ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿ ಸಂಭ್ರಮಿಸಿದ ವಿಶೇಷ ಚೇತನರು

ಸುಳ್ಯದ ಎಂ.ಬಿ.ಫೌಂಡೇಶನ್ ವತಿಯಿಂದ ನಡೆಸಲ್ಪಡುವ ಸಾಂದೀಪ ವಿಶೇಷ ಶಾಲೆಯಲ್ಲಿ ಸಾಮರ್ಥ್ಯ ಸಂಭ್ರಮ ಕಾರ್ಯಕ್ರಮ ಎ. 9 ರಂದು ನಡೆಯಿತು. ಶಾಲೆಯಲ್ಲಿರುವ ಸುಮಾರು ೪೨ ಮಂದಿ ವಿಶೇಷ ಚೇತನ ಮಕ್ಕಳು ವಿವಿಧ ಮನರಂಜನಾ ಕಾರ್ಯಕ್ರಮಗಳನ್ನು ಪ್ರದರ್ಶಿಸಿ ಸಂಭ್ರಮಿಸಿದರು.















ಮಕ್ಕಳ ಪ್ರದರ್ಶನಕ್ಕಿಂತ ಮೊದಲು ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕಿ ಕು.ಭಾಗೀರಥಿ ಮುರುಳ್ಯ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಎಸ್.ಹರಗಿ, ಸಿಡಿಪಿಒ ಶೈಲಜಾ ದಿನೇಶ್, ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ಡಾ.ಯು.ಪಿ.ಶಿವಾನಂದ, ಪ್ರಶಸ್ತಿ ಪುರಸ್ಕೃತ ಔ಼ಷಧ ವ್ಯಾಪಾರಸ್ಥರಾದ ಗಿರಿಧರ ಹೆಗ್ಡೆ, ಉದ್ಯಮಿ ಕೃಷ್ಣ ಕಾಮತ್ ಅರಂಬೂರು ಹಾಗೂ ಉದ್ಯಮಿ ಅಬ್ದುಲ್ ರಹಿಮಾನ್ ಸಂಕೇಶ ಮುಖ್ಯ ಅತಿಥಿಗಳಾಗಿದ್ದರು.
ಗಿರಿಧರ ಹೆಗ್ಡೆಯವರಿಗೆ ಸನ್ಮಾನ
ವಿಶೇಷ ಚೇತನ ಮಕ್ಕಳಿಗೆ ಪಥಸಂಚಲನ ಸಂಗೀತದ ತರಬೇತಿ ನೀಡುತ್ತಿರುವ, ಸುಳ್ಯದ ಪ್ರಮುಖ ಔಷಧಿ ವ್ಯಾಪಾರಿ, ಇತ್ತೀಚೆಗೆ ಜಿಲ್ಲಾ ಮಟ್ಟದಲ್ಲಿ ಪುರಸ್ಕೃತರಾಗಿರುವ ಗಣೇಶ್ ಮೆಡಿಕಲ್ ಮಾಲಕ ಗಿರಿಧರ ಹೆಗ್ಡೆಯವರನ್ನು ಪತ್ನೀಸಹಿತರಾಗಿ ಸನ್ಮಾನಿಸಲಾಯಿತು.
ಡಾ.ಯು.ಪಿ.ಶಿವಾನಂದರಿಂದ ಶಾಲೆಗೆ ಶ್ಲಾಘನೆ – ಸನ್ಮಾನ ನಿರಾಕರಣೆ
ಗಿರಿಧರ ಹೆಗ್ಡೆಯವರೊಂದಿಗೆ ರಾಜ್ಯದ ಪ್ರಮುಖ ಪತ್ರಕರ್ತ, ಸುದ್ದಿ ಬಿಡುಗಡೆ ಸ್ಥಾಪಕ ಸಂಪಾದಕರಾದ ಡಾ.ಯು.ಪಿ.ಶಿವಾನಂದರನ್ನು ಸನ್ಮಾನಿಸಲು ನಿರ್ಧರಿಸಲಾಗಿತ್ತು. ಆದರೆ ಸನ್ಮಾನದ ವಿಚಾರ ಶಿವಾನಂದರಿಗೆ ಮೊದಲು ತಿಳಿದಿರಲಿಲ್ಲವೆನ್ನಲಾಗಿದೆ. ಸನ್ಮಾನದ ಪೋಡಿಯಂಗೆ ಅವರನ್ನು ಕರೆದಾಗ, ಅವರು ಮೈಕ್ ಬಳಿ ಬಂದು ” ಸನ್ಮಾನ ಪಡೆಯಲು ನನ್ನ ಮನಸ್ಸು ಒಪ್ಪುತ್ತಿಲ್ಲ. ಈ ಸಂಸ್ಥೆಗಾಗಿ ನಾನು ಏನೂ ಮಾಡಿಲ್ಲ. ಈ ಶಾಲೆಯ ವಿಶೇಷ ಚೇತನ ಮಕ್ಕಳು ಮತ್ತು ಅವರನ್ನು ತರಬೇತುಗೊಳಿಸಿ, ಶಿಕ್ಷಣ ನೀಡಿ, ಸ್ವಾವಲಂಬಿಗಳಾಗುವಂತೆ ರೂಪಿಸುತ್ತಿರುವ ಇಲ್ಲಿನ ಶಿಕ್ಷಕಿಯರು ಮತ್ತು ಎಂ.ಬಿ. ಸದಾಶಿವ ದಂಪತಿ ನಿಜವಾಗಿ ಸಾಧಕರು. ನಿಜವಾಗಿ ಅವರನ್ನು ಸನ್ಮಾನಿಸಬೇಕು” ಎಂದರಲ್ಲದೆ, ” ಈ ಶಾಲೆ ನಡೆಸುತ್ತಿರುವ ಎಂ.ಬಿ.ಫೌಂಡೇಶನ್ಗೆ ನಾಗರಿಕರು ನೆರವು ನೀಡಲು ಮುಂದೆ ಬರಬೇಕು” ಎಂದರು.
ಎಂ.ಬಿ.ಫೌಂಡೇಸನ್ ಟ್ರಸ್ಟಿ ಶರೀಫ್ ಜಟ್ಟಿಪಳ್ಳ ಹಾಗೂ ಎಸ್.ಆರ್.ಸೂರಯ್ಯರು ಸನ್ಮಾನಿತರ ಸನ್ಮಾನ ಪತ್ರವನ್ನು ವಾಚಿಸಿದರು. ಟ್ರಸ್ಟಿ ಶ್ರೀಮತಿ ಪುಷ್ಪಾ ರಾಧಾಕೃಷ್ಣ ಸ್ವಾಗತಿಸಿದರು. ಟ್ರಸ್ಟಿ ನೇತ್ರಾವತಿ ಪಡ್ಡಂಬೈಲು ವಂದಿಸಿದರು. ಎಂ.ಬಿ.ಫೌಂಡೇಶನ್ ಅಧ್ಯಕ್ಷ ಎಂ.ಬಿ.ಸದಾಶಿವ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಾಂದೀಪ್ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಹರಿಣಿ ಸದಾಶಿವ ವರದಿ ಮಂಡಿಸಿದರು. ಶಾಲಾ ಶಿಕ್ಷಕಿಯರು ಸ್ಕಾಲರ್ಶಿಪ್ ಪಡೆದ ವಿದ್ಯಾರ್ಥಿಗಳ ಹಾಗೂ ಬಹುಮಾನ ಪಡೆದ ವಿದ್ಯಾರ್ಥಿಗಳ ಹೆಸರು ವಾಚಿಸಿದರು. ಶ್ರೀಮತಿ ಮೋಹಿನಿ (ನಿಶಾ) ಕಾರ್ಯಕ್ರಮ ನಿರೂಪಿಸಿದರು.

