ಮಾರುತಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ 9ನೇ ವರ್ಷದ ಶಾಲಾ ವಾರ್ಷಿಕೋತ್ಸವ

0


ಮಾರುತಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ 9ನೇ ವರ್ಷದ ಶಾಲಾ ವಾರ್ಷಿಕೋತ್ಸವ ಸಂಭ್ರಮ 2025-26 ಡಿಸೆಂಬರ್ 11ರಂದು ವಿಜೃಂಭಣೆಯಿಂದ ಆಚರಿಸಲಾಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸ್ಥಾಪಕರಾದ ರುಕ್ಮಯ್ಯ ದಾಸ್ ಅವರು ವಹಿಸಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿ ದರು. ಕಾರ್ಯಕ್ರಮವು ಗಣ್ಯರಿಂದ ದೀಪ ಬೆಳಗಿಸುವ ಮೂಲಕ ಆರಂಭವಾಯಿತು. ಸಂಸ್ಥೆಯ ಕಾರ್ಯದರ್ಶಿ ಡಾ. ಕಿಶೋರ್ ಕುಮಾರ್ ಅವರು ಅತಿಥಿಗಳನ್ನು ಸ್ವಾಗತಿಸಿದರು. ನಂತರ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಶೋಭಾ ಕಿಶೋರ್ ವಾರ್ಷಿಕ ವರದಿಯನ್ನು ಮಂಡಿಸಿ, ಶಾಲೆಯ ಶೈಕ್ಷಣಿಕ, ಕ್ರೀಡಾ ಮತ್ತು ಸಾಂಸ್ಕೃತಿಕ ಸಾಧನೆಗಳನ್ನು ವಿವರಿಸಿದರು.


ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಾವೇರಿ ಪಬ್ಲಿಕ್ ಸ್ಕೂಲ್, ಮಂಡ್ಯ ಇದರ ಪ್ರಾಂಶುಪಾಲರಾದ ಪ್ರದೀಪ್ ಕುಮಾರ್ ಅವರು ಸುಮಾರು ಐದು ವರ್ಷಗಳ ಹಿಂದೆ CISCE ಪಠ್ಯ ಕ್ರಮದ ಬಗ್ಗೆ ಪೋಷಕರಿಗೆ ಮಾಹಿತಿ ನೀಡಲು ಬಂದಿದ್ದು ಇದೀಗ ಇಂದು ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ICSE exam ವಿದ್ಯಾರ್ಥಿಗಳ ಫಲಿತಾಂಶ, ಸಾಂಸ್ಕೃತಿಕ ಚಟುವಟಿಕೆಗಳು, ಕ್ರೀಡಾ ಚಟುವಟಿಕೆಗಳಲ್ಲಿ ರಾಜ್ಯ ಮಟ್ಟದಲ್ಲಿ ವಿದ್ಯಾರ್ಥಿಗಳ ಸಾಧನೆಯನ್ನು ಕಂಡು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ CISCE National sports and Games ಹಮ್ಮಿಕೊಂಡಿರುವ ರಾಷ್ಟ್ರಮಟ್ಟದ ಕ್ರೀಡಾ ಚಟುವಟಿಕೆಗಳು ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಬಹುಮಾನ ಪಡೆದ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರಶಂಸಿಸಲಾಯಿತು ಮತ್ತು ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಬಹುಮಾನ ಪಡೆದು ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವನ್ನು ಗಿಟ್ಟಿಸಿಕೊಂಡ 5ನೇ ತರಗತಿಯ ಕುನಲ್ ಏನ್ ಎಲ್ ಅವನನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು. 2024 25 ನೇ ಸಾಲಿನ ಮೂರನೇ ಬ್ಯಾಚ್ ICSE ಪರೀಕ್ಷೆಯಲ್ಲಿ ಅತ್ಯುನ್ನತ ಸ್ಥಾನಗಳನ್ನು ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. 2024-25ರಲ್ಲಿ ಎಲ್ ಕೆ ಜಿ ಯಿಂದ 9ನೇ ತರಗತಿವರೆಗಿನ ವಿದ್ಯಾರ್ಥಿಗಳಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಯನ್ನು ಗುರುತಿಸಿ ಗೌರವಿಸಲಾಯಿತು.


ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿಯ ನಿರ್ದೇಶಕರಾದ ಶ್ರೀಮತಿ ಲೀಲಾವತಿ ರುಕ್ಮಯ್ಯ ದಾಸ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ರಮೇಶ್, ಉಪಾಧ್ಯಕ್ಷ ಗಿರೀಶ್ ಉಪಸ್ಥಿತರಿದ್ದರು, ಉಪ ಪ್ರಾಂಶುಪಾಲರಾದ ಶ್ರೀಮತಿ ಪುನೀತ ಕಾರ್ಯಕ್ರಮಕ್ಕೆ ಧನ್ಯವಾದವಿತ್ತರು.


ಆನಂತರದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿವಿಧ ಶೈಲಿಯ ನೃತ್ಯಗಳು, ಫ್ಯಾಶನ್ ಶೋ, ಯೋಗ, ಕಿರು ನಾಟಕ, ಪೋಷಕರಿಂದ ನೃತ್ಯ ಕಾರ್ಯಕ್ರಮ ಹೀಗೆ ಸುಮಾರು 30 ವಿಭಿನ್ನ ಕಾರ್ಯಕ್ರಮಗಳು ಪ್ರದರ್ಶಿಸಲ್ಪಟ್ಟವು. ಪ್ರಿ ಕೆ ಜಿ ಯಿಂದ 5ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಕರಿಂದ ಮತ್ತು 6ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ವಸಂತ ಕಾಯರ್ತೋಡಿ ಮತ್ತು ತಂಡ ಫ್ಯೂಶನ್ ಡ್ಯಾನ್ಸ್ ಸುಳ್ಯ ಅವರು ನೃತ್ಯ ತರಬೇತಿ ನೀಡಿದರು. ಸಹಶಿಕ್ಷಕಿ ಸರಿನಾ ಫಾತಿಮಾ ಹಾಗೂ ಕೃಷ್ಣರಾಜ್ ಕೇರ್ಪಳ ಕಾರ್ಯಕ್ರಮ ನಿರೂಪಿಸಿದರು.