ಕುಕ್ಕುಜಡ್ಕ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆ

0

ಹಾಲು ಖರೀದಿ ಮತ್ತು ಮಾರಾಟದಲ್ಲಿ ಲಕ್ಷಾಂತರ ರೂಪಾಯಿ ವ್ಯತ್ಯಯ

ಜಮೆ ಮಾಡಲು
ಕಾರ್ಯದರ್ಶಿಯವರಿಗೆ ಮಾರ್ಚ್ 31 ರ ಗಡುವು

ಕುಕ್ಕುಜಡ್ಕ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ತಿರುಮಲೇಶ್ವರ ಭಟ್ ಕುಡುಂಬಿಲ ರವರ ಅಧ್ಯಕ್ಷತೆಯಲ್ಲಿ ಮಾ. 24 ರಂದು ಸಂಘದ ಸಭಾಭಾವನದಲ್ಲಿ ನಡೆಯಿತು.

ಸಂಘದ ವಿಸ್ತರಣಾಧಿಕಾರಿ ಶಿವಕುಮಾರ್ ರವರು ವಾರ್ಷಿಕ ಲೆಕ್ಕ ಪತ್ರ ಮಂಡಿಸಿದರು.

ಸಂಘದಲ್ಲಿ ಒಟ್ಟು 306 ಮಂದಿ ಸದಸ್ಯರನ್ನು ಹೊಂದಿದ್ದು 1.12.600 ಪಾಲು ಹಣ ಜಮೆಯಾಗಿದೆ.
ವರದಿ ಸಾಲಿನಲ್ಲಿ 1.28 ಲಕ್ಷ ಲೀಟರ್ ಹಾಲು ಸದಸ್ಯರಿಂದ ಖರೀದಿಸಲಾಗಿದೆ. ಸ್ಥಳೀಯ ಹಾಲು ಮಾರಾಟ 17,620, ಮಾದರಿ ಹಾಲು 904.2’ಲೀಟರ್ ಸ್ಥಳೀಯವಾಗಿ ಮಾರಾಟವಾಗಿದೆ. ಸಂಘದಿಂದ ಒಕ್ಕೂಟಕ್ಕೆ 1.15 ಲಕ್ಷ ಲೀಟರ್ ಹಾಲು ಕಳುಹಿಸಲಾಗಿದೆ. ಕೆ. ಎಂ. ಎಫ್ ನಿಂದ 1.20 ಲಕ್ಷ ಹಾಲಿನ ಹಣ ಬರಲು ಬಾಕಿ ಇದ್ದು ಹಾಲು ಉತ್ಪಾದಕರಿಗೆ 1.29 ಲಕ್ಷ ಪಾವತಿಸಲು ಬಾಕಿ ಇದೆ ಎಂದು ಕಾರ್ಯದರ್ಶಿ ಯೋಗಿಶ್ ರವರು ವರದಿ ವಾಚಿಸಿದರು.

ಅಡಿಟ್ ವರದಿ ಮತ್ತು ಸಭೆಗೆ ನೀಡಿದ ವರದಿಯ ಬಗ್ಗೆ ವ್ಯತ್ಯಾಸ ಇರುವ ಕುರಿತು ಎಂ. ಜಿ. ಸತ್ಯನಾರಾಯಣ ರವರು ಪರಿಶೀಲಿಸಿ ವರದಿಯ ಕುರಿತು ಆಕ್ಷೇಪಿಸಿದರು.

