ಬಿಎಸ್‍ಎಫ್‌ಗೆ ಆಯ್ಕೆಯಾದ ಸುಶ್ಮಿತಾಗೆ ಅರೆಭಾಷೆ ಅಕಾಡೆಮಿಯಿಂದ ಗೌರವ

0

ಭಾರತೀಯ ಗಡಿರಕ್ಷಣಾ ಪಡೆಗೆ ಆಯ್ಕೆಯಾದ ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ಬೆದ್ರ್‌ಪಣೆಯ ಅರೆಭಾಷಿಕ ಯುವತಿ ಕುಮಾರಿ ಸುಶ್ಮಿತಾ ಎಂ. ಎ. ಇವರನ್ನು ಕರ್ನಾಟಕ ಅರೆಭಾಷೆ ಸಂಸ್ಕ್ರತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.


ಸುಳ್ಯದ ಸದರ್ನ್ ರೆಸಿಡೆನ್ಸಿಯ ಸಭಾಂಗಣದಲ್ಲಿ ನಡೆದ ಅನೌಪಚಾರಿಕ ಕಾರ್ಯಕ್ರಮದಲ್ಲಿ ಅಕಾಡೆಮಿಯ ಅಧ್ಯಕ್ಷರಾದ ಸದಾನಂದ ಮಾವಜಿ ಸಾಧಕಿಯನ್ನು ಸನ್ಮಾನಿಸಿ ಶುಭ ಹಾರೈಸಿದರು. ಇವರಿಗೆ ಅಕಾಡೆಮಿ ಸದಸ್ಯರಾದ ಚಂದ್ರಾವತಿ ಬಡ್ಡಡ್ಕ, ಲತಾಪ್ರಸಾದ್ ಕುದ್ಪಾಜೆ ಸಹಕರಿಸಿದರು. ಸದಸ್ಯರಾದ ಚಂದ್ರಶೇಖರ ಪೇರಾಲ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸುಶ್ಮಿತಾರ ಸಾಧನೆಯನ್ನು ಸ್ಮರಿಸಿ ಈಕೆಯ ಸಾಧನೆ ಇತರರಿಗೆ ಪ್ರೇರಣೆಯಾಗಲಿ ಎಂದರು.


ಬೆದ್ರ್‌ಪಣೆ ನಿವಾಸಿಯಾಗಿರುವ ಸುಶ್ಮಿತಾ ಮೇಲಡ್ತಲೆಯ ದಿವಂಗತ ನಾಗಪ್ಪ ಹಾಗೂ ಜಾನಕಿಯವರ ಪುತ್ರಿ. ಎಳೆ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡರೂ ಬದುಕನ್ನು ದಿಟ್ಟತನದಿಂದ ಎದುರಿಸಿ ತಂಗಿಯನ್ನು ಓದಿಸಿ ಸರ್ಕಾರಿ ಕೆಲಸ ಪಡೆಯುವಂತೆ ಮಾಡಿದ್ದಲ್ಲದೇ, ತಾನು ಸ್ವತಃ ಹಲವು ಸ್ಫರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ಮೂಲಕ ಛಲಬಿಡದಂತೆ ಮಾಡಿದ ಪ್ರಯತ್ನದಿಂದಾಗಿ ತಾನು ಇಂದು ಭಾರತೀಯ ಸೇನೆಯಲ್ಲಿ ಸೇರಿಕೊಳ್ಳಲು ಅರ್ಹತೆ ಪಡೆಯುವಂತಾಯಿತೆಂದು ಈ ಸಂದರ್ಭದಲ್ಲಿ ಸುಶ್ಮಿತಾ ನುಡಿದರು. ಇವರು ಈ ಹಿಂದೆ ಸುಳ್ಯದ ಬಲದೇವ್ ಗ್ರಾನೈಟ್ಸ್‌ನಲ್ಲಿ ಉದ್ಯೋಗಿಯಾಗಿದ್ದರು.


ಈ ಸಂದರ್ಭದಲ್ಲಿ ಸುಶ್ಮಿತಾರ ಸಹೋದರಿ ಹಾಗೂ ಸಂಬಂಧಿಗಳು ಹಾಗೂ ದೇವಿಪ್ರಸಾದ್ ಕುದ್ಪಾಜೆ ಉಪಸ್ಥಿತರಿದ್ದರು.