ಲಾರಿ ಚಾಲಕನ ಸಮಯಪ್ರಜ್ಞೆಯಿಂದ ಬದುಕುಳಿದ ಯುವಕ

0

ಲಾರಿಯಡಿಯಲ್ಲಿ ನಿದ್ರಿಸಲು ಮಲಗಿದಾತ ಚಾಲಕನ ಸಮಯ ಪ್ರಜ್ಞೆಯಿಂದ ಬಚಾವ್

ಮಂಗಳೂರಿನಿಂದ ಮೈಸೂರಿಗೆ ಹೋಗುತ್ತಿದ್ದ ಲಾರಿ ಚಾಲಕ ರಾತ್ರಿ ವೇಳೆ ಅಲ್ಪ ವಿರಾಮಕ್ಕಾಗಿ ಅರಂಬೂರು ಬಳಿ ನಿಲ್ಲಿಸಿದ್ದರು.
ಸುಮಾರು ೨ ಗಂಟೆ ವಿರಮಿಸಿ ಬಳಿಕ ಲಾರಿ ಚಲಾಯಿಸಲು ಹೊರಟಾಗ ಲಾರಿಯ ಟೈಯರ್‌ಗಳ ಗಾಳಿ ಪರೀಕ್ಷೆ ಮಾಡಲು ಚಕ್ರದ ಬಳಿ ಬಂದು ವೀಕ್ಷಿಸಿದ್ದಾರೆ. ಈ ಸಂದರ್ಭದಲ್ಲಿ ಯುವಕನೊಬ್ಬ ಹಿಂಬದಿಯ ಟೈಯರ್ ನ ಒಳಭಾಗದಲ್ಲಿ ಮುಖ ಮಾಡಿ ಮಲಗಿರುವುದು ಕಂಡುಬಂದಿದೆ.


ಚಾಲಕನ ಈ ಸಮಯ ಪ್ರಜ್ಞೆಯಿಂದ ಯುವಕನ ಜೀವ ಉಳಿದಿದ್ದು ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಚಾಲಕನ ಸಮಯ ಪ್ರಜ್ಞೆಗೆ ಪ್ರಸಂಸೆ ವ್ಯಕ್ತವಾಗಿದೆ.

ಅರಂಬೂರು ಕಾಫಿ ಡೇ ಬಳಿ ರಸ್ತೆ ಬದಿಯಲ್ಲಿ ಚಾಲಕನು ರಾತ್ರಿ ವೇಳೆ ವಾಹನವನ್ನು ನಿಲ್ಲಿಸಿ ಸ್ವಲ್ಪ ಸಮಯ ವಿಶ್ರಾಂತಿ ಪಡೆಯುತ್ತಿದ್ದ. ಅದೇ ವೇಳೆ ಮದ್ಯಪಾನ ಮಾಡಿದ ಒಬ್ಬ ವ್ಯಕ್ತಿ ಚಾಲಕನ ಅರಿವಿಗೆ ಬಾರದೆ ಟ್ರಕ್‌ನ ಅಡಿಯಲ್ಲಿ, ಟಯರ್ ಪಕ್ಕದಲ್ಲಿ ಮಲಗಿದ್ದಾನೆ. ಬಳಿಕ ಆ ವ್ಯಕ್ತಿ ಆ ಸ್ಥಳದಲ್ಲೇ ನಿದ್ರೆಗೆ ಜಾರಿದ್ದಾನೆ. ಕೆಲ ಹೊತ್ತಿನ ಬಳಿಕ ವಿಶ್ರಾಂತಿ ಮುಗಿಸಿ ಅಲ್ಲಿಂದ ಹೊರಡಲು ಮುಂದಾದಾಗ ಟಯರ್‌ಗಳಲ್ಲಿ ಗಾಳಿ ಸರಿಯಾಗಿದೆಯೇ ಎಂದು ಪರಿಶೀಲನೆ ನಡೆಸುತ್ತಿದ್ದ ಸಂದರ್ಭದಲ್ಲಿ ಟ್ರಕ್‌ನ ಅಡಿಯಲ್ಲಿ ಮಲಗಿದ್ದ ವ್ಯಕ್ತಿಯನ್ನು ಗಮನಿಸಿ ದಂಗಾಗಿದ್ದಾನೆ. ಕೂಡಲೇ ಮಲಗಿದ ವ್ಯಕ್ತಿಯನ್ನು ಎಬ್ಬಿಸಿ ಬುದ್ದಿವಾದ ಹೇಳಿ ಕಳುಹಿಸಿದ್ದಾರೆ.

ಚಾಲಕ ಲಾರಿಯ ಚಕ್ರವನ್ನು ಪರಿಶೀಲನೆ ನಡೆಸದೆ ಸೀದಾ ಗಾಡಿ ಚಲಾಯಿಸಿದರೆ ವ್ಯಕ್ತಿ ಚಕ್ರದಡಿ ಸಿಲುಕುವ ದುರಂತ ಸಂಭವಿಸುತ್ತಿತ್ತು. ಚಾಲಕನ ಸಮಯಪ್ರಜ್ಞೆ ಮತ್ತು ಎಚ್ಚರಿಕೆಯಿಂದ ಒಂದು ಪ್ರಾಣ ಅಪಾಯದಿಂದ ಪಾರಾಗಿದ್ದು ಈ ಘಟನೆಯ ಆಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.