ಅರಂತೋಡು-ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಆನೆ ಮತ್ತು ಇತರೆ ಕಾಡುಪ್ರಾಣಿಗಳ ಹಾವಳಿಯಿಂದ ಸಂತ್ರಸ್ತರಾದ ಕೃಷಿಕರ ಸಮಾಲೋಚನಾ ಸಭೆಯು 12 ರಂದು ಸಂಘದ ಸಿರಿಸೌಧ ಸಭಾಭವನದಲ್ಲಿ ಶಾಸಕರಾದ ಕು. ಭಾಗೀರಥಿ ಮುರುಳ್ಯ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಪ್ರಾಸ್ತಾವಿಕವಾಗಿ ಮಾತನಾಡಿದ ಅರಂತೋಡು-ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಸಂತೋಷ್ ಕುತ್ತಮೊಟ್ಟೆಯವರು ಕಾಡುಪ್ರಾಣಿಗಳ ಹಾವಳಿಯಿಂದ ಎದುರಾಗುತ್ತಿರುವ ತೊಂದರೆಗಳನ್ನು ಶಾಸಕರ ಹಾಗು ಅರಣ್ಯಾಧಿಕಾರಿಗಳ ಮುಂದೆ ತೆರೆದಿಟ್ಟರು. ಆನೆಗಳ ಹಾವಳಿಯಿಂದ ನಾವು ವರ್ಷವಿಡೀ ಕಷ್ಟಪಟ್ಟು ಬೆಳೆಸಿದ ಕೃಷಿ ನಮ್ಮ ಕೈಗೆ ಸಿಗದೇ ನಮ್ಮ ಆರ್ಥಿಕ ಮೂಲವನ್ನೇ ಕಾಡುಪ್ರಾಣಿಗಳು ಕಸಿದುಕೊಂಡಿವೆ. ಇದನ್ನು ಪ್ರಥಮ ಆದ್ಯತೆಯಲ್ಲಿ ನಿವಾರಿಸಬೇಕು. ಆನೆ ಕಂದಕಗಳನ್ನು ನಿರ್ಮಿಸುವುದು, ನೈಸರ್ಗಿಕವಾಗಿ ಜೇನುಕುಟುಂಬಗಳನ್ನು ಕಾಡಂಚಿನಲ್ಲಿ ಸಾಕುವುದರಿಂದ ಆನೆಗಳು ಊರಿಗೆ ದಾಳಿಮಾಡಿ ಕೃಷಿ ನಾಶಮಾಡುವುದನ್ನು ತಡೆದ ಉದಾಹರಣೆಗಳು ನಮ್ಮ ರಾಜ್ಯದಲ್ಲಿದೆ. ಅಂತಹ ಜೇನು ಕುಟುಂಬಗಳನ್ನು ಕಾಡಂಚಿನಲ್ಲಿ ಸಾಕುವುದು. ಸೋಲಾರ್ ಹ್ಯಾಂಗಿಂಗ್ ಬೇಲಿಗಳನ್ನು ನಿರ್ಮಿಸುವುದು. ಇತರೆ ಸೋಲಾರ್ ಬೇಲಿಗಳಿಗೆ ನೀಡುವ ಸಬ್ಸಿಡಿ ದರವನ್ನು ಹೆಚ್ಚಿಸುವುದು . ದ. ಕ ಜಿಲ್ಲೆಗೆ ಟಾಸ್ಕ್ ಫೋರ್ಸ್ ಒದಗಿಸುವುದು ಮುಂತಾದವುಗಳ ಬಗ್ಗೆ ಗಮನ ಸೆಳೆದು ಇಲಾಖೆ ಸಹಕರಿಸುವಂತೆ ಮನವಿ ಮಾಡಿದರು.









