ಪತಿಗೆ ನ್ಯಾಯಾಂಗ ಕಸ್ಟಡಿ ; ಅತ್ತೆ ಸಹಿತ ಮೂವರಿಗೆ ಜಾಮೀನು
ಪತಿ ಹಾಗೂ ಪತಿಯ ಮನೆಯವರು ತನಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಪತ್ನಿ ಪೊಲೀಸರಿಗೆ ದೂರು ನೀಡಿದ ಹಿನ್ನಲೆಯಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು ಪತಿಗೆ ನ್ಯಾಯಾಂಗ ಕಸ್ಟಡಿ ವಿಧಿಸಲಾಗಿದೆ. ಅತ್ತೆ ಸಹಿತ ಮೂವರು ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದಾರೆ.
ಎಲಿಮಲೆ ಸಮೀಪದ ಸೇವಾಜೆಯ ಜನಾರ್ಧನ ಎಂಬವರ ಪತ್ನಿ ಮಂಗಳೂರಿನ ಮೂಡುಶೆಡ್ಡೆಯವರಾಗಿರುವ ಶ್ರೀಮತಿ ರೇಷ್ಮಾ ಎಂಬವರು ಈ ದೂರು ನೀಡಿದ್ದಾರೆ.















11.05.2025ರಂದು ನನ್ನ ವಿವಾಹವು ಜನಾರ್ದನರೊಂದಿಗೆ ನೆರವೇರಿತ್ತು. ವಿವಾಹದ ಖರ್ಚು ಹಾಗೂ ಚಿನ್ನಾಭರಣಗಳಿಗೆ 35 ಲಕ್ಷದಷ್ಟು ಹಣ ನನ್ನ ಮನೆಯವರಿಗೆ ಖರ್ಚಾಗಿತ್ತು. ಆದರೆ ವಿವಾಹದ ಬಳಿಕ ನನಗೆ ಮನೆಯಲ್ಲಿ ನೆಮ್ಮದಿ ಇರಲಿಲ್ಲ ಹಿಂಸೆ ನೀಡುತ್ತಿದ್ದರು. ವರದಕ್ಷಿಣೆ ತರುವಂತೆ ಒತ್ತಾಯಿಸುತ್ತಿದ್ದರು. ಬೆದರಿಕೆ ಒಡ್ಡಿ ಮನೆಯಿಂದ ಹೊರಹಾಕಿದ್ದರು. ಪತಿಗೆ ಇರುವ ಅಕ್ರಮ ಸಂಬಂಧವೂ ಇದಕ್ಕೆ ಕಾರಣವಾಗಿತ್ತು ಎಂಬ ದೂರನ್ನು ರೇಷ್ಮಾ ರವರು ಮಂಗಳೂರಿನ ಕಾವೂರು ಪೊಲೀಸ್ ಠಾಣೆಗೆ ನೀಡಿದ್ದರು. ಪತಿ ಜನಾರ್ಧನ, ಅತ್ತೆ ಗುಲಾಬಿ, ನಾದಿನಿಯರಾದ ಶಾರದಾ ಮತ್ತು ರೇಖಾ ಎಂಬವರ ವಿರುದ್ಧ ಈ ದೂರು ನೀಡಲಾಗಿತ್ತು.
ಪ್ರಕರಣ ದಾಖಲಿಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಪತಿ ಜನಾರ್ಧನರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು ಉಳಿದ ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಗೊಳಿಸಿರುವುದಾಗಿ ತಿಳಿದು ಬಂದಿದೆ.










