ಸುಳ್ಯದಲ್ಲಿ ಅಲ್ಪಸಂಖ್ಯಾತರ ಇಲಾಖೆ ವತಿಯಿಂದ ಶೈಕ್ಷಣಿಕ ಮಾಹಿತಿ ಮತ್ತು ಮಾರ್ಗದರ್ಶನ ಶಿಬಿರ

0

ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ

ಮಕ್ಕಳ ಶಿಕ್ಷಣಕ್ಕಾಗಿ ತಂದೆ ತಾಯಿಯಂದಿರು ಮಾಡುವ ತ್ಯಾಗಗಳು ಮತ್ತು ಕೊಡುಗೆಗಳನ್ನು ವಿದ್ಯಾರ್ಥಿಗಳು ಸದಾ ನೆನೆಸಿಕೊಳ್ಳಬೇಕು:ಶಾಸಕಿ ಭಾಗೀರಥಿ ಮುರುಳ್ಯ

ವಿದ್ಯಾರ್ಥಿಗಳ ಜೀವನ ರೂಪಿಸಲು ತಂದೆ ತಾಯಂದಿರು ಮಾಡುವ ತ್ಯಾಗಗಳು ಮತ್ತು ಕೊಡುಗೆಗಳ ಬಗ್ಗೆ ವಿದ್ಯಾರ್ಥಿಗಳು ಸದಾ ನೆನೆಸಿಕೊಳ್ಳಬೇಕು. ಪೋಷಕರು ಮಕ್ಕಳಿಗೆ ನೀಡುವ ಉತ್ತಮ ಪೋಷಕಾಂಶಗಳಲ್ಲಿ ಶಿಕ್ಷಣವೂ ಕೂಡ ಒಂದು ಅಂಗವಾಗಿದೆ. ಮಕ್ಕಳ ಬೆಳವಣಿಗೆಗಾಗಿ ಪೋಷಕರು ನೀಡುವ ಉತ್ತಮ ಆಹಾರ ಪದಾರ್ಥಗಳು ಮಕ್ಕಳನ್ನು ಒಳ್ಳೆಯ ರೀತಿಯಲ್ಲಿ ಬೆಳೆಸಿದರೆ ಮಕ್ಕಳ ಉತ್ತಮ ಜೀವನವನ್ನು ಬೆಳೆಸಲು ಶಿಕ್ಷಣವು ಕೂಡ ಅಷ್ಟೇ ಉತ್ತಮ ಪೋಷಕಾಂಶವಾಗಿದೆ ಎಂದು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು. ಭಾಗೀರಥಿ ಮುರುಳ್ಯ ರವರು ಹೇಳಿದ್ದಾರೆ.

ಮೇ 18ರಂದು ಸುಳ್ಯ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ತಾಲೂಕು ಮಾಹಿತಿ ಕೇಂದ್ರ ಮತ್ತು ಸುಳ್ಯ ತಾಲೂಕು ಯೂತ್ ಮುಸ್ಲಿಂ ಫೆಡರೇಶನ್, ಕೆಎ ನಾಲೆಜ್ ಸೆಂಟರ್ ವತಿಯಿಂದ ಆಯೋಜಿಸಲಾಗಿದ್ದ ಸರಕಾರದಿಂದ ವಿದ್ಯಾರ್ಥಿಗಳಿಗೆ ಸಿಗುವ ವಿವಿಧ ಸೌಲಭ್ಯಗಳ ಕುರಿತ ಮಾಹಿತಿ ಮತ್ತು ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಡ ವಿದ್ಯಾರ್ಥಿಗಳ ತಂದೆ ತಾಯಿಯಂದಿರು ಹೊಟ್ಟೆ ಬಟ್ಟೆಗಳನ್ನು ಕಟ್ಟಿ ತಮ್ಮ ಮಕ್ಕಳ ಜೀವನ ರೂಪಿಸುವಲ್ಲಿ ಕಷ್ಟಕಾರ್ಪಣ್ಯಗಳನ್ನು ಅನುಭವಿಸುತ್ತಾರೆ.ಮಕ್ಕಳ ಕಲಿಕೆಗಾಗಿ ಸಾಲ ಸೂಲ ಮಾಡಿ ಜೀವನ ತ್ಯಾಗ ಮಾಡುತ್ತಾರೆ ಇದನ್ನು ಮಕ್ಕಳು ಎಂದಿಗೂ ಮರೆಯಬಾರದೆಂದು ಹಿತವಚನ ನೀಡಿದರು.

