ಕೊಡಿಯಾಲದ ನಿಡ್ಮಾರಿನಲ್ಲಿ ಇಂದು ಮಧ್ಯಾಹ್ನ ನಡೆದ ಘಟನೆ
ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿಗೆ ಹೋದ ಶಿಕ್ಷಕಿಯೊಬ್ಬರ ಮೇಲೆ ಮನೆಯ ದಾಳಿ ನಡೆಸಿದ ಘಟನೆ ಇಂದು ಮಧ್ಯಾಹ್ನ ಕೊಡಿಯಾಲ ಗ್ರಾಮದ ನಿಡ್ಮಾರು ಎಂಬಲ್ಲಿ ನಡೆದಿದ್ದು, ಭಯಭೀತರಾದ ಶಿಕ್ಷಕಿ ಗಣತಿ ಮುಂದುವರಿಸಲಾಗದೆ ಮನೆಗೆ ಹಿಂತಿರುಗಬೇಕಾದ ಘಟನೆ ವರದಿಯಾಗಿದೆ.















ಕೊಡಿಯಾಲದ ಮೂವಪ್ಪೆ ಶಾಲೆಯ ಶಿಕ್ಷಕಿ ನಿರ್ಮಲರವರು ಗಣತಿ ಕಾರ್ಯ ನಡೆಸುತ್ತಾ ಇಂದು ಮಧ್ಯಾಹ್ನ ಎರಡೂವರೆಯ ವೇಳೆಗೆ ನಿಡ್ಮಾರು ಎಂಬಲ್ಲಿಯ ಮನೆಯೊಂದಕ್ಕೆ ಹೋದರು. ಆ ವೇಳೆ ಅಂಗಳದಲ್ಲಿದ್ದ ನಾಯಿ ಒಮ್ಮೆಲೇ ಇವರ ಮೇಲೆ ದಾಳಿ ನಡೆಸಿತು. ಶಿಕ್ಷಕಿಯ ಮೈಮೇಲೆ ಹಾರಿ ನಾಯಿ ದಾಳಿ ನಡೆಸಿದ ರಭಸಕ್ಕೆ ಇವರ ಉಡುಪು ಹರಿದು ಹೋಗಿದೆ. ನಾಯಿಗೆ ಅಡ್ಡಲಾಗಿ ಬ್ಯಾಗನ್ನು ಮುಂದೆ ಮಾಡಿದಾಗ ಬ್ಯಾಗನ್ನು ನಾಯಿ ಎಳೆದು ಹಾಕಿದೆ. ಪುಣ್ಯವಶಾತ್ ನಾಯಿ ಶಿಕ್ಷಕಿಗೆ ಕಚ್ಚಲು ಉದ್ಯುಕ್ತವಾದಾಗ ಮನೆಯ ಮಾಲಕರು ಬಂದು ನಾಯಿಯನ್ನು ಹಿಡಿದುಕೊಂಡಿದ್ದಾರೆ. ಈ ಘಟನೆಯಿಂದ ಭಯಭೀತರಾದ ಶಿಕ್ಷಕಿ ಗಣತಿ ಮುಂದುವರಿಸಲಾಗದೆ ಮನೆಗೆ ಹಿಂತಿರುಗಿದರೆಂದು ತಿಳಿದುಬಂದಿದೆ.
ಹಲವು ಮನೆಗಳಲ್ಲಿ ನಾಯಿಯಿಂದ ಈ ರೀತಿಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇರುವುದರಿಂದ ಗಣತಿ ಮುಗಿಯುವವರೆಗೆ ಮನೆಯಲ್ಲಿರುವ ನಾಯಿಗಳನ್ನು ಜನರು ಕಟ್ಟಿಹಾಕುವ ಅಗತ್ಯವಿದೆ ಎಂದು ಗಣತಿದಾರರು ಅಪೇಕ್ಷೆ ಪಟ್ಟಿದ್ದಾರೆ.










