













ಬಳ್ಪ ಗ್ರಾ.ಪಂ.ನ 2025-26ನೇ ಸಾಲಿನ ದ್ವಿತೀಯ ಹಂತದ ಗ್ರಾಮಸಭೆ ಪಂಚಾಯತ್ ಅಧ್ಯಕ್ಷ ಹರ್ಷಿತ್ ಕಾರ್ಜರ ಅಧ್ಯಕ್ಷತೆಯಲ್ಲಿ ಫೆ. 10ರಂದು ಬಳ್ಪ ಸ.ಉ.ಮಾ.ಹಿ.ಪ್ರಾ. ಶಾಲಾ ಸಭಾಂಗಣದಲ್ಲಿ ನಡೆಯಿತು. ನೋಡೆಲ್ ಅಧಿಕಾರಿಯಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೈಲಜ ಭಾಗವಹಿಸಿದ್ದರು. ಪಂಚಾಯತ್ ಸಿಬ್ಬಂದಿ ಯೋಗೀಶ್ ಎಣ್ಣೆಮಜಲು
ವರದಿ ವಾಚಿಸಿದರು. ಪಂಚಾಯತ್ ಮೂಲಕ ಕಸ ಸಂಗ್ರಹಿಸುವ ಸಂಜೀವಿನಿ ಘಟಕಕ್ಕೆ ಪಂಚಾಯತ್ ನಿಂದ ಹಣ ನೀಡಿರುವುದರಿಂದ ಒಟ್ಟು ಲೆಕ್ಕಾಚಾರವನ್ನು ಸಭೆಗೆ ನೀಡಬೇಕೆಂದು ಗ್ರಾಮಸ್ಥರಾದ ವಿಜಯಕುಮಾರ್ ಕಾಂಜಿ, ಹರೀಶ್ ಕಾರ್ಜ, ಹೊನ್ನಪ್ಪ ಎಂರ್ಬಿಲ ಮತ್ತಿತರರು ಒತ್ತಾಯಿಸಿದರು. ಗ್ರಾಮಸ್ಥರು ಕಟ್ಟಿದ ತೆರಿಗೆ ಹಣವನ್ನು ಖರ್ಚುಮಾಡುತ್ತೀರಿ. ಕಸ ವಿಲೇವಾರಿಯವರಿಗೆ ತಿಂಗಳ ಹಣ ನೀಡದಿದ್ದರೆ ದಂಡ ಹಾಕುತ್ತೀರಿ. ಆದರೆ ಅವರ ಸಂಗ್ರಹಿಸಿ ಹಣ ಎಷ್ಟು? ಎಷ್ಟು ಖರ್ಚಾಗಿದೆ? ಎಷ್ಟು ಕೊರತೆ ಆಗಿದೆಯೆಂದು ಕೇಳಿದರೆ ಕೊಡುತ್ತಿಲ್ಲ ಇದು ಯಾವ ನ್ಯಾಯ ಎಂದು ಪ್ರಶ್ನಿಸಿದಾಗ ಅಧಿಕಾರಿಗಳು ಮತ್ತು ಗ್ರಾಮಸ್ಥರ ಮಧ್ಯೆ ಬಿರುಸಿನ ಚರ್ಚೆ ನಡೆಯಿತು. ಪಂಚಾಯತ್ ಅಧ್ಯಕ್ಷ ಹರ್ಷಿತ್ ಕಾರ್ಜ ಒಮ್ಮೆಲೇ ನಾವು ಅವರಿಗೆ ಹಣ ಪಾವತಿ ಮಾಡಿದ್ದಲ್ಲ. ಹಂತ ಹಂತವಾಗಿ ಅವಶ್ಯಕತೆ ಇದ್ದಾಗ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಿ ಹಣ ಪಾವತಿ ಮಾಡಲಾಗಿದೆ ಎಂದಾಗ ಈ ಬಗ್ಗೆ ಬೇಕಾದ ಎಲ್ಲಾ ದಾಖಲಾತಿಗಳು ನಮ್ಮ ಬಳಿ ಇದೆ. ಪಂಚಾಯತ್ ಕಚೇರಿಗೆ ಬಂದರೆ ವೀಕ್ಷಿಸಬಹುದು. ಮುಂದಿನ ಸಭೆಯಲ್ಲಿ ಸಭೆಗೆ ತಿಳಿಸುತ್ತೇವೆ ಎಂದು ಪಿ.ಡಿ.ಒ ಮಹೇಶ್ ಜಿ.ಎನ್ ತಿಳಿಸಿದರು. ಗ್ರಾಮಾಭಿವೃದ್ಧಿಗೆ ಸಂಬಂಧಿಸಿದಂತೆ ಅನೇಕ ಚರ್ಚೆಗಳು ನಡೆಯಿತು.
ಸುಬ್ರಹ್ಮಣ್ಯ ಪೋಲಿಸ್ ಠಾಣೆಯ ಠಾಣಾಧಿಕಾರಿ ಆಂಜನೇಯ ರೆಡ್ಡಿ ವೇದಿಕೆಯಲ್ಲಿ ಆಸೀನರಾಗಿ ಇಲಾಖೆಗೆ ಸಂಬಂಧಿಸಿದ ಮತ್ತು ಉದ್ಯೋಗಾವಕಾಶಗಳ ಮಾಹಿತಿ ನೀಡಿದರು ಉಳಿದಂತೆ ವಿವಿಧ ಇಲಾಖೆಗಳ ಇಲಾಖಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದು, ಇಲಾಖಾ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಪಿ.ಡಿ. ಪಾರ್ವತಿ, ಸದಸ್ಯರುಗಳಾದ ರಾಜೀವ ಗೌಡ ಕಣ್ಕಲ್, ಚಂದ್ರಶೇಖರ ಅಕ್ಕೇಣಿ, ದಿವಾಕರ ಎಣ್ಣೆಮಜಲು, ಶ್ರೀಮತಿ ಕುಸುಮ ಎಸ್.ರೈ, ಶ್ರೀಮತಿ ಶಶಿಕಲಾ ಸೂಂತಾರು, ಶ್ರೀಮತಿ ಶೈಲಜಾ ಎಣ್ಣೆಮಜಲು, ಶ್ರೀಮತಿ ಸವಿತಾ ಸಂಪ್ಯಾಡಿ, ಶ್ರೀಮತಿ ನೇತ್ರಾವತಿ ಹೊಪ್ಪಾಳೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಳ್ಪ ಸ.ಉ.ಮಾ.ಹಿ.ಪ್ರಾ. ಶಾಲಾ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಪಂಚಾಯತ್ ಕಾರ್ಯದರ್ಶಿ ರಘು ಎನ್.ಬಿ ಸ್ವಾಗತಿಸಿ, ಸಂಜೀವ ಕೊನ್ನಡ್ಕ ವಂದಿಸಿದರು. ಪಂಚಾಯತ್ ಸಿಬ್ಬಂದಿಗಳು ಸಹಕರಿಸಿದರು.







