ಇತ್ತೀಚೆಗೆ ನಿಧನರಾದ ಜನಪದ ತಜ್ಞೆ ಕೊರಪೊಳು ನಾರಾಜೆಯವರ ಉತ್ತರ ಕ್ರಿಯಾವಿಧಿ ಹಾಗೂ ಶ್ರದ್ಧಾಂಜಲಿ ಕಾರ್ಯಕ್ರಮ ಸೆ 30 ರಂದು ಮೃತರ ಸ್ವಗೃಹ ಜಯನಗರ ನಾರಜೆಯಲ್ಲಿ ನಡೆಯಿತು.
ಉತ್ತರ ಕ್ರಿಯಾ ವಿಧಿಗಳು ಮುಗಿದ ನಂತರ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಸಂಶೋಧಕ ಹಾಗೂ ಲೇಖಕ ಡಾ.ಸುಂದರ ಕೇನಾಜೆ ಮಾತನಾಡಿ” ತುಳುನಾಡಿನ ಅಪಾರ ಜನಪದ ಸಾಹಿತ್ಯ ಸಂಪತ್ತನ್ನು ತನ್ನೊಳಗೆ ಇರಿಸಿಕೊಂಡಿದ್ದ ಕೊರಪೊಳು ನಾರಜೆಯವರು ಈ ಭಾಗದಲ್ಲಿ ಪ್ರಚಲಿತವಿಲ್ಲದ ಕೆಲವು ಪಾಡ್ದನಗಳನ್ನೂ ತಿಳಿದವರಾಗಿದ್ದರು. ಸುಳ್ಯ ಭಾಗದಲ್ಲಿ ಸಿರಿ ಪಾಡ್ದನ ಹೆಚ್ಚು ಚಾಲ್ತಿಯಲ್ಲಿ ಇಲ್ಲದಿದ್ದರೂ ಅದು ಕೊರಪೊಳುರವರಿಗೆ ಗೊತ್ತಿತ್ತು. ಅಲ್ಲದೇ ಉತ್ತರ ತುಳುನಾಡಿನ ಅನೇಕ ದೈವ ಪಾಡ್ದನಗಳ ಅರಿವು ಅವರಿಗಿತ್ತು. ಸಣ್ಣಕ್ಕ ಬಂಗ್ಲೆಗುಡ್ಡೆ ಹಾಗೂ ಕೊರಪೊಳು ನಾರಾಜೆ ಸುಳ್ಯ ಕ್ಷೇತ್ರದ ಜನಪದ ಸಾಹಿತ್ಯದ ಎರಡು ಕಣ್ಣುಗಳಾಗಿದ್ದವರು. ಅವರಿಬ್ಬರ ಅಗಲಿಕೆಯ ಮೂಲಕ ಸುಳ್ಯ ಭಾಗದಲ್ಲಿ ಮೌಖಿಕ ಸಾಹಿತ್ಯ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವ ಸ್ಥಿತಿಗೆ ತಲುಪಿದೆ. ಇವರು ಈ ಸಂಪತ್ತಿನ ಸಂಗ್ರಹ ಒಂದಷ್ಟಾದರೂ ನಡೆದಿದೆ. ಆದರೆ ಇನ್ನೂ ಅನೇಕರದ್ದು ಮಣ್ಣಲ್ಲಿ ಮಣ್ಣಾಗಿ ಹೋಗಿದೆ. ಜನಪದ ಆಸಕ್ತರು, ಸಂಶೋಧಕರು, ಸಂಸ್ಕೃತಿ ಪ್ರಿಯರು ಇವುಗಳನ್ನು ಸಂಗ್ರಹಿಸುವ ಕನಿಷ್ಟ ಕಾರ್ಯ ಮಾಡಿದರೆ ಉತ್ತಮ” ಎಂದು ನುಡಿ ನಮನ ಸಲ್ಲಿಸಿದರು.















ಮೊಗೇರ ಸಂಘದ ರಾಜ್ಯಾಧ್ಯಕ್ಷ ನಂದರಾಜ್ ಸಂಕೇಶ್ ಮಾನಾಡಿ” ಜನಪದ ಸಾಹಿತ್ಯದ ಮೂಲಕ ಮೊಗೇರ ಸಮುದಾಯದ ಹೆಸರನ್ನು ಎತ್ತರಿಸಿದ ಕೊರಪೊಳು ನಾರಾಜೆಯವರು ಮಾತೃ ಹೃದಯದ ವ್ಯಕ್ತಿತ್ವದವರಾಗಿದ್ದರು. ಜನಪದ ಸಾಹಿತ್ಯವಲ್ಲದೇ ಜನಪದ ಕುಣಿತಗಳಲ್ಲೂ ಸೈ ಎನಿಸಿಕೊಂಡವರಾಗಿದ್ದರು. ಅವರ ಅಗಲುವಿಕೆಯಿಂದ ಪರಂಪರಾಗತ ಪ್ರತಿಭೆಯೊಂದು ಕಣ್ಮರೆಯಾದಂತೆ ಆಗಿದೆ” ಎಂದರು.
ಸುಳ್ಯ ಸಿ.ಎ ಬ್ಯಾಂಕ್ ನಿರ್ದೇಶಕರು ಹಾಗೂ ನಿವೃತ್ತ ಇ.ಸಿ.ಓ ರವರಾದ ಕೇಶವ ಸಿ.ಎ ಮಾತನಾಡಿ” ಕೊರಪೊಳು ನಾರಾಜೆಯವರು ಈ ಭಾಗದಲ್ಲಿ ನಮ್ಮ ಸಮುದಾಯಕ್ಕೆ ಮಾರ್ಗದರ್ಶನ ಮಾಡುವಷ್ಟು ತಿಳುವಳಿಕೆ ಹೊಂದಿದವರಾಗಿದ್ದರು. ಯಾವುದೇ ಕಾರ್ಯಕ್ರಮ ಅಥವಾ ಪಂರಂಪರಾಗತ ಸಂಗತಿಗಳು ಬಂದಾಗ ಅದರ ಬಗ್ಗೆ ಅಧಿಕೃತವಾಗಿ ಸಲಹೆ ನೀಡುವ ಜಾಣ್ಮೆ ಅವರಲ್ಲಿತ್ತು. ಅವರ ಅಗಲುವಿಕೆಯಿಂದ ನಾವು ಬಡವಾಗಿದ್ದೇವೆ” ಎಂದರು.
ಈ ಸಂದರ್ಭದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಮಾಧವ ಪೆರಾಜೆ, ಪ.ಜಾ ಮತ್ತು ಪ.ಪಂ ಹಾಸ್ಟೆಲ್ ಮೇಲ್ವಿಚಾರಕರಾದ ವಿಠಲ, ಅರಂತೋಡು ಗ್ರಾ.ಪಂ. ಮಾಜಿ ಅಧ್ಯಕ್ಷ ಮನ್ಸ ಮುಗೇರ, ದಿ.ಕೊರಪೊಳು ನಾರಾಜೆಯವರ ಪುತ್ರರಾದ ತಿಮ್ಮಪ್ಪ ನಾರಾಜೆ, ಮುದ್ದಪ್ಪ ನಾರಜೆ, ಪುತ್ರಿ ಗಿರಿಜಾ, ಮೊಮ್ಮಕ್ಕಳು ಹಾಗೂ ಬಂಧು ಮಿತ್ರರು ಉಪಸ್ಥಿತರಿದ್ದರು.










