವಾಸಿ ಕರುಣಾಕರ ಎಂಬುವವರು ಲೈನ್‌ನಲ್ಲಿ ಬರುವ ಗ್ಯಾಸ್ ಪಡೆಯಲೆಂದು ತಮ್ಮ ಮನೆಯ ಮುಂಭಾಗ ರಸ್ತೆ ಬದಿಯಲ್ಲಿ ಖಾಲಿ ಗ್ಯಾಸ್ ಹಂಡೆಯನ್ನು ಇರಿಸಿದ್ದರು.

ಮಧ್ಯಾಹ್ನ ಸಮಯದಲ್ಲಿ ಈ ರಸ್ತೆಯಲ್ಲಿ ಬಂದಿರುವ ಆಲ್ಟೋ ಕಾರು ಚಾಲಕ ಸಿಲಿಂಡರ್ ಬಳಿ ಬಂದು ಕಾರನ್ನು ನಿಲ್ಲಿಸಿ ಸಿಲಿಂಡರ್ ಅನ್ನು ಹೊತ್ತು ಕಾರಿನಲ್ಲಿ ಹಾಕಿ ಪರಾರಿ ಯಾಗಿದ್ದ.

ಬಳಿಕ ಕಾರು ಸಂಪಾಜೆ ಕಡೆಗೆ ಹೋಗಿದ್ದು ಇದನ್ನು ಅಲ್ಲೇ ಸ್ವಲ್ಪ ದೂರದಲ್ಲಿ ನಿಂತು ನೋಡುತ್ತಿದ್ದ ಕರುಣಾಕರವರ ತಮ್ಮ ಕಾರಿನ ಬಳಿ ಬಂದಾಗ ಕಾರು ಅಲ್ಲಿಂದ ವೇಗವಾಗಿ ಮುಂದಕ್ಕೆ ಹೋಗಿದೆ. ಕೂಡಲೇ ಅವರು ಕಾರನ್ನು ಹಿಂಬಾಲಿಸಿದ್ದು ಮುಂದೆ ಹೋಗಿದ್ದ ಕಾರು ಮರಳಿ ಬಂದು ಮರ್ಕಂಜದತ್ತ ಹೋಯಿತು.

ಕೂಡಲೇ ಕರುಣಾಕರ ರವರು ಮರ್ಕಂಜದ ಅಧ್ಯಕ್ಷರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದು ಅಲ್ಲಿ ಸ್ಥಳೀಯರು ಕಾರನ್ನು ಹಿಡಿಯಲು ಕಾದು ನಿಂತಿದ್ದು ಅಲ್ಲಿಗೆ ಬಂದ ಕಳ್ಳ ಊರಿನವರ ಕೈಗೆ ಸಿಕ್ಕಿ ಸ್ಥಳೀಯರು ಕಳ್ಳನನ್ನು ಮತ್ತು ಕಾರನ್ನು ಪೊಲೀಸರಿಗೆ ಒಪ್ಪಿಸಿರುವುದಾಗಿ ತಿಳಿದು ಬಂದಿದೆ.