ದುಗ್ಗಲಡ್ಕ ಸಮೀಪ ಕೆದಿಕ್ಕಾನ ಬಳಿ ಸುಳ್ಯ ನಗರದ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಕುರಿತಂತೆ ತಾಲೂಕು ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಚರ್ಚೆಯಾಗಿದ್ದು, ನಗರ ಪಂಚಾಯತ್ ಅಧಿಕಾರಿಗಳು ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೆ ದುಗ್ಗಲಡ್ಕ ಸಮೀಪ ನಗರ ಪಂಚಾಯತ್ 2ನೇ ವಾರ್ಡು ಕೊಯಿಕುಳಿಯ ಕೆದಿಕ್ಕಾನ ಎಂಬಲ್ಲಿ ಈಗ ಅಧಿಕಾರಿಗಳು ಗುರುತಿಸಿರುವ ಜಾಗವು ವೈಜ್ಞಾನಿಕವಾಗಿ ಕಸ ವಿಲೇವಾರಿಗೆ ಸೂಕ್ತವಲ್ಲ. ಈ ಸ್ಥಳವು ನಗರ ಪಂಚಾಯತ್ ಆಶ್ರಯ ಮನೆ ನಿರ್ಮಾಣಕ್ಕೆ ಮೀಸಲಿರಿಸಿದ ಜಾಗವಾಗಿದೆ. ಇದು ಮೀಸಲು ಅರಣ್ಯಕ್ಕೆ ಹೊಂದಿಕೊಂಡಿರುವ, ಮತ್ತು ಕೆ ಎಫ್ ಡಿ ಸಿ ರಬ್ಬರ್ ನಿಗಮದವರ ರಬ್ಬರ್ ತೋಟ ಇರುವ ಜಾಗವಾಗಿದೆ. ಇದರ ಕೆಳಬದಿಯಲ್ಲಿ ಪರಿಶಿಷ್ಟ ಜಾತಿ, ಹಿಂದುಳಿದ ವರ್ಗದವರು ಸುಮಾರು 20ಕ್ಕೂ ಹೆಚ್ಚು ಮನೆಯವರು ಕೃಷಿ ಮಾಡಿಕೊಂಡು, ವಾಸಮಾಡಿಕೊಂಡು ಬಂದಿರುವ ಪ್ರದೇಶ ವಾಗಿದೆ. ಆದುದರಿಂದ ಇಲ್ಲಿ ಘನತ್ಯಾಜ್ಯ ಘಟಕ ಸ್ಥಾಪನೆಯ ಉದ್ದೇಶವನ್ನು ನಗರ ಪಂಚಾಯತ್ ಮತ್ತು ತಾಲೂಕು ಆಡಳಿತ ಕೂಡಲೇ ಕೈ ಬಿಡಬೇಕು.















ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ ಯವರ ಮನೆ ಇದೇ ವಾರ್ಡಿನಲ್ಲಿದೆ. ಆದರೆ ಅವರಾಗಲಿ, ಇಲ್ಲಿಯ ಪಂಚಾಯತ್ ಪ್ರತಿನಿಧಿ ಬಾಲಕೃಷ್ಣ ರೈ ದುಗ್ಗಲಡ್ಕ ರವರಾಗಲಿ ಇದರ ಬಗ್ಗೆ ತುಟಿಕ್ ಪಿಟಿಕ್ ಎನ್ನುವುದಿಲ್ಲ. ಇಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡುವ ಮೂಲಕ ತಮ್ಮ ಊರಿಗೆ ಕಸ ಭಾಗ್ಯ ನೀಡುವ ಯೋಜನೆಯಲ್ಲಿದ್ದಾರೆಯೇ ಎಂಬ ಅನುಮಾನ ಮೂಡುತ್ತಾ ಇದೆ.
ಯಾವುದೇ ಕಾರಣಕ್ಕೂ ಈ ಸ್ಥಳದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ನಾವು ಬಿಡುವುದಿಲ್ಲ. ಒಂದು ವೇಳೆ ಈ ಪ್ರಕ್ರಿಯೆ ಮುಂದುವರೆದರೆ ನಗರ ಪಂಚಾಯತ್ ವಿರುದ್ಧ ಕೊಯಿಕುಳಿ ದುಗ್ಗಲಡ್ಕ ಪ್ರದೇಶದ ಸಾರ್ವಜನಿಕರನ್ನು ಸೇರಿಸಿ ಉಗ್ರ ಪ್ರತಿಭಟನೆ ನಡೆಸಬೇಕಾಗಬಹುದು ಎಂದು ಸುಳ್ಯ ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ್ ಎಂ ಜೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.










