ಸುಬ್ರಹ್ಮಣ್ಯದಲ್ಲಿ ಉಚಿತ ಯಕ್ಷಗಾನ ನಾಟ್ಯ ತರಬೇತಿ ಉದ್ಘಾಟನೆ

0

ಯಕ್ಷದ್ರುವ ಸತೀಶ್ ಪಟ್ಲ ಇವರ ಸಾರಥ್ಯದಲ್ಲಿ ನಡೆಯುವ ಪಟ್ಲ ಫೌಂಡೇಶನ್ ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನಡೆಯುವ ಉಚಿತ ಯಕ್ಷಗಾನ ನಾಟ್ಯ ತರಗತಿಯು ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಜುಲೈ 11ರಂದು ಉದ್ಘಾಟನೆಗೊಂಡಿತು.ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ರಾಮಕೃಷ್ಣ ಹೊಳ್ಳಾರು ಇವರು ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡುತ್ತಾ, ತುಳುನಾಡಿನ ಗಂಡು ಕಲೆ ಎಂದು ಪ್ರಸಿದ್ಧವಾದ ಯಕ್ಷಗಾನವನ್ನು ದೇಶ ವಿದೇಶಗಳಲ್ಲಿ ಪರಿಚಯಿಸಿದ ಖ್ಯಾತಿ ಪಟ್ಲ ಫೌಂಡೇಶನ್ ಗೆ ಇದೆ. ಉಚಿತವಾಗಿ ಮಕ್ಕಳಿಗೆ ಯಕ್ಷ ಶಿಕ್ಷಣವನ್ನು ನೀಡುತ್ತಿರುವುದು ನಮ್ಮೆಲ್ಲರ ಸೌಭಾಗ್ಯ ಎಂದು ಹೇಳಿದರು.

ಭಾಗವತರೂ ಸಂಸ್ಥೆಯ ಕನ್ನಡ ಉಪನ್ಯಾಸಕರೂ ಆದ ಶ್ರೀಮತಿ ಭವ್ಯಶ್ರೀ ಕುಲ್ಕುಂದ ಅವರು ಯಕ್ಷಗಾನದ ಹಾಡುಗಳನ್ನು ಹಾಡಿದರು.ಯಕ್ಷ ಗುರುಗಳಾಗಿ ಸುಂದರ ಅರಸಿನಮಕ್ಕಿ ಇವರು ಯಕ್ಷ ಶಿಕ್ಷಣದ ಕಿರುಪರಿಚಯವನ್ನು ಮಕ್ಕಳಿಗೆ ನೀಡಿದರು .ಮುಖ್ಯ ಶಿಕ್ಷಕಿ ಶ್ರೀಮತಿ ನಂದಾ ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಹಿರಿಯ ಸಹ ಶಿಕ್ಷಕ ಶ್ರೀ ಕೃಷ್ಣ ಭಟ್ ಪ್ರಾಸ್ತಾವಿಕ ಮಾತುಗಳ ನ್ನಾಡಿದರು . ರಘು ಬಿಜೂರು ಕಾರ್ಯಕ್ರಮ ನಿರ್ವಹಿಸಿ ಸತೀಶ್ ವಂದಿಸಿದರು.ಪ್ರತಿ ಶಾಲೆಯಿಂದ 40 ವಿದ್ಯಾರ್ಥಿಗಳಂತೆ ದಕ್ಷಿಣ ಕನ್ನಡದ 6 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ 2025-26 ನೇ ಸಾಲಿನಲ್ಲಿ ಉಚಿತ ಯಕ್ಷಗಾನ ತರಬೇತಿ ಲಭಿಸುತ್ತಿದೆ.