ಬೆಳೆ ವಿಮೆ ಪರಿಹಾರ: ರೈತರ ಬೇಡಿಕೆಗೆ ಸ್ಪಂದಿಸಬೇಕಿದೆ ಸರ್ಕಾರ

0

✍️ ಕ್ರೀಷ್ಮಾ ಆರ್ನೋಜಿ

ಅತಿಯಾದ ಗಾಳಿ, ಮಳೆ ಮತ್ತು ರೋಗಬಾಧೆಗಳಿಂದಾಗಿ ರೈತರು ವರ್ಷವಿಡೀ ಬೆಳೆದ ಬೆಳೆ ನಾಶವಾಗುತ್ತಿರುವುದು ರಾಜ್ಯದಲ್ಲಿ ಕೃಷಿ ಕ್ಷೇತ್ರದ ಅನಿಶ್ಚಿತತೆಯನ್ನು ಹೆಚ್ಚಿಸಿದೆ. ಹಿಂದೆ ಕೃಷಿಯೊಂದಿದ್ದರೆ ಹೇಗಾದರೂ ಜೀವನ ನಡೆಸಬಹುದಿತ್ತು ಎಂಬ ಹಿರಿಯರ ಮಾತಿದ್ದರೂ, ಇತ್ತೀಚೆಗೆ ಕೃಷಿಯ ಜೊತೆಗೆ ಉದ್ಯೋಗವೂ ಇರಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಉತ್ತರ ಕರ್ನಾಟಕ ಭಾಗದಲ್ಲಿ ಕಬ್ಬು ಮತ್ತು ಮೆಕ್ಕೆಜೋಳ ಬೆಳೆದ ರೈತರು ಒಂದು ಕಡೆ ಸಂಕಷ್ಟದಲ್ಲಿದ್ದರೆ, ದಕ್ಷಿಣ ಕನ್ನಡ, ಕೊಡಗು ಮತ್ತು ಮಲೆನಾಡು ಭಾಗಗಳಲ್ಲಿ ಕೊಳೆರೋಗ, ಎಲೆಚುಕ್ಕಿ ರೋಗ ಮತ್ತು ಕೆಂಪು ನುಸಿ ರೋಗದಂತಹ ಸಮಸ್ಯೆಗಳಿಂದ ಅಡಿಕೆ ಮತ್ತು ಕಾಳುಮೆಣಸು ಬೆಳೆಗಾರರ ಪಾಡು ಇನ್ನಷ್ಟು ಶೋಚನೀಯವಾಗಿದೆ. ಬೆಳೆ ನಷ್ಟದ ಜೊತೆಗೆ, ರೈತರಿಗೆ ಪಾವತಿಯಾಗುತ್ತಿರುವ ಬೆಳೆ ವಿಮೆಯ ಕಡಿಮೆ ಮೊತ್ತವು ಅವರನ್ನು ಮತ್ತಷ್ಟು ಕಂಗೆಡಿಸಿದೆ. ರೈತರಿಗೆ ಬರಬೇಕಾದ ಫಸಲು ಸಿಗದೆ, ಪರಿಹಾರವೂ ಕಡಿಮೆ ನೀಡಿರುವುದು ಅವರಲ್ಲಿ ತೀವ್ರ ಗೊಂದಲ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.

ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ (PMFBY) ತೋಟಗಾರಿಕಾ ಬೆಳೆಗಳಾದ ಅಡಿಕೆ ಮತ್ತು ಕಾಳುಮೆಣಸಿಗೆ ರೈತರು ಹವಾಮಾನ ಆಧಾರಿತ ಬೆಳೆ ವಿಮೆಯನ್ನು ಪಾವತಿಸಿದ್ದಾರೆ. ಆದರೆ, ಕಳೆದ ಎರಡು ವರ್ಷಗಳಲ್ಲಿ ಅತಿ ಹೆಚ್ಚು ಮಳೆಯಿಂದ ಬೆಳೆ ಹಾನಿಯಾಗಿದ್ದರೂ, ವಿಮಾ ಕಂಪನಿಗಳು ಈಗ ಪಾವತಿಸುತ್ತಿರುವ ಪರಿಹಾರದ ಮೊತ್ತವು ಅವೈಜ್ಞಾನಿಕವಾಗಿದೆ ಎಂದು ಬೆಳೆಗಾರರು ಆರೋಪಿಸುತ್ತಿದ್ದಾರೆ. ವಿಮೆ ಪರಿಹಾರ ಮಂಜೂರಿಗೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNMDMC) ನೀಡಿದ ಮಳೆ ಮಾಹಿತಿ ಮತ್ತು ಹವಾಮಾನ ಮಾಹಿತಿಯೇ ಮಾನದಂಡವಾಗಿದೆ. ನಿರಂತರವಾಗಿ ಆರು ದಿನಗಳ ಮಳೆಯಾಗಿರಬೇಕು ಎಂಬಂತಹ ಕೆಲವು ಕಠಿಣ ನಿಯಮಗಳೂ ಇವೆ. ಆದರೆ, KSNMDMC ಅಳವಡಿಸಿರುವ ಮಳೆ ಮಾಪನಾ ಕೇಂದ್ರಗಳ ಮಾಹಿತಿಗೂ, ಗ್ರಾಮ ಪಂಚಾಯಿತಿ ಅಳವಡಿಸಿರುವ ಮಾಪನ ಕೇಂದ್ರಗಳ ಮಳೆ ಪ್ರಮಾಣಕ್ಕೂ ವ್ಯತ್ಯಾಸವಿರುವುದು ರೈತರ ಅಸಮಾಧಾನಕ್ಕೆ ಮುಖ್ಯ ಕಾರಣವಾಗಿದೆ. ವಿಮಾ ಕಂಪನಿಗಳು ಕೇವಲ KSNMDMC ಮಾಹಿತಿಯನ್ನಷ್ಟೇ ಪರಿಗಣಿಸುತ್ತಿದ್ದು, ಈ ಮಾಪನ ಕೇಂದ್ರಗಳು ಸಮರ್ಪಕವಾಗಿ ನಿರ್ವಹಣೆಯಾಗುತ್ತಿವೆಯೇ ಎಂಬ ಅನುಮಾನಗಳು ರೈತರಲ್ಲಿವೆ. ಈ ಎಲ್ಲಾ ಕಾರಣಗಳಿಂದಾಗಿ ವಿಮಾ ಪರಿಹಾರದ ಮೊತ್ತ ಕಡಿಮೆಯಾಗಿದೆ.

ಬ್ಯಾಂಕುಗಳು ವಿಮೆಯ ಕಂತು ಕಟ್ಟಿಸಿಕೊಳ್ಳುವುದನ್ನು ಹೊರತುಪಡಿಸಿ, ವಿಮೆಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ರೈತರಿಗೆ ನೀಡುತ್ತಿಲ್ಲ. ಕಂತು ಕಟ್ಟುವಾಗ ವಿಮಾ ಕಂಪನಿಯೊಂದಿಗೆ ಬೆಳೆಗಾರರಿಗೆ ಯಾವುದೇ ಸಂಪರ್ಕವಿರುವುದಿಲ್ಲ. ಹೀಗಾಗಿ ವಿಮೆಯ ನಿಯಮಗಳು ಮತ್ತು ಮಾಹಿತಿಗಳಿಂದ ರೈತರನ್ನು ದೂರವಿಡಲಾಗಿದೆ. ಈ ವಿಮಾ ವ್ಯವಸ್ಥೆಯ ಅಸ್ಪಷ್ಟತೆಯು ರೈತರಿಗೆ ದೊಡ್ಡ ಸಮಸ್ಯೆಯಾಗಿದೆ. ಆದ್ದರಿಂದ ತೋಟಗಾರಿಕಾ ಇಲಾಖೆ ತಕ್ಷಣ ಮಧ್ಯಪ್ರವೇಶಿಸಿ, ಕಡಿಮೆ ಪರಿಹಾರ ಬರಲು ಕಾರಣಗಳೇನು ಎಂಬುದನ್ನು ವಿವರಿಸಬೇಕು ಮತ್ತು ಪರಿಹಾರ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕೆಂಬುದು ರೈತರ ಬೇಡಿಕೆಯಾಗಿದೆ.

ಕ್ರೀಷ್ಮಾ ಆರ್ನೋಜಿ
ಪತ್ರಕರ್ತೆ