ಪಠ್ಯ ಆಧಾರಿತ ಮೌಲ್ಯಪಾಪನ ಪದ್ದತಿ ಸರಳೀಕೃತಗೊಳಿಸಿ

0

ಸರಕಾರಕ್ಕೆ ಎಲಿಮಲೆ ಸ.ಪ್ರೌಢಶಾಲೆ ಹಿ.ವಿ.ಸಂಘ, ಎಸ್.ಡಿ.ಎಂ.ಸಿ. ಮನವಿ

ಶಿಕ್ಷಣ ಇಲಾಖೆ ಈಗಾಗಲೇ ಅನುಷ್ಠಾನ ಗೊಳಿಸಿರುವ ಪಠ್ಯ ಆಧಾರಿತ ಮೌಲ್ಯಮಾಪನ (ಎಲ್.ಬಿ.ಎ.) ಪದ್ಧತಿಯನ್ನು ಸರಕಾರ ಹಿಂಪಡೆಯಬೇಕು. ಒಂದು ವೇಳೆ ಅದು ಸಾಧ್ಯವಾಗದೇ ಇದ್ದರೆ ಶಿಕ್ಷಣ ತಜ್ಞರೊಂದಿಗೆ ಚರ್ಚಿಸಿ ಸರಳೀಕೃತ ಗೊಳಿಸಬೇಕು” ಎಂದು ಎಲಿಮಲೆ ಸರಕಾರಿ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ್ ಎಲಿಮಲೆ ಹಾಗೂ ಎಸ್.ಡಿ.ಎಂ.ಸಿ. ಅಧ್ಯಕ್ಷ ಪುರುಷೋತ್ತಮ ಸುಳ್ಳಿ ಒತ್ತಾಯಿಸಿದ್ದಾರೆ.

ಆ.6ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಈ ವಿಚಾರದಲ್ಲಿ ಮಾತನಾಡಿದರು.

ಸುಮಾರು ಎರಡು ವಾರದ ಹಿಂದೆ ಸರಕಾರ ಶಿಕ್ಷಣ ಇಲಾಖೆ ಪಠ್ಯ ಆಧಾರಿತ ಮೌಲ್ಯ ಮಾಪನ ಅಂದರೆ ಒಂದು ಪಾಠ ಆದ ಕೂಡಲೇ 25‌ ಪ್ರಶ್ನೆ ಪರೀಕ್ಷೆ ಮಾಡುವ ಕ್ರಮ ಜಾರಿ ಮಾಡಿದೆ. ಇದು ಮಕ್ಕಳಿಗೆ ಒತ್ತಡ ಆಗುತ್ತಿದ್ದು ಪ್ರತೀ ದಿನ ಪರೀಕ್ಷೆ ಎಂಬ ನಿಟ್ಟಿನಲ್ಲಿ ಶಾಲಾ ಕಲಿಕಾ ವಾತಾವರಣದಿಂದ ಭಯಭೀತರಾಗಿದ್ದಾರೆ. ಕೆಲವು ಕಡೆ ಶಾಲೆಗೆ ಮಕ್ಕಳು ಹಾಜರಾಗಲು ಹಿಂದೇಟು ಹಾಕುವ ಸ್ಥಿತಿ ಕಂಡು ಬರುತ್ತಿದೆ. ಹಿಂದೆ ಇದ್ದಂತೆ ವರ್ಷಕ್ಕೆ 6 ಪರೀಕ್ಷೆ ಮಾಡಿದರೆ ಚಂದ. ಪರೀಕ್ಷೆಗೂ ಒಂದು ಮೌಲ್ಯ ಉಳಿದಂತಾಗುತ್ತದೆ ಎಂದು ಅವರು ಹೇಳಿದರು.

ಈ ನಿಯಮದನ್ವಯ 8 ನೇ ತರಗತಿ ಮಕ್ಕಳಿಗೆ ಒಟ್ಟು 6 ವಿಷಯದಲ್ಲಿ 108 ಪಾಠ ಇರುತ್ತದೆ. ಎಲ್ಲಾ ಪಾಠಗಳಿಗೂ ಒಂದೊಂದು ಪರೀಕ್ಷೆ ಹಾಗೂ ಎಫ್ ಎ ಮತ್ತು ಎಸ್ ಎ ಎಂದು ಹೇಳಿ ಆ ಮಗು ವರ್ಷಕ್ಕೆ 114 ಪರೀಕ್ಷೆ ಬರೆಯಬೇಕು. ಇದು ಮಕ್ಕಳಿಗೆ ಹೊರೆಯಲ್ಲವೇ. ಇದೇ ರೀತಿ ಎಲ್ಲ ತರಗತಿಗೂ ಪಾಠಗಳಿಗೆ ಹೊಂದಿಕೊಂಡು ಪರೀಕ್ಷೆ ನಡೆಯುತ್ತದೆ. ಆದ್ದರಿಂದ ಈ ಪದ್ದತಿಯನ್ನು ಹಿಂಪಡೆಯಬೇಕು. ಇಲ್ಲವೇ ಚರ್ಚಿಸಿಕೊಂಡು ನಿಯಮ ಸರಳೀಕೃತ ಗೊಳಿಸಬೇಕು ಎಂದವರು ಹೇಳಿದರು.

ಶಿಕ್ಷಕರಿಗೆ ಪಾಠದ ಜತೆಗೆ ಅಕ್ಷರ ದಾಸೋಹ, ಕ್ರೀಡೆ, ಇಲಾಖೆಯ ಕೆಲಸಗಳು ಇದೆ. ಎಲ್ಲವೂ ಒತ್ತಡದಲ್ಲಿ‌ನಿರ್ವಹಿಸಬೇಕಾದ ಸನ್ನಿವೇಶ. ಆದ್ದರಿಂದ ಈ ಪದ್ದತಿಯನ್ನು ಪುನರ್ ವಿಮರ್ಶೆ ಮಾಡಬೇಕೆಂದರು. ಶಾಸಕರಿಗೂ, ಶಿಕ್ಷಕರ ಸಂಘಗಳ‌ಮೂಲಕ ಸರಕಾರವನ್ನು ಒತ್ತಾಯಿಸುವ ಕಾರ್ಯ ನಮ್ಮದು ಎಂದವರು‌ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಎಸ್.ಡಿ.ಎಂ.ಸಿ. ಉಪಾಧ್ಯಕ್ಷ ಅಚ್ಚುತ ಮುಂಡೋಕಜೆ, ಪ್ರಮುಖರಾದ ಮಾಧವ ಗೌಡ ಶೀರಡ್ಕ, ನೂತನ್‌ಕುಮಾರ್ ದೇರ್ಮಜಲು, ವಿಶಾಲಾಕ್ಷಿ, ಆಯಿಷಾ ಹಾಗೂ ಪೋಷಕ ರು ಇದ್ದರು.