ಸುಳ್ಯದ ಮಣ್ಣಿನಲ್ಲಿ ಕಾಫಿ ಬೆಳೆಯಬಹುದು. ಆದರೆ ಅಂತರ್ ಬೆಳೆಯಾಗಿ ಬೆಳೆಯಿರಿ : ಡಾ| ಎಸ್.ಎ.ನದಾಫ್

0

ಗೇರು ಕೃಷಿಯಿಂದಲೂ ಉತ್ತಮ ಆದಾಯ : ಉದ್ಯಮಿ ಸುಧಾಕರ ಕಾಮತ್

ಜಾಲ್ಸೂರಿನಲ್ಲಿ ಕಾಫಿ ಬೆಳೆ ಹಾಗೂ ಉಪ ಬೆಳೆಗಳ ಕುರಿತು ಮಾಹಿತಿ ಕಾರ್ಯಾಗಾರ

ಸುಳ್ಯದ ಮಣ್ಣಿನಲ್ಲಿ ಕಾಫಿ ಬೆಳೆಯಬಹುದು. ಆದರೆ ಕಾಫಿಯನ್ನು ಇಲ್ಲಿ ಮುಖ್ಯ ಬೆಳೆಯನ್ನಾಗಿಸದೇ ಅಂತರ್ ಬೆಳೆಯಾಗಿ ಬೆಳೆಯಿರಿ ಎಂದು ಕೊಡಗು ಚೆಟ್ಟಳ್ಳಿಯ ಕಾಫಿ ಸಂಶೋಧನಾ ಮಂಡಳಿಯ ವಿಜ್ಞಾನಿಗಳಾದ ಡಾ| ಎಸ್.ಎ. ನದಾಫ್ ಹೇಳಿದರು.

ಜು.15ರಂದು ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಇದರ ಆಶ್ರಯದಲ್ಲಿ, ಗ್ರಾ. ಪಂ. ಜಾಲ್ಸೂರು, ಗ್ರಾ.ಪಂ. ಕನಕಮಜಲು, ವಿಜಯ ಗ್ರಾಮಾಭಿವೃದ್ಧಿ ಸಮಿತಿ ಜಾಲ್ಸೂರು, ಶ್ರೀ ಸುಬ್ರಹ್ಮಣ್ಯ ಸಂಜೀವಿನಿ ಒಕ್ಕೂಟ ಜಾಲ್ಸೂರು, ಸುಳ್ಯ ರೈತ ಉತ್ಪಾದಕ ಕಂಪನಿ ಇವುಗಳ ಸಹಭಾಗಿತ್ವದಲ್ಲಿ ಜಾಲ್ಸೂರು ಗ್ರಾ.ಪಂ. ಸಭಾಂಗಣದಲ್ಲಿ ನಡೆದ ಕಾಫಿ ಬೆಳೆ ಹಾಗೂ ಉಪ ಬೆಳೆಗಳ ಬಗ್ಗೆ ಮಾಹಿತಿ ಕಾರ್ಯಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದರು.


ಸುಳ್ಯದ ಮಣ್ಣು ಹಿಂದೆ ಕಾಫಿ ಬೆಳೆಗೆ ಸೂಕ್ತವಾಗಿರಲಿಲ್ಲ. ಬಳಿಕ ಸರ್ವೆ ನಡೆಸಲಾಯಿತು. ಇಲ್ಲಿಯೂ ಕಾಫಿ ಬೆಳೆಯಬಹುದೆಂದು ಗೊತ್ತಾಯಿತು. ಈಗ ಸುಳ್ಯದಲ್ಲಿ ಕೆಲವು ಕಡೆ ಕಾಫಿ ಬೆಳೆದಿದ್ದಾರೆ. ಉತ್ತಮವಾಗಿಯೂ ಬಂದಿದೆ. ಕಾಫಿ ಬೆಳೆಯುವವರು ಮಣ್ಣು ಪರೀಕ್ಷೆ, ಗಿಡಗಳ ಆಯ್ಕೆಯಿಂದ ಹಿಡಿದು, ನೆಡುವುದು, ಮೂರು ವರ್ಷ ಗೊಬ್ಬರ ಹಾಕಿ ಬೆಳೆಸುವುದು, ಬೆಳೆಗೆ ಬೇಕಾದ ವಾತಾವರಣ ಇತ್ಯಾದಿ ವಿಚಾರಗಳನ್ನು ತಿಳಿದು ಮೂಂದುವರಿಯವುದು ಉತ್ತಮ'' ಎಂದವರು ಹೇಳಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕನಕಮಜಲು ಸಹಕಾರ ಸಂಘದ ಅಧ್ಯಕ್ಷ, ಉದ್ಯಮಿ ಸುಧಾಕರ ಕಾಮತ್ ಮಾತನಾಡಿ,ನಾನು ಗೇರು ಬೀಜದ ಉದ್ಯಮಿ. ಹಿಂದೆ ಗೇರನ್ನು ಕೃಷಿಯಾಗಿ ನೋಡುತ್ತಿರಲಿಲ್ಲ. ಕಾಲ ಬದಲಾದಂತೆ ಕೃಷಿಯಾಗಿ ಪರಿವರ್ತಿತವಾಗಿದೆ. ಅದರಿಂದ ಉತ್ತಮ ಆದಾಯ ಇದೆ. ನಮಗೆ ಬೇಕಾದಷ್ಟು ಗೇರು ಬೀಜ ಇಲ್ಲಿ ಸಿಗದಿರುವುದರಿಂದ ಬೇರೆ ಕಡೆಯಿಂದ ತರಬೇಕಾಗುತ್ತದೆ. ನಮ್ಮಲ್ಲೇ ಬೆಳೆದರೆ ಉತ್ತಮ. ಆದ್ದರಿಂದ ಗೇರು ಕೃಷಿಯನ್ನು ಪರ್ಯಾಯವಾಗಿ ಕೃಷಿಕರು ಬೆಳೆಯಬೇಕು” ಎಂದು ಹೇಳಿದರು.

