ಪಂಜ ಗ್ರಾಮ ಪಂಚಾಯತ್ ನಲ್ಲಿ ನಡೆದಿದೆಯೆನ್ನಲಾದ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯ ಮೇಲೆ ಅವಸರದ ಕ್ರಮ ಬೇಡ ಎಂದು ಜಿಲ್ಲಾ ಸತ್ರ ನ್ಯಾಯಾಲಯ ಆದೇಶ ನೀಡಿರುವುದಾಗಿ ತಿಳಿದುಬಂದಿದೆ.









ಪಂಜ ಗ್ರಾಮ ಪಂಚಾಯತ್ ನಲ್ಲಿ 13 ಲಕ್ಷಕ್ಕೂ ಮಿಕ್ಕಿ ಅವ್ಯವಹಾರ ನಡೆದಿದೆ ಎಂದು ಗ್ರಾಮ ಪಂಚಾಯತ್ ಆಡಳಿತ ಮಂಡಳಿಯು ಪಂಚಾಯತ್ ಸಿಬ್ಬಂದಿ ಬಾಬು ಎಂಬವರ ಮೇಲೆ ಸುಬ್ರಹ್ಮಣ್ಯ ಪೋಲೀಸ್ ಠಾಣೆಗೆ ದೂರು ನೀಡಿದ್ದಲ್ಲದೆ ಬಾಬುರವರನ್ನು ಸೇವೆಯಿಂದ ಅಮಾನತು ಮಾಡಿತ್ತು.
ಪೋಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಬಾಬುರವರು ನಿರೀಕ್ಷಣಾ ಜಾಮೀನಿಗೆ ಪ್ರಯತ್ನಿಸುತ್ತಿದ್ದು, ಬಾಬುರವರ ಮೇಲೆ ಅವಸರದ ಕ್ರಮ ಬೇಡ ಎಂದು ಪುತ್ತೂರಿನಲ್ಲಿರುವ ಐದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಪೋಲೀಸರಿಗೆ ಆದೇಶಿಸಿರುವುದಾಗಿ ನ್ಯಾಯವಾದಿ ಎಂ.ವೆಂಕಪ್ಪ ಗೌಡರು ತಿಳಿಸಿದ್ದಾರೆ.
ಆರೋಪಿಗಳ ಪರವಾಗಿ ನ್ಯಾಯವಾದಿ ಎಂ.ವೆಂಕಪ್ಪ ಗೌಡ ವಾದಿಸಿದ್ದಾರೆ.



