ಕಂಡದ್ದನ್ನು ಕಂಡ ಹಾಗೆ ಹೇಳಿದರೆ ಬಿಜೆಪಿಗೆ ಕೆಂಡದಂತಹ ಕೋಪ ಬರುತ್ತದೆ : ವೆಂಕಪ್ಪ ಗೌಡ ಟೀಕೆ

0

” ನಮ್ಮ ಪಕ್ಷ ಯಾವತ್ತು ಸುಳ್ಳು ಹೇಳುವುದಕ್ಕೆ ಬಯಸುವುದಿಲ್ಲ, ಇದ್ದ ವಿಚಾರವನ್ನು ಇದ್ದ ಹಾಗೆ ಜನರ ಮುಂದೆ ಹೇಳುತ್ತದೆ. ಹೊರತು ಮಸಾಲೆ ಅರೆದು ಜನರ ಮಧ್ಯೆ ವಿಷ ಬೀಜ ಬಿತ್ತುವ ಕಾರ್ಯಕ್ಕೆ ಕೈ ಹಾಕುವುದಿಲ್ಲ. ಅಂತಹ ಪಕ್ಷದ ಬೆಂಬಲಿಗನಾಗಿ ಇದ್ದದ್ದನ್ನು ಇದ್ದಹಾಗೆ ಹೇಳೋದು ನನ್ನ ಜಾಯಮಾನ ಹೊರತು ಬಿಜೆಪಿ ಅಧ್ಯಕ್ಷರು ಹೇಳಿದಂತೆ ಅಥವಾ ಅವರ ಮಾಮೂಲಿ ಕಾಯಕದಂತೆ ಸುಳ್ಳು ಹೇಳುವ ಜಾಯಮಾನ ನನ್ನದಲ್ಲ ” ಎಂದು ಕಾಂಗ್ರೆಸ್ ಮುಖಂಡ ಎಂ.ವೆಂಕಪ್ಪ ಗೌಡರು ಹೇಳಿದ್ದಾರೆ.
” ರೈತರ ವಿಚಾರದ ಬಗ್ಗೆ , ಅವರಿಗೆ ಸವಲತ್ತು ನೀಡಿದ ಕುರಿತು ನನ್ನ ಜೊತೆಗೆ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷರು ಚರ್ಚೆಗೆ ಬರುವುದಾದರೆ ನಾನು ಅದಕ್ಕೆ ಸಿದ್ಧನಿದ್ದೇನೆ. ಬಹಿರಂಗ ಸ್ಥಳವನ್ನು ಅವರೇ ನಿಗದಿಪಡಿಸಿ ನನಗೆ ಹೇಳಲಿ ” ಎಂದವರು ಹೇಳಿಕೆ ನೀಡಿದ್ದಾರೆ.

ಕಂಡದ್ದನ್ನು ಕಂಡಂತೆ ಹೇಳಿದರೆ ಬಿ.ಜೆ.ಪಿ.ಯವರಿಗೆ ಕೆಂಡದಂತಹ ಕೋಪ ಬರುತ್ತದೆ ಎಂದು ನನಗೆ ತಿಳಿದಿದೆ. ನಾನು ಒಂದು ಧಾರ್ಮಿಕ ಕೇಂದ್ರದ ಜವಾಬ್ದಾರಿ ತೆಗೆದುಕೊಂಡಿದ್ದೇನೆ ಎಂಬುದು ನಿಜ. ಅಲ್ಲಿ ನಮ್ಮ ಕೆಲಸ ಕಾರ್ಯಗಳು, ಧಾರ್ಮಿಕ ವಿಚಾರಧಾರೆ ಮತ್ತು ಆಚರಣೆಗಳು ಯಾವುದೇ ರಾಜಕೀಯ ರಹಿತವಾಗಿ ನಡೆಯುತ್ತಿರುವುದನ್ನು ಅಲ್ಲಿನ ಭಕ್ತಾದಿಗಳೊಂದಿಗೆ ಕೇಳಿ ತಿಳಿದುಕೊಳ್ಳಿ. ನಾನು ಯಾವ ಕ್ಷೇತ್ರದಲ್ಲಿ ಹೇಗೆ ಕೆಲಸ ಮಾಡಬೇಕು ಮತ್ತು ಹೇಗೆ ಮಾತನಾಡಬೇಕು ಅಂತ ಬಲ್ಲವರಿಂದ ಕಲಿತು ಕೊಂಡಿದ್ದೇನೆ. ಆದರೂ ವೆಂಕಟ್ ವಳಲಂಬೆಯಂತಹ ಭಾಷಾ ಜ್ಞಾನಿ, ಮೇಧಾವಿಗಳಿಂದ ಕಲಿಯಬೇಕಾದ ಅಂಶಗಳು ಇದ್ದರೆ ಮುಂದಿನ ದಿನಗಳಲ್ಲಿ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತೇನೆ. ಅಷ್ಟಕ್ಕೂ, ನಮ್ಮಂಥವರು ಧಾರ್ಮಿಕ ಕ್ಷೇತ್ರಕ್ಕೆ ಬಂದು ಧಾರ್ಮಿಕ ವಿಚಾರಗಳಲ್ಲಿ ಭಾಗವಹಿಸುವುದಕ್ಕೆ ತಾವು ಸಂತೋಷ ಪಡುವ ಬದಲು ಅಸೂಯೆ ವ್ಯಕ್ತಪಡಿಸುವುದನ್ನು ನೋಡಿದರೆ, ನೀವು ಈ ತನಕ ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡಿ ಜನರ ಮನಸ್ಸನ್ನು ಹಾಳು ಮಾಡಿದಂತೆ ಇನ್ನು ಮುಂದೆ ಅಂತಹ ಪ್ರಯತ್ನಕ್ಕೆ ಎಲ್ಲಿ ಕಡಿವಾಣ ಬೀಳುತ್ತದೋ ಎಂಬ ಭಯದಿಂದ ನಾನು ಧಾರ್ಮಿಕ ಕ್ಷೇತ್ರದಲ್ಲಿ ಕೆಲಸ ಮಾಡುವುದನ್ನು ನೀವು ಸಹಿಸುವುದಿಲ್ಲ ಅಂತ ನಾನು ಹಾಗೂ ಕ್ಷೇತ್ರದ ಭಕ್ತಾದಿಗಳು ಭಾವಿಸುವಂತಾಗಿದೆ ” ಎಂದು ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರೂ ಆಗಿರುವ ಎಂ.ವೆಂಕಪ್ಪ ಗೌಡರು ಹೇಳಿಕೆಯಲ್ಲಿ ತಿಳಿಸಿದ್ದಾರೆ.