ಅಡಿಟ್ ರಿಪೋರ್ಟ್ ನಲ್ಲಿ ನೀಡಿರುವ ವರದಿ ಮತ್ತು ಮಹಾಸಭೆಗೆ ನೀಡಿದ ವರದಿ ಹೋಲಿಕೆ ಮಾಡಿದಾಗ ವ್ಯತ್ಯಾಸ ಕಂಡು ಬರುತ್ತಿದೆ. ಹಾಲಿನ ಖರೀದಿ ಮೌಲ್ಯಕ್ಕೂ ಮಾರಾಟ ಮೌಲ್ಯದಲ್ಲಿ ಹೋಲಿಕೆ ಮಾಡಿದಾಗ ಸುಮಾರು 4. 69 ಲಕ್ಷದಷ್ಟು ವ್ಯತ್ಯಾಸ ಕಂಡು ಬಂದಿದೆ. ಈ ರೀತಿಯ ವರದಿ ಕಣ್ಣು ಮುಚ್ಚಿ ಕೊಡುವುದ್ಯಾಕೆ.
17 ಸಾವಿರ ಲೀಟರ್ ಹಾಲಿಗೆ 9.7 ಲಕ್ಷ ಮೌಲ್ಯ ಬರಲು ಸಾಧ್ಯವೇ..? ತಪ್ಪು ವರದಿ ಯಾಕೆ ಕೊಟ್ಟಿದ್ದೀರಿ. 1.28 ಲಕ್ಷ ಲೀಟರ್ ಹಾಲು ಖರೀದಿಯಾದರೆ ಮಾರಾಟ ಲೀಟರ್ ಲೆಕ್ಕದಲ್ಲಿ ವ್ಯತ್ಯಾಸ ಏನು..? ಸರಿಯಾದ ಅಂಕಿ ಅಂಶ ಯಾವುದು..?
ಸ್ಪಷ್ಟವಾಗಿ ವರದಿ ಕೊಡಿ ಎಂದು ಎಂ. ಜಿ. ಸತ್ಯನಾರಾಯಣ ರವರು ಪ್ರಶ್ನಿಸಿದರು.

ಅಡಿಟ್ ವರದಿ ಮತ್ತು ಮಹಾಸಭೆಗೆ ನೀಡಿದ ವರದಿಯಲ್ಲಿ 2484 ಕೆ. ಜಿ ಯಷ್ಟು ಕಡಿಮೆ ತೂಕ ಬಂದಿದೆ. 2000 ಕೆ. ಜಿ ಹಾಲು ಕೊರತೆ ಕಂಡು ಬಂದಿದೆ ಅದು ಎಲ್ಲಿ ಹೋಯಿತು.
ಅಡಿಟ್ ರಿಪೋರ್ಟ್ ವರದಿ ಕೊಡುವಾಗ ನ್ಯೂನ್ಯತೆಗಳ ಬಗ್ಗೆ ಬರೆದು ಅಧಿಕಾರಿಗಳು ಸಹಿ ಸೀಲ್ ಹಾಕಿ ಪ್ರತಿಯನ್ನು ನೀಡಬೇಕು. ಈ ರೀತಿಯಾಗಿ ತಪ್ಪು ಲೆಕ್ಕ ನೀಡಿ ಹೋಗುವುದು ಸರಿಯಾದ ಕ್ರಮವಲ್ಲ.

ನಿಮ್ಮ ವರದಿಯಂತೆ ದಿವಸಕ್ಕೆ 15 ಲೀಟರ್ ಕೊರತೆ ಕಂಡಿದೆ. ಕೆ. ಎಂ. ಎಫ್ ಮತ್ತು ಲೋಕಲ್ ಸುಮಾರು 5 ಸಾವಿರ ಲೀಟರ್ ನಷ್ಟು ತೂಕ ಕಡಿಮೆ ಬಂದಿದೆ. ಇಷ್ಟು ಅಗಾಧ ಪ್ರಮಾಣದಲ್ಲಿ ಕಡಿಮೆ ಬರಲು ಹೇಗೆ ಸಾಧ್ಯ. ಲೋಕಲ್ ಸೇಲಿಗೆ ಯಾಕೆ ರಶೀದಿ ಕೊಡುವುದಿಲ್ಲ. ತೂಕದ ವ್ಯತ್ಯಾಸದ ಕುರಿತು ಸಮಂಜಸ ಉತ್ತರ ಕೊಡಿ. ಮಾರಾಟ ಮಾಡುವಾಗ ಸರಿ ಇಲ್ಲದ ತೂಕದಲ್ಲಿ ತೂಕ ಮಾಡಿ ವ್ಯತ್ಯಾಸ ಬಂದಿದೆಯಾದರೆ, ಅದೇ ಸ್ಕೇಲ್ ನಲ್ಲಿ ಖರೀದಿ ಮಾಡಿದ್ದೀರಿ. ಸಂಘದ ಸದಸ್ಯರಿಂದ ಖರೀದಿಸಿದ ಹಾಲಿನ 5 ಸಾವಿರ ಲೀಟರ್ ಕಡಿಮೆ ತೋರಿಸಿದ್ದೀರಿ. ಸದಸ್ಯರಿಗಾದ ನಷ್ಟಕ್ಕೆ ಯಾರು ಹೊಣೆ ಉತ್ತರ ಕೊಡಿ. ಲೆಕ್ಕಚಾರ ಸರಿ ಇಲ್ಲದ ಮೇಲೆ ಬೋನಸ್ ಯಾರಿಗೂ ಕೊಡುವುದು ಬೇಡ ಎಂದು ಹೇಳಿದರು.
ನಾವು ಕಟ್ಟಿ ಬೆಳೆಸಿದ ಸಂಘ ಇದು. ಈ ಸಂಘದ ಅಭಿವೃದ್ಧಿಗೆ ಸಾಕಷ್ಟು ಕಷ್ಟ ಪಟ್ಟಿದ್ದೇವೆ. ಈ ಸಂಘದಿಂದ ನಾವು ಹಾಕಿದ ಹಾಲಿನ ದರ ಮಾತ್ರ ಪಡೆದುಕೊಂಡವರು ಹೊರತು, ಇದರಿಂದ ಒಂದು ರೂಪಾಯಿ ಕೊಂಡು ಹೋದವರಲ್ಲ. ಈ ಸಂಘದ ಬೆಳವಣಿಗೆಗೆ ಇಲ್ಲಿನ ರೈತರ ಶ್ರಮವಿದೆ. ಹೀಗೆ ತಪ್ಪು ತಪ್ಪು ಲೆಕ್ಕ ಕೊಟ್ಟು ಸದಸ್ಯರಿಗೆ ವಂಚಿಸುವುದಕ್ಕೆ ಅವಕಾಶ ಕೊಡುವುದಿಲ್ಲ. ಇದಕ್ಕೆ ಸರಿಯಾದ ಕ್ರಮ ಕೖಗೊಳ್ಳುವಂತೆ ಎಂ. ಜಿ. ಸತ್ಯನಾರಾಯಣ ರವರು ಆಗ್ರಹಿಸಿದರು.