“ಕಳೆದ ೨೬ ವರ್ಷಗಳಿಂದ ಸಾಂದೀಪ ವಿಶೇಷ ಶಾಲೆಯನ್ನು ಫೌಂಡೇಶನ್ ವತಿಯಿಂದ ನಡೆಸುತ್ತಿದ್ದು, 6 ಮಕ್ಕಳಿಂದ ಆರಂಭವಾದ ಶಾಲೆಯಲ್ಲಿ ಈಗ 42 ವಿದ್ಯಾರ್ಥಿಗಳಿದ್ದಾರೆ. ಈ ಮಕ್ಕಳಿಗೆ ಟಾಯ್ಲೆಟ್ ಟ್ರೈನಿಂಗ್ನಿಂದ ತೊಡಗಿ, ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುವ ವರೆಗೆ ಇಲ್ಲಿನ ವಿಶೇಷ ತರಬೇತು ಪಡೆದ ಶಿಕ್ಷಕಿಯರು ನೀಡುತ್ತಿರುವ ತರಬೇತಿ ಮತ್ತು ಸೇವೆ ಅನನ್ಯವಾದುದು. ಅವರ ಸೇವೆಯ ಮುಂದೆ ನಮ್ಮದು ಏನೂ ಅಲ್ಲ” ಎಂದು ಎಂ.ಬಿ. ಸದಾಶಿವರು ಗದ್ಗದಿತರಾಗಿ ಹೇಳಿದರು.
ಇತ್ತೀಚೆಗೆ ನಿವೃತ್ತರಾದ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶ್ರೀಧರ ಗೌಡ ಕೆರೆಮೂಲೆಯರನ್ನು ಗೌರವಿಸಲಾಯಿತು.
ಸಭಾ ಕಾರ್ಯಕ್ರಮದ ಬಳಿಕ ಶಾಲೆಯ ವಿಶೇಷ ಚೇತನ ಮಕ್ಕಳಿಂದ ಭರತನಾಟ್ಯ, ಜಾನಪದ ನೃತ್ಯ, ವಿವಿಧ ಪ್ರಾಣಿ ಪಕ್ಷಿಗಳ ವೇಷಗಳು ಹೀಗೇ ಹಲವು ಪ್ರತಿಭಾ ಪ್ರದರ್ಶನಗಳು ನಡೆದವು.