ಸಭೆಯಲ್ಲಿ ಉಪಸ್ಥಿತರಿದ್ದ ಮೇದಪ್ಪ ಉಳುವಾರು, ಕಿಶೋರ್ ಕುಮಾರ್ ಉಳುವಾರು, ಕೆ. ಆರ್. ಗಂಗಾಧರ್, ಲೋಹಿತ್ ಮೇಲಡ್ತಲೆ, ಆನಂದ ಆಜ್ಜನಗದ್ದೆ, ಶ್ರೀಕಾಂತ್ ಬಾಜಿನಡ್ಕ, ದಿನೇಶ್ ಬಾಳೆಕಜೆ, ಡಾ. ಲಕ್ಷ್ಮೀಶ್ ಕಲ್ಲುಮುಟ್ಲು, ಮನಮೋಹನ ಚುಕ್ರಡ್ಕ ಮಾತನಾಡಿ ಆನೆ ದಾಳಿಯಿಂದ ತಮಗಾದ ತೊಂದರೆಯನ್ನು ಹಂಚಿಕೊಂಡು ಕಾಡು ಪ್ರಾಣಿಗಳ ದಾಳಿಯಿಂದ ರಕ್ಷಿಸಲು ಶಾಶ್ವತ ಪರಿಹಾರ,ಇಲಾಖಾ ವತಿಯಿಂದ ದಾಳಿ ಮಾಡುವ ಆನೆಗಳನ್ನು ಓಡಿಸುವ ಮತ್ತು ಜೀವರಕ್ಷಣೆಯ ಸಲುವಾಗಿ ಸಿಡಿಮದ್ದುಗಳನ್ನು ಒದಗಿಸುವುದು, ಮಂಕಿ ಪಾರ್ಕ್ ನಿರ್ಮಾಣ ಹಾಗೂ ಬೆಳೆ ಹಾನಿಗೆ ಕ್ಷಿಪ್ರ ಪರಿಹಾರ ಒದಗಿಸಲು ಮನವಿ ಮಾಡಿದರು. ಬಳಿಕ ಮಾತನಾಡಿದ ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೇಶವ ಅಡ್ತಲೆರವರು ಮುಂದಿನ ಗ್ರಾಮ ಸಭೆಯಲ್ಲಿ ಈ ಬಗ್ಗೆ ಸೂಕ್ತ ನಿರ್ಣಯವನ್ನು ಕೈಗೊಂಡು ಸಮಸ್ತ ಸಂತ್ರಸ್ತ ಕೃಷಿಕರ ಪರವಾಗಿ
ಸರಕಾರಕ್ಕೆ ಸಲ್ಲಿಸುವುದಾಗಿ ತಿಳಿಸಿದರು. ಬಳಿಕ ಮಾತನಾಡಿದ ವಲಯಾರಣ್ಯಧಿಕಾರಿ ಮಂಜುನಾಥ್ ಮಾತನಾಡಿ ಅರಂತೋಡಿನ ಉಳುವಾರು ಅಜ್ಜನಗದ್ದೆ ಭಾಗದಲ್ಲಿರುವ ಒಂಟಿ ಆನೆಯನ್ನು ಕಾವಾಡಿಗರನ್ನು ಕರೆಸಿ ದೂರಕ್ಕೆ ಅಟ್ಟುವ ಕೆಲಸವನ್ನು ಅತೀ ಶೀಘ್ರವಾಗಿ ಮಾಡಲಾಗುತ್ತದೆ. ಕಾಡುಪ್ರಾಣಿಗಳ ಹಾವಳಿಯನ್ನು ತಡೆಯಲು ಸಿಡಿಮದ್ದು ಅನ್ನು ಇಲಾಖೆ ವತಿಯಿಂದ ಒದಗಿಸಲು ಪ್ರಯತ್ನಿಸಲಾಗುವುದು. ಹ್ಯಾಂಗಿಂಗ್ ಸೋಲಾರ್ ಬೇಲಿಗಳನ್ನು ನಿರ್ಮಿಸಲು ಅನುದಾನ ಒದಗಿಸಲು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದ್ದು, ಅದನ್ನು ಆದ್ಯತೆಯ ನೆಲೆಯಲ್ಲಿ ಈ ಭಾಗದಲ್ಲಿ ನಿರ್ಮಿಸುವ ಭರವಸೆ ನೀಡಿದರು.
