
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಆದೇಶದ ಮೇರೆಗೆ ಸುಳ್ಯ ಪೊಲೀಸರು ನಗರದ ವಿವಿಧ ಮಸೀದಿಗಳಿಗೆ ತೆರಳಿ ಗೋ ಹತ್ಯ ಕಾಯ್ದೆಯಡಿ ಬರುವ ಕಾನೂನುಗಳ ಮಾಹಿತಿಯನ್ನು ನೀಡಿ ಸ್ಥಳೀಯರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನವಂಬರ್ 7ರಂದು ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಹಲವಾರು ಮಸೀದಿಗಳಲ್ಲಿ ನಡೆಯಿತು.









ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕರಾದ ಸಂತೋಷ್ ಕುಮಾರ್ ಬಿ ಪಿ ರವರು ಸುಳ್ಯ ಕೇಂದ್ರ ಜುಮ್ಮಾ ಮಸೀದಿ ಗಾಂಧಿನಗರದಲ್ಲಿ ಮಾಹಿತಿ ಕಾರ್ಯಗಾರ ನಡೆಸಿದರು. ಮೊಗರ್ಪಣೆ ಜುಮಾ ಮಸೀದಿ, ದುಗಲಡ್ಕ ಮಸೀದಿ,ಸುಣ್ಣಮೂಲೆ, ಕುಂಭಕ್ಕೋಡು, ಅರಂತೋಡು ಮಸೀದಿಗಳಲ್ಲಿ ವಿವಿಧ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮಾಹಿತಿ ನೀಡಿ ‘ಗೋ ಹತ್ಯೆ ಕಾಯ್ದೆಯಡಿ ಪ್ರಕರಣ ದಾಖಲಾದರೆ ಅಂಥವರ ಸ್ವತ್ತನ್ನು ಮತ್ತು ಸಂಬಂಧಪಟ್ಟ ಜಾನುವಾರುಗಳನ್ನು ವಶಪಡಿಸಿ ಕೊಳ್ಳಲಾಗುವುದು.
ಎರಡಕ್ಕಿಂತ ಹೆಚ್ಚು ಬಾರಿ ಗೋಹತ್ಯೆ ಪ್ರಕರಣ ದಾಖಲಾಗಿದ್ದಲ್ಲಿ ಅಂತವರ ಮೇಲೆ ಕೋಕಾ ಕಾಯ್ದೆ ಅಡಿ 10 ವರ್ಷ ಜೈಲು ಶಿಕ್ಷೆ ನೀಡುವ ಪ್ರಕರಣವನ್ನು ದಾಖಲಿಸಲಾಗುವುದು.
ಗೋ ಹತ್ಯೆ ಪ್ರಕರಣದಲ್ಲಿ ಕಳ್ಳತನ ಕಂಡು ಬಂದಲ್ಲಿ ಅಂತವರ ಮೇಲೆ ಗೂಂಡಾ ಕಾಯ್ದೆ ಯಡಿ ಪ್ರಕರಣ ದಾಖಲಿಸುವುದು.
ಆರೋಪಿಗಳನ್ನು ಪ್ರೋತ್ಸಾಹಿಸುವುದು ಪ್ರಚೋದನೆಗೊಳಿಸುವುದು ಆಶ್ರಯ ನೀಡುವುದು ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ, ಅಲ್ಲದೆ ಇಂತಹ ಸಂದರ್ಭದಲ್ಲಿ ಖರೀದಿಸಿದ ಅಥವಾ ಸಂಗ್ರಹಿಸಿದ ಹಣವನ್ನು ಮುಟ್ಟುಗೋಲು ಹಾಕುವ ಬಗ್ಗೆ ಕಾನೂನು ಅರಿವನ್ನು ನೀಡಿ ಜಾಗೃತಿ ಮೂಡಿಸಿದರು.
ಶುಕ್ರವಾರ ನಮಾಜಿಗೆ ಬಂದ ನೂರಾರು ಮುಸಲ್ಮಾನ ಬಾಂಧವರು ಈ ಕಾರ್ಯಗಾರದಲ್ಲಿ ಭಾಗವಹಿಸಿದರು.










