













ಡಾ. ಕೆ ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜು, ಬೆಳ್ಳಾರೆ- ಪೆರುವಾಜೆ ಇಲ್ಲಿ ಮೇ 04 ರಂದು ಮಹಿಳಾ ಕೋಶ, ಆಂತರಿಕ ಗುಣಮಟ್ಟ ಭರವಸಾ ಕೋಶ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಅಕ್ಕ ಪಡೆ ಸಹಭಾಗಿತ್ವದಲ್ಲಿ ಮಹಿಳಾ ಮತ್ತು ಮಕ್ಕಳ ದೌರ್ಜನ್ಯ ಹಾಗೂ ಸುರಕ್ಷತೆಯ ಕುರಿತು ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಬೆಳ್ಳಾರೆ ಪೊಲೀಸ್ ಠಾಣೆಯ ಮಹಿಳಾ ಪೊಲೀಸ್ ಪೇದೆ ಪೂಜಾ, ದಕ್ಷಿಣ ಕನ್ನಡ “ಅಕ್ಕ ಪಡೆ” ತಂಡದ ಸಿಬ್ಬಂದಿಗಳಾದ ನವ್ಯ ಹಾಗೂ ರೇವತಿ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಮಹಿಳೆಯರ ಮೇಲೆ ನಡೆಯುವ ವಿವಿಧ ರೀತಿಯ ದೌರ್ಜನ್ಯಗಳು,ಸೈಬರ್ ವಂಚನೆಗಳು ಅವುಗಳಿಗೆ ಸoಬಂಧಿಸಿದ ಕಾನೂನುಗಳು, ಮಹಿಳಾ ಸಹಾಯವಾಣಿ ಮತ್ತು ಮಹಿಳೆಯರು ಪಡೆಯಬಹುದಾದ ರಕ್ಷಣಾ ಕ್ರಮಗಳ ಕುರಿತು ಹಾಗೆಯೇ ಸಾಮಾಜಿಕ ಜಾಲತಾಣಗಳ ಸುರಕ್ಷಿತ ಬಳಕೆಯ ಕುರಿತು ವಿದ್ಯಾರ್ಥಿನಿಯರಿಗೆ ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಬಾಲಸುಬ್ರಹ್ಮಣ್ಯ ಪಿ ಎಸ್ ವಹಿಸಿದ್ದರು.
ಮಹಿಳಾ ಕೋಶದ ಸಂಯೋಜಕರಾದ ಶ್ರೀಮತಿ ಶಾಲಿನಿ ಆರ್ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ವೇದಿಕೆಯಲ್ಲಿ ಮಹಿಳಾ ಕೋಶದ ವಿದ್ಯಾರ್ಥಿನಿ ಪ್ರತಿನಿಧಿಗಳಾದ ಶ್ರೇಯಾ, ತೃತೀಯ ಬಿ ಕಾಂ ಹಾಗೂ ಅನ್ವಿತಾ ದ್ವಿತೀಯ ಎಂ ಎಸ್ ಡಬ್ಲ್ಯೂ ಉಪಸ್ಥಿತರಿದ್ದರು.