ಅಡಿಟ್ ರಿಪೋರ್ಟ್ ಮತ್ತು ಮಹಾಸಭೆಯ ವರದಿಯಲ್ಲಿ ನೀಡಿರುವ ಅಂಕಿ ಅಂಶದಲ್ಲಿ ವ್ಯತ್ಯಾಸ ಕಂಡು ಬಂದಿರುವುದು ಸಭೆಗೆ ಬಂದ ನಂತರ ನಮಗೆ ತಿಳಿದಿರುವುದು. ಹಾಲಿನ
ಲೋಕಲ್ ಸೇಲ್ ಬಿಲ್ ಕೊಡದಿರುವುದರಿಂದ ತೂಕದಲ್ಲಿ ವ್ಯತ್ಯಾಸ ಬಂದಿರಬಹುದು.
ಹಾಲು ಖರೀದಿ ಮತ್ತು ಮಾರಾಟದಲ್ಲಿ ತೂಕದಲ್ಲಿ ಬಂದಿರುವ ವ್ಯತ್ಯಾಸ ಮತ್ತು ಸ್ಪಷ್ಟ ಲೆಕ್ಕಚಾರವಿಲ್ಲದೆ ವರದಿ ನೀಡಿರುವುದು ಸರಿಯಲ್ಲ. ಈ ವರದಿಯ ಬಗ್ಗೆ ಕಾರ್ಯದರ್ಶಿ ಯವರು ನೇರ ಹೊಣೆಯಾಗುತ್ತಾರೆ. 2484 ಕೆ. ಜಿ ಯಷ್ಟು ಕೊರತೆಯಾದ ಹಾಲಿನ ತೂಕದ ಪ್ರಕಾರ ಮಾರ್ಚ್ 31 ರ ಒಳಗಾಗಿ ವ್ಯತ್ಯಾಸ ಕಂಡು ಬಂದಿರುವ ಮೊತ್ತ ರೂ. 4,69,426/- ರಷ್ಟು ಜಮೆ ಮಾಡಬೇಕು. ಇದಕ್ಕೆ ಆಡಳಿತ ಮಂಡಳಿಯವರು ಜವಾಬ್ದಾರರಾಗುತ್ತಾರೆ. ಇಲ್ಲವಾದಲ್ಲಿ ಈ ಬಗ್ಗೆ ಮುಂದಿನ ಕ್ರಮವನ್ನು ಒಕ್ಕೂಟತೆಗೆದುಕೊಳ್ಳುವುದಾಗಿ ವಿಸ್ತರಣಾಧಿಕಾರಿ ಶಿವಕುಮಾರ್ ತಿಳಿಸಿದರು.

