14 ಹೆಬ್ಬಾವು ಮೊಟ್ಟೆಗೆ ಪಡೆದು ಮರಿಯಾದ ಬಳಿಕ ಸುಳ್ಯದ ಅರಣ್ಯದಲ್ಲಿ ಬಿಟ್ಟ ಉರಗತಜ್ಞ

0

ಸುಳ್ಯ ಅರಣ್ಯ ಇಲಾಖೆ ಸಹಕಾರ

ಮಂಡೆಕೋಲಿನ ಪೇರಾಲಿನ ಮನೆಯೊಂದರ ಪಕ್ಕದಲ್ಲಿ ಕಂಡು ಬಂದ ಹೆಬ್ಬಾವುಗಳ ಮೊಟ್ಟೆಯನ್ನು ಪುತ್ತೂರಿನ ಉರಗತಜ್ಞರೊಬ್ಬರು ಪಡೆದು ಮರಿಯಾದ ಬಳಿಕ ವಾಪಸು ಸುಳ್ಯದ ಅರಣ್ಯಕ್ಕೆ ತಂದು ಬಿಟ್ಟಿರುವ ಘಟನೆ ವರದಿಯಾಗಿದೆ.

ಪೇರಾಲಿನ ಹರೀಶ್ ಎಂಬವರ ಮನೆಯ ಸಮೀಪ ಎರಡು ತಿಂಗಳ ಹಿಂದೆ ೧೪ ಹೆಬ್ಬಾವಿನ ಮೊಟ್ಟೆಗಳು ಕಂಡು ಬಂದಿತ್ತು. ಈ ವಿಷಯವನ್ನು ಆ ಮನೆಯವರು ಸುಳ್ಯ ಅರಣ್ಯ ಇಲಾಖೆಯವರಿಗೆ ವಿಷಯ ತಿಳಿಸಿದರು. ಸುಳ್ಯ ಅರಣ್ಯಾಧಿಕಾರಿಗಳು ಪೇರಾಲಿಗೆ ಹೋಗಿ ಪರಿಶೀಲನೆ ನಡೆಸಿ, ಮೊಟ್ಟೆ ಅಲ್ಲೇ ಇದ್ದು ಮರಿಯಾಗುವಂತೆ ಯೋಜನೆ ರೂಪಿಸಿದಾಗ ಆ ಮನೆಯವರು ಅದಕ್ಕೆ ಒಪ್ಪಲಿಲ್ಲವೆನ್ನಲಾಗಿದೆ.

ಬಳಿಕ ಅರಣ್ಯ ಇಲಾಖೆಯವರು ಪುತ್ತೂರಿನ ಉರಗತಜ್ಞ ತೇಜಸ್ ಎಂಬವರನ್ನು ಸಂಪರ್ಕ ಮಾಡಿ, ವಿಷಯ ತಿಳಿಸಿ ಸುಳ್ಯಕ್ಕೆ ಬರುವಂತೆ ಮಾಡಿದರು. ಅದರಂತೆ ತೇಜಸ್ ಪೇರಾಲಿಗೆ ಬಂದು ಅರಣ್ಯ ಇಲಾಖೆಯವರಿದ್ದು ಹೆಬ್ಬಾವು ಮೊಟ್ಟೆಗಳನ್ನು ತಮ್ಮ ಸುಪರ್ದಿಗೆ ಪಡೆದುಕೊಂಡರು. ಆ ಬಳಿಕ ಅದಕ್ಕೆ ಶಾಖ ಕೊಡುವ ವ್ಯವಸ್ಥೆ ನಡೆಸಿದರು. ಒಂದು ತಿಂಗಳ ಹಿಂದೆ ಎಲ್ಲಾ ಮೊಟ್ಟೆಗಳು ಒಡೆದು ಮರಿಗಳು ಹೊರಬಂದವು. ಜೂ.೨೮ರಂದು ಆ ಮರಿಗಳನ್ನು ಸುಳ್ಯಕ್ಕೆ ತಂದ ತೇಜಸ್ ರವರು ಸುಳ್ಯ ವಲಯಾರಣ್ಯಾಧಿಕಾರಿ ಮಂಜುನಾಥ್ ಹಾಗೂ ಸಿಬ್ಬಂದಿಗಳ ಸಮ್ಮುಖ ಹೆಬ್ಬಾವುಗಳನ್ನು ಕಾಡಿಗೆ ಬಿಟ್ಟಿರುವುದಾಗಿ ತಿಳಿದುಬಂದಿದೆ.

“ಹಾವಿನ ಮೊಟ್ಟೆ ಸಿಕ್ಕಿದ ತಕ್ಷಣ ಮಾಹಿತಿ ಬಂದಿತ್ತು. ಮೊಟ್ಟೆ ಅಲ್ಲೇ ಒಡೆದು ಮರಿ ಬರಲು ಮನೆಯವರು ಭಯಪಟ್ಟರು. ಆದ್ದರಿಂದ ಉರಗತಜ್ಞರಿಗೆ ನೀಡಿದ್ದು, ಇದೀಗ ಎಲ್ಲಾ ಮೊಟ್ಟೆ ಒಡೆದು ಮರಿ ಬಂದಿದ್ದು ಅದನ್ನು ಸುಳ್ಯ ವಲಯದಲ್ಲೇ ಕಾಡಿಗೆ ಬಿಡಲಾಯಿತು ಎಂದು ಸುಳ್ಯ ರೇಂಜರ್ ಮಂಜುನಾಥ್ ತಿಳಿಸಿದ್ದಾರೆ.