ರಾಜ್ಯ ಯುವ ಪ್ರಶಸ್ತಿ, ಸಾಂಘಿಕ ಪ್ರಶಸ್ತಿ, ಪಂಚಸಪ್ತತಿ ಅಭಿಯಾನದ ಪ್ರಶಸ್ತಿ ಪ್ರದಾನ
ವಸ್ತುಪ್ರದರ್ಶನ, ಆಹಾರ, ಕೃಷಿ, ವಾಹನ ಮೇಳ ನಡೆಸಲು ಸಿದ್ಧತೆ

ಸುಳ್ಯದ ಯುವಜನ ಸಂಯುಕ್ತ ಮಂಡಳಿ ನೇತೃತ್ವದಲ್ಲಿ , ರಾಜ್ಯ ಯುವಜನ ಒಕ್ಕೂಟ ಇವರ ಸಹಕಾರದಲ್ಲಿ ರಾಜ್ಯ ಮಟ್ಟದ ಯುವಜನೋತ್ಸವ ಕಾರ್ಯಕ್ರಮವನ್ನು ಎರಡು ದಿನಗಳ ಕಾಲ ಪಂಜದಲ್ಲಿ ನಡೆಸಲು ಯುವಜನ ಸಂಯುಕ್ತ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿದೆ.
ನ.೧೫ರಂದು ಮಂಡಳಿ ಅಧ್ಯಕ್ಷ ಪವನ್ ಪಲ್ಲತ್ತಡ್ಕರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಕುರಿತು ಚರ್ಚಿಸಲಾಯಿತು.















೨೦೨೬ರ ಜನವರಿ ೧೭ ಮತ್ತು ೧೮ರಂದು ಎರಡು ದಿನಗಳ ಕಾರ್ಯಕ್ರಮವಾಗಿದ್ದು ವಸ್ತು ಪ್ರದರ್ಶನ, ಆಹಾರ ಮೇಳ, ಕೃಷಿ ಮೇಳ ಹಾಗೂ ವಾಹನ ಮೇಳವನ್ನು ನಡೆಸಲಾಗುತ್ತದೆ. ಜನವರಿ ೧೭ರಂದು ಮಧ್ಯಾಹ್ನ ೨ ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ರಾತ್ರಿವರೆಗೆ ಕಾರ್ಯಕ್ರಮ ನಡೆಯುತ್ತದೆ.
ಜನವರಿ ೧೮ರಂದು ಬೆಳಗ್ಗೆ ರಾಜ್ಯ ಯುವ ಪ್ರಶಸ್ತಿ, ಸಾಂಘಿಕ ಪ್ರಶಸ್ತಿ ಹಾಗೂ ೭೫ ದಿನಗಳ ಪಂಚಸಪ್ತತಿಯ ಸ್ವಚ್ಛತಾ ಅಭಿಯಾನದ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದು. ಬೆಳಗ್ಗೆ ೯ ರಿಂದ ಅದ್ದೂರಿ ಮೆರವಣಿಗೆ ನಡೆಸುವುದು. ತಾಲೂಕಿನ ಯುವಕ – ಯುವತಿ ಮಂಡಲಗಳು ಈ ಮೆರವಣಿಗೆಯಲ್ಲಿ ತಂಡವಾಗಿ ಭಾಗವಹಿಸುವುದು. ಮೆರವಣಿಗೆಯಲ್ಲಿ ಅತೀ ಹೆಚ್ಚು ಮಂದಿ ಭಾಗವಹಿಸಿದ ಹಾಗೂ ವಿಶೇಷತೆಯನ್ನು ತೋರ್ಪಡಿಸುವ ಯುವಕ ಯುವತಿ ಮಂಡಲಗಳನ್ನು ಗುರುತಿಸಿ ಪ್ರಥಮ – ದ್ವಿತೀಯ ಬಹುಮಾನವನ್ನು ನೀಡಲಾಗುತ್ತದೆ. ಪೂರ್ವಾಹ್ನ ೧೦ ರಿಂದ ಸಭಾ ಕಾರ್ಯಕ್ರಮದ ಉದ್ಘಾಟನೆ ಹಾಗೂ ಪ್ರಶಸ್ತಿ ಪ್ರದಾನ.
ಅದೇ ಸಭಾ ಕಾರ್ಯಕ್ರಮ ಮುಗಿದ ತಕ್ಷಣ ರಾಜ್ಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳು ವೇದಿಕೆಯಲ್ಲಿ ಆಯೋಜನೆ ಗೊಳ್ಳಲಿದೆ ಎಂದು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಕಾರ್ಯಕ್ರಮದ ಯಶಸ್ಸಿಗಾಗಿ ಸಂಘಟನಾ ಸಮಿತಿ ರಚಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಯುವಜನ ಸೇವಾ ಸಂಸ್ಥೆಯ ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ, ಕಾರ್ಯದರ್ಶಿ ದಯಾನಂದ ಕೇರ್ಪಳ, ಯುವಜನ ಸಂಯುಕ್ತ ಮಂಡಳಿ ಪೂರ್ವಾಧ್ಯಕ್ಷರುಗಳಾದ ದಿನೇಶ್ ಮಡಪ್ಪಾಡಿ, ಪಿ.ಎಸ್. ಗಂಗಾಧರ್, ಲಕ್ಷ್ಮೀನಾರಾಯಣ ಕಜೆಗದ್ದೆ, ಕೆ.ಗೋಕುಲ್ ದಾಸ್, ದಿಲೀಪ್ ಬಾಬ್ಲುಬೆಟ್ಟು, ಶಿವಪ್ರಕಾಶ್ ಕಡಪಳ, ಪ್ರವೀಣ್ ಕುಮಾರ್ ಎ.ಎಂ., ಗೌರವಾಧ್ಯಕ್ಷ ವಿಜಯಕುಮಾರ್, ಕೋಶಾಧಿಕಾರಿ ಲೋಹಿತ್ ಬಾಳಿಕಳ, ಉಪಾಧ್ಯಕ್ಷರುಗಳಾದ ದಯಾನಂದ ಪಾತಿಕಲ್ಲು, ವಿನುತಾ ಪಾತಿಕಲ್ಲು, ನಿರ್ದೇಶಕರುಗಳಾದ ನಮಿತಾ ಹರ್ಲಡ್ಕ, ರಾಜೀವಿ ಗೋಳ್ಯಾಡಿ, ಆದರ್ಶ ಚಿದ್ಗಲ್, ಜನಾರ್ದನ ನಾಗತೀರ್ಥ, ಸಂಜಯ ನೆಟ್ಟಾರು, ಕೀರ್ತನ್ ಮುರುಳ್ಯ, ಗುರುರಾಜ್ ಅಜ್ಜಾವರ, ದಿನೇಶ ಹಾಲೆಮಜಲು, ವಿನಯ ಬೆದ್ರುಪಣೆ, ಸತೀಶ್ ಮೂಕಮಲೆ, ನಿತೀಶ್ ಎರ್ಮೆಟ್ಟಿ, ಶಿವಪ್ರಸಾದ್ ಕೇರ್ಪಳ ಉಪಸ್ಥಿತಿತರಿದ್ದರು.
ಯುವಜನ ಸಂಯುಕ್ತ ಮಂಡಳಿ ಕಾರ್ಯದರ್ಶಿ ಮುರಳಿ ನಳಿಯಾರು ಕಾರ್ಯಕ್ರಮ ನಿರ್ವಹಿಸಿದರು.