ಉಪ ಬೆಳೆಗಳ ಕುರಿತು ಮಾಹಿತಿ ನೀಡಿದ ಸುಳ್ಯ ತೋಟಗಾರಿಕ ಇಲಾಖೆಯ ಸಹಾಯಕ ತೋಟಗಾರಿಕಾ ನಿರ್ದೇಶಕ ಪ್ರಮೋದ್ ಸಿ.ಎಂ. ಮಾತನಾಡಿ, “ಪೆಪ್ಪರ್, ಕೊಕ್ಕೊ, ತಾಳೆ ಬೆಳೆ ಬೆಳೆದು ಹೇಗೆ ಯಶಸ್ವಿಯಾಗಬಹುದೆಂದು ತಿಳಿಸಿದರು.
ಮಂಗಳೂರು ವಿಜಯ ಗ್ರಾಮಾಭಿವೃದ್ಧಿ ಪ್ರತಿಷ್ಠಾನದ ಸಿಇಓ ಜ್ಯೋತಿರಾಜ್ ಅಧ್ಯಕ್ಷತೆ ವಹಿಸಿದ್ದರು. ವಿಜಯ ಬ್ಯಾಂಕ್ ನಿವೃತ್ತ ಡಿಜಿಎಂ ಸುರೇಂದ್ರ ಹೆಗ್ಡೆ ಮುಖ್ಯ ಅತಿಥಿಗಳಾಗಿದ್ದರು.
ಸುಳ್ಯ ರೈತ ಉತ್ಪಾದಕ ಕಂಪೆನಿಯ ಅಧ್ಯಕ್ಷ ವೀರಪ್ಪ ಗೌಡ ಕಣ್ಕಲ್, ಜಾಲ್ಸೂರು ಗ್ರಾ.ಪಂ. ಅಧ್ಯಕ್ಷೆ ಸಾವಿತ್ರಿ ಅಡ್ಕಾರುಬೈಲು, ಕನಕಮಜಲು ಗ್ರಾ.ಪಂ. ಅಧ್ಯಕ್ಷೆ ಶಾರದಾ ಉಗ್ಗಮೂಲೆ, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ವೇದ ಶೆಟ್ಟಿ ಬೊಳುಬೈಲು ಶುಭಹಾರೈಸಿದರು.

ಗಿಡ ವಿತರಣೆ : ಸಮಾರಂಭದಲ್ಲಿ ಕೆ.ಸುಬ್ರಾಯ ಅನಂತ ಕಾಮತ್ ಆಂಡ್ ಸನ್ಸ್ ಜಾಲ್ಸೂರು ಸಂಸ್ಥೆ ಮತ್ತು ಕನಕಮಜಲು ಸಹಕಾರ ಸಂಘದ ವತಿಯಿಂದ ಕಾರ್ಯಕ್ರಮಕ್ಕೆ ಆಗಮಿಸಿದ ಪ್ರತಿಯೊಬ್ಬರಿಗೂ ಹಣ್ಣಿನ ಗಿಡ ವಿತರಿಸಲಾಯಿತು.
ಕನಕಮಜಲು ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲೋಹಿತ್ ಕುದ್ಕುಳಿ ಸ್ವಾಗತಿಸಿ, ಜಾಲ್ಸುರು ವಿಜಯ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ, ಸುದ್ದಿ ಬಿಡುಗಡೆ ಕಚೇರಿ ವ್ಯವಸ್ಥಾಪಕ ಯಶ್ವಿತ್ ಕಾಳಮ್ಮನೆ ಕಾರ್ಯಕ್ರಮ ನಿರ್ವಹಿಸಿದರು