ಇಷ್ಟು ದೊಡ್ಡ ಮೊತ್ತದ ವ್ಯತ್ಯಾಸ ಕಂಡು ಬಂದರೂ ಆಡಳಿತ ಮಂಡಳಿಯವರು ಇದರ ಕುರಿತಾಗಿ ತಿಂಗಳ ಸಾಮಾನ್ಯ ಸಭೆಯಲ್ಲಿ ಚರ್ಚಿಸಲಿಲ್ಲ ಯಾಕೆ..? ವಿದ್ಯಾವಂತ ಹಾಗೂ ಉತ್ತಮ ಜ್ಞಾನವಿರುವ ಅಧ್ಯಕ್ಷರು ಈ ಕುರಿತು ಸಡಿಲಿಕೆ ವಹಿಸಿರುವುದು ಯಾಕೆ..? ಎಂದು ಕೃಷ್ಣಪ್ಪ ಕೋಡ್ತುಗುಳಿಯವರು ಪ್ರಶ್ನಿಸಿದರು.

ವರದಿಯ ಪ್ರಕಾರ ಕಂಡು ಬಂದಿರುವ ವ್ಯತ್ಯಾಸದ ಮೊತ್ತವನ್ನು ಮಾರ್ಚ್ 31 ರ ಒಳಗಾಗಿ ಕಾರ್ಯದರ್ಶಿ ಯವರಿಂದ ಸಂಘದ ಖಾತೆಗೆ ಜಮೆ ಪಡಿಸುವುದಾಗಿ ಮತ್ತು
ಹಾಲಿನ ತೂಕದ ಸ್ಕೇಲ್ ದುರಸ್ತಿ ಪಡಿಸುವ ಕುರಿತು ಆಡಳಿತ ಮಂಡಳಿ ಪರವಾಗಿ ಉಪಾಧ್ಯಕ್ಷರು ತಿಳಿಸಿದರು.
ಕಾರ್ಯದರ್ಶಿ ಯವರಿಂದ ಈ ಬಗ್ಗೆ ಬಾಂಡ್ ಪೇಪರಿನಲ್ಲಿ ಲಿಖಿತ ಬರಹವನ್ನು ಪಡೆದು ನೋಟರಿಮಾಡಿಸಿಕೊಳ್ಳ
ಬೇಕು. ಬಾಯಿ ಮಾತಿನಲ್ಲಿ ವ್ಯವಹಾರ ಬೇಡ ಎಂದು ಎಂ. ಜಿ. ಎಸ್. ರವರು ಸೂಚಿಸಿದರು.
ಈ ಸಂದರ್ಭದಲ್ಲಿ
ಸಂಘದ ಉಪಾಧ್ಯಕ್ಷ ಯೋಗಿಶ್ ಮಾಡಬಾಕಿಲು, ಒಕ್ಕೂಟ ವಿಸ್ತರಣಾಧಿಕಾರಿ ಶಿವಕುಮಾರ್, ಕಾರ್ಯದರ್ಶಿ ಯೋಗಿಶ್, ನಿರ್ದೇಶಕರಾದ ಯತೀಶ್ ಹಿರಿಯಡ್ಕ, ಜಯಪ್ರಕಾಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಿರ್ದೇಶಕರುಗಳಾದ ರಾಮಕೃಷ್ಣ ಭಟ್,ಶ್ರೀಮತಿ ಲತೇಶ್ವರಿ ಮಾಯ್ಪಡ್ಕ, ವೆಂಕಟ್ರಮಣ ಇಟ್ಟಿಗುಂಡಿ, ಶಿವರಾಮ, ಶ್ರೀಮತಿ ಗೀತಾ ಮಾಯ್ಪಡ್ಕ ರವರು ಸಭೆಯಲ್ಲಿ ಕುಳಿತಿದ್ದರು. ಆರಂಭದಲ್ಲಿ ಸಭೆ ನಡೆಸಲು ಕೋರಂಇಲ್ಲದೆಇದ್ದುದರಿಂದ ಸಭೆಯು ತಡವಾಗಿ
ಆರಂಭಗೊಂಡಿತು.ನಂತರ ಸುದೀರ್ಘವಾದ ಚರ್ಚೆ ನಡೆದು ಮಧ್ಯಾಹ್ನ ಸಭೆಯು ಮುಕ್ತಾಯಗೊಂಡಿತು.