ಸಬ್ಸಿಡಿ ಅರ್ಜಿಗಳನ್ನು ತಾಲೂಕು ಮಟ್ಟದಲ್ಲಿಯೇ ವೀಲೇವಾರಿ ಮಾಡಲು ಮತ್ತು ಪ್ರಥಮ ಆದ್ಯತೆಯಲ್ಲಿ ರೈತರು ಸಭೆಯಲ್ಲಿ ಮಾಡಿದ ಮನವಿ ಯನ್ನು ಮೇಲಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳಲಾಗುವುದು. ಮತ್ತು ಆನೆ ದಾಳಿ ಮಾಡಿದ ಸಂದರ್ಭದಲ್ಲಿ ಮಾಹಿತಿಯನ್ನು ನೀಡಿದಲ್ಲಿ ಇಲಾಖೆ ವತಿಯಿಂದಲೇ ಓಡಿಸುವ ಕೆಲಸ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು. ಬಳಿಕ ಕಾರ್ಯಕ್ರಮದ ಅಧ್ಯಕ್ಷರು ಮತ್ತು ಶಾಸಕರಾದ ಕು. ಭಾಗೀರಥಿ ಮುರುಳ್ಯ ಮಾತನಾಡಿ ‘ ಅರಂತೋಡು-ತೊಡಿಕಾನ ಪ್ರಾಥಮಿಕ ಸಹಕಾರ ಸಂಘವು ಉತ್ತಮವಾದ ಕೆಲಸವನ್ನು ಮಾಡಿದ್ದು ಸಂತ್ರಸ್ತರನ್ನು ಒಟ್ಟಿಗೆ ಸೇರಿಸಿ ಅಧಿಕಾರಿಗಳನ್ನು ಮತ್ತು ಜನಪ್ರತಿನಿಧಿಗಳನ್ನು ಒಟ್ಟುಗೂಡಿಸಿ ಸಮಸ್ಯೆಯ ಪರಿಹಾರವನ್ನು ಕಂಡುಕೊಳ್ಳುವ ಸಲುವಾಗಿ ವೇದಿಕೆಯನ್ನು ಕಲ್ಪಿಸಿ ಉತ್ತಮ ಕೆಲಸ ಮಾಡಿದೆ. ಆನೆ ಸಹಿತ ಕಾಡುಪ್ರಾಣಿಗಳ ಉಪಟಳವನ್ನು ತಡೆಗಟ್ಟುವ ಸಲುವಾಗಿ ಸೋಲಾರ್ ಬೇಲಿಗಳನ್ನು ನಿರ್ಮಿಸುವವರಿಗೆ ಅಧಿಕ ಸಬ್ಸಿಡಿಗಳನ್ನು ಒದಗಿಸಲು ಅರಣ್ಯ ಇಲಾಖೆ ಸಚಿವರನ್ನು ಭೇಟಿ ಮಾಡಿ ಮನವಿ ಮಾಡುತ್ತೇನೆ. ಟಾಸ್ಕ್ ಫೋರ್ಸ್ ಒದಗಿಸಲು ಸರಕಾರದ ಮಟ್ಟದಲ್ಲಿ ಚರ್ಚಿಸಲಾಗುವುದು.
ಸಂತ್ರಸ್ತ ರೈತರ ನಿಯೋಗವನ್ನು ರಚಿಸಿದಲ್ಲಿ ಸದರಿ ನಿಯೋಗದ ಮೂಲಕ ಅರಣ್ಯ ಸಚಿವರನ್ನು ಭೇಟಿ ಮಾಡಿ ಪರಿಹಾರಗಳನ್ನು ಕಂಡುಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡೋಣ ಎಂದರು. ಕಾರ್ಯಕ್ರಮದಲ್ಲಿ ಸಂಪಾಜೆ, ಮರ್ಕಂಜ, ಪೆರಾಜೆ ಗ್ರಾಮದ ರೈತರ ಸಹಿತ ನೂರಾರು ರೈತರು ಭಾಗವಹಿಸಿದ್ದರು. ಸಂಘದ ಲೆಕ್ಕಿಗರಾದ ನಯನ್ ಕಿರ್ಲಾಯ ಸ್ವಾಗತಿಸಿ, ಸಂಘದ ಉಪಾಧ್ಯಕ್ಷರಾದ ಡಾ.ಲಕ್ಷ್ಮೀಶ ಕಲ್ಲುಮುಟ್ಲು ವಂದಿಸಿದರು. ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ವಾಸುದೇವ ನಾಯಕ್ ಕಾರ್ಯಕ್ರಮ ನಿರೂಪಿಸಿದರು.










