ಆರೋಗ್ಯದಲ್ಲಿ ಏರುಪೇರಾಗಿದ್ದರೂ ಗೆಜ್ಜೆ ಕಟ್ಟಿ, ಬಣ್ಣ ಹಚ್ಚಿ ಕುಣಿಯುತ್ತಿದ್ದ ಮೇರು ಕಲಾವಿದ
ಮರೆಯಾದದ್ದು ಮರ್ಕಂಜದ ಸರ್ವಾಂಗೀಣ ಸಾಧಕ
ಮರ್ಕಂಜ ಬಲ್ನಾಡು ಪೇಟೆ ಬಸದಿಯ ಆಡಳಿತ ಮೊಕ್ತೇಸರ, ನೆಲ್ಲೂರು ಕೆಮ್ರಾಜೆ ಮತ್ತು ಮರ್ಕಂಜ ಗ್ರಾಮಗಳ ಪಂಚಸ್ಥಾಪನೆಗಳ ವ್ಯವಸ್ಥಪನಾ ಸಮಿತಿ ಮಾಜಿ ಅಧ್ಯಕ್ಷ, ಮರ್ಕಂಜದಲ್ಲಿ ಯಕ್ಷಗಾನ ಮೇಳ ಕಟ್ಟಿದ್ದ, ಕಲಾವಿದ, ಮೇರು ವ್ಯಕ್ತಿತ್ವದ ಬಲ್ನಾಡು ಪೇಟೆ ಯುವರಾಜ ಜೈನ್ ಇಂದು ಮಧ್ಯಾಹ್ನದ ವೇಳೆ ನಿಧನರಾದರು. ಅವರಿಗೆ 80 ವರ್ಷ ಪ್ರಾಯವಾಗಿತ್ತು.














ಮರ್ಕಂಜದ ಮಿನುಂಗೂರು, ಕಾವೂರು ಸೇರಿದಂತೆ ಧಾರ್ಮಿಕ ಕೇಂದ್ರಗಳನ್ನು ಜೀರ್ಣೋದ್ದಾರಗೊಳಿಸಿದ ಕೀರ್ತಿ ಇವರದ್ದಾಗಿತ್ತು. ಮರ್ಕಂಜದಲ್ಲಿ ಯಕ್ಷಗಾನ ಮೇಳ ಕಟ್ಟಿ ಹಲವು ವರ್ಷ ನಡೆಸಿದ್ದರು. ಅಲ್ಲದೇ ಕೊಡುಗೈ ದಾನಿಯಾಗಿಯೂ ಅನೇಕರಿಗೆ ಸಹಾಯಹಸ್ತ ಮಾಡಿದ್ದರು.
ಕೆಲ ವರ್ಷಗಳ ಹಿಂದೆ ಆರೋಗ್ಯದಲ್ಲಿ ಏರುಪೇರಾಗಿದ್ದರೂ ಧಾರ್ಮಿಕ ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತಿದ್ದರು. ಅಲ್ಲದೇ ಬಣ್ಣ ಹಚ್ಚಿ, ಕಾಲಿಗೆ ಗೆಜ್ಜೆ ಕಟ್ಟಿ ರಂಗದಲ್ಲಿ ಕುಣಿಯುತ್ತಿದ್ದರು. ಯಕ್ಷಗಾನದಲ್ಲಿ ಪ್ರಾಸಬದ್ದ ಮಾತುಗಾರಿಕೆ ಅವರದ್ದಾಗಿತ್ತು.
ಕಳೆದ ದಿನ ಸಮಯಗಳಿಂದ ಆರೋಗ್ಯದಲ್ಲಿ ಸ್ವಲ್ಪ ಹೆಚ್ಚು ಮಟ್ಟಿನ ಏರುಪೇರಾಗಿತ್ತು. ಇಂದು ಮಧ್ಯಾಹ್ನದ ವೇಳೆಗೆ ಮತ್ತೆ ಉಲ್ಬಣಗೊಂಡಾಗ ಅವರನ್ನು ಸುಳ್ಯ ಆಸ್ಪತ್ರೆಗೆ ಕೊಂಡೊಯ್ಯುವಾಗ ಕೊನೆಯುಸಿರೆಳೆದರೆಂದು ತಿಳಿದು ಬಂದಿದೆ.
ಮೃತರು ಪತ್ನಿ , ಪುತ್ರರಾದ ಪ್ರಭಾತ್ ಜೈನ್, ಪ್ರದೀಪ್ ಜೈನ್, ಪುತ್ರಿಯರಾದ ಸವಿತಾ, ವನಿತಾ ಹಾಗೂ ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳನ್ನು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
ನಾಳೆ ಮೃತರ ಸ್ವಗೃಹದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.