ಸುಳ್ಯ ನಗರ ಪ್ರಾಧಿಕಾರದ (ಸೂಡಾ) ಅಧ್ಯಕ್ಷರಾದ ಕೆ. ಎಂ ಮುಸ್ತಫಾ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದ ತಾಲೂಕು ಪಂಚಾಯತ್ ಸಿಇಒ ರಾಜಣ್ಣರವರು ಇತ್ತೀಚಿನ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಪಡೆಯುತ್ತಿರುವ ಉತ್ತಮ ಅಂಕದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸಕ್ಕೆ ಶುಭ ಹಾರೈಸಿದರು.

ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಲಭ್ಯವಾಗುವ ವಿವಿಧ ಸೌಲಭ್ಯಗಳ ಜೊತೆಗೆ SSLC ಹಾಗೂ PUC ಬಳಿಕದ ಮುಂದಿನ ವಿದ್ಯಾಭ್ಯಾಸ, ಕೋರ್ಸ್ ಆಯ್ಕೆ ಮತ್ತು ಉದ್ಯೋಗಾವಕಾಶಗಳ ಕುರಿತು ಪುತ್ತೂರಿನ ಕಮ್ಯುನಿಟಿ ಸೆಂಟರ್ ನ ಮುಖ್ಯಸ್ಥರಾದ ಹನೀಫ್ ಪುತ್ತೂರು ಮತ್ತು ಇಮ್ತಿಯಾಜ್ ರವರು ಕಾರ್ಯಗಾರ ನಡೆಸಿದರು.

ಕಾರ್ಯಕ್ರಮದಲ್ಲಿ 2025-26 ನೇ ಸಾಲಿನ ದ್ವಿತೀಯ ಪಿಯುಸಿ ಮತ್ತು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಅಂಕವನ್ನು ಪಡೆದು ರಾಜ್ಯಕ್ಕೆ ಎರಡನೇ ಸ್ಥಾನವನ್ನು ಪಡೆದ ವಿದ್ಯಾರ್ಥಿನಿಗೆ ಹಾಗೂ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿರುವ ಸುಮಾರು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಮಾಹಿತಿ ಕೇಂದ್ರದ ನಿರ್ವಾಹಕರಾದ ಕಮಾಲ್ ಹಾಗೂ ಮುಸ್ಲಿಂ ಯೂತ್ ಫೆಡರೇಶನ್ ಇದರ ಅಧ್ಯಕ್ಷರಾದ ಕೆ ಎಸ್ ಉಮ್ಮರ್ ರವರು ಕಾರ್ಯಕ್ರಮವನ್ನು ನಿರೂಪಿಸಿ ಸರ್ವರನ್ನು ಸ್ವಾಗತಿಸಿದರು.

ವೇದಿಕೆಯಲ್ಲಿ ಮುಖಂಡರುಗಳಾದ ಭಾತಿಷಾ ಡಿಗ್ನಿಟಿಕ್ ಕನಕಮಜಲು,ಉದ್ಯಮಿ ಅಬ್ದುಲ್ ರಜಾಕ್ ರಾಜಧಾನಿ, ನಗರ ಪಂಚಾಯತ್ ಮಾಜಿ ಸದಸ್ಯರುಗಳಾದ ಶರೀಫ್ ಕಂಠಿ, ಸಿದ್ದೀಕ್ ಕೊಕ್ಕೋ,ಸಾಮಾಜಿಕ ಕಾರ್ಯಕರ್ತ ಸಿದ್ದೀಕ್ ಕಟ್ಟೆಕಾರ್ಸ್ ಹಾಗೂ ಇನ್ನಿತರ ಗಣ್ಯರುಗಳು ಉಪಸ್ಥಿತರಿದ್ದರು.
ಕಾರ್ಯಗಾರದಲ್ಲಿ ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗವಹಿಸಿದ್ದರು.ಸಂಸ್ಥೆಯ ಮುಖ್ಯಸ್ಥರಾದ ಸಾಧಿಕ್ ಕಲ್ಲುಗುಂಡಿ ಕಾರ್ಯಕ್ರಮ ನಿರೂಪಿಸಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮಾಹಿತಿ ವಿಭಾಗದ ಕಚೇರಿಯ ಮುಖ್ಯಸ್ಥರುಗಳು ಸಹಕರಿಸಿದರು.