ಬಾಲ್ಯದಲ್ಲೇ ದೇಶ ಭಕ್ತಿಯ ಜೊತೆಗೆ ಕೌಶಲ್ಯಯುತ ತರಬೇತಿ ನೀಡುವ ವಿದ್ಯಾಮಾತಾದ ಕಾರ್ಯ ಶ್ಲಾಘನೀಯ: CRP ಮಮತಾ
ಸದೃಢ ಸಮಾಜ ನಿರ್ಮಾಣದಲ್ಲಿ ಶಿಕ್ಷಣ ಮಹತ್ತರ ಪಾತ್ರ ವಹಿಸುತ್ತದೆ: ಎಂ ಬಿ ಸದಾಶಿವ
ಕಂಪ್ಯೂಟರ್ ಸಾಕ್ಷಾರತೆ ಮತ್ತು ವಿವಿಧ ಉದ್ಯೋಗಾದಾರಿತ ಕೋರ್ಸ್ ಗಳ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ ವಿತರಣೆ














“ಬಾಲ್ಯದಲ್ಲೇ ಶಿಕ್ಷಣದ ಜೊತೆಗೆ ಮೌಲ್ಯ ಶಿಕ್ಷಣ ಹಾಗೂ ಸಂಸ್ಕಾರಯುತವಾದ ಶಿಕ್ಷಣ ಇಂದಿನ ಅನಿವಾರ್ಯತೆಯಾಗಿದ್ದು ಇಂತಹ ಸಂದರ್ಭದಲ್ಲಿ ವಿದ್ಯಾಮಾತಾ ಅಕಾಡೆಮಿ ಇದಕ್ಕೆ ಪೂರಕವಾಗಿ ದೇಶ ಭಕ್ತಿಯನ್ನು ಉತ್ತೇಜಿಸಿ, ಭವಿಷ್ಯಕ್ಕೆ ಭದ್ರ ಬುನಾದಿ ಹಾಕುವ ಕೌಶಲ್ಯಯುತವಾದ ತರಬೇತಿಯನ್ನು ಚಿಕ್ಕ ಮಕ್ಕಳಿಗೆ ವಿಶಿಷ್ಟ ಬೇಸಿಗೆ ಶಿಬಿರದ ಮೂಲಕ ನೀಡುತ್ತಿರುವುದು ಸುಳ್ಯದಂತಹ ಗ್ರಾಮೀಣ ಪ್ರದೇಶದಲ್ಲಿ ಆಶಾದಾಯಕ ಬೆಳವಣಿಗೆ” ಎಂದು ಸುಳ್ಯದ ಸಮೂಹ ಸಂಪನ್ಮೂಲ ವ್ಯಕ್ತಿ(CRP) ಶ್ರೀಮತಿ ಮಮತಾ ರವರು ನುಡಿದರು.

ಇವರು ವಿದ್ಯಾಮಾತಾ ಅಕಾಡೆಮಿ ಸುಳ್ಯ ಶಾಖೆಯಲ್ಲಿ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿದ್ದ ಬೇಸಿಗೆ ಕೌಶಲ ಸಂಭ್ರಮ 2026 ರ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅಥಿತಿಯಾಗಿ ಪಾಲ್ಗೊಂಡು ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿ ಶುಭ ಹಾರೈಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ M B ಫೌಂಡೇಶನ್ ಸುಳ್ಯ ಇದರ ಸ್ಥಾಪಕರಾದ M B ಸದಾಶಿವರವರು ಮಾತನಾಡಿ “ಸುಳ್ಯ ಭಾಗದಲ್ಲಿ ಸರಕಾರಿ ಉದ್ಯೋಗಕ್ಕೆ ಸೇರಲು ತಯಾರಾಗಲು ಹಿಂಜರಿಯುತ್ತಿರುವ ಕಾಲಘಟ್ಟದಲ್ಲಿ ವಿದ್ಯಾಮಾತಾ ಅಕಾಡೆಮಿಯು ಸೂಕ್ತವಾದ ಅರಿವನ್ನು ಮೂಡಿಸಿ ಪರಿಣಾಮಕಾರಿ ತರಬೇತಿ ನೀಡಿ ಆ ಕೊರತೆಯನ್ನು ನೀಗಿಸುತ್ತಿರುವುದು ಸಂತಸದ ಸಂಗತಿ, ಅಲ್ಲದೇ ಇಂತಹ ಬೇಸಿಗೆ ಶಿಬಿರವನ್ನು ವಿನೂತನ ರೀತಿಯಲ್ಲಿ ನಡೆಸಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಿದೆ” ಎಂದು ಸಂಸ್ಥೆಯ ಕಾರ್ಯ ವೈಖರಿಯನ್ನು ಗುರುತಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಬೇಸಿಗೆ ಕೌಶಲ ಸಂಭ್ರಮದಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಮತ್ತು ಗೌರವ ಪದಕ ವಿತರಣೆ
ಭವಿಷ್ಯದ ಅಧಿಕಾರಿಗಳನ್ನು ಹುಟ್ಟು ಹಾಕುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿದ್ಯಾಮಾತಾ ಅಕಾಡೆಮಿಯು ಪ್ರತೀ ವರ್ಷದಂತೆ ಈ 2026ನೇ ಸಾಲಿನಲ್ಲಿ ವಿಶಿಷ್ಟ ಬೇಸಿಗೆ ಶಿಬಿರವನ್ನು ಆಯೋಜಿಸಿ ಮಕ್ಕಳಿಗೆ ಗಣಿತ, ಇಂಗ್ಲೀಷ್, ವಿಜ್ಞಾನ, ಸಾಮಾನ್ಯ ಜ್ಞಾನದ ಜೊತೆಗೆ ನೈತಿಕ ಮೌಲ್ಯ ಗಳಂತಹ ವಿವಿಧ ಕೌಶಲ್ಯಯುತ ತರಬೇತಿಯನ್ನು ನೀಡಿ ಮಕ್ಕಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಅರಿವು ಮೂಡಿಸುವಲ್ಲಿ ಯಶಸ್ವಿಯಾಗಿದ್ದು ಮುಂಬರುವ ಸೈನಿಕ ಶಾಲೆ, ನವೋದಯದಂತಹ ವಸತಿ ಶಾಲೆಗಳ ಪ್ರವೇಶ ಪರೀಕ್ಷೆಯನ್ನು ಎದುರಿಸಲು ಸಜ್ಜುಗೊಳಿಸಲಾಗಿದೆ.
ಈ ಒಂದು ತಿಂಗಳ ಅವಧಿಯಲ್ಲಿ ತರಬೇತಿ ಪಡೆದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು, ಅಲ್ಲದೇ ವಿದ್ಯಾಮಾತಾ ಅಕಾಡೆಮಿಯಲ್ಲಿ ಕಂಪ್ಯೂಟರ್ ಶಿಕ್ಷಣ ಮತ್ತು ಪ್ರಾಕ್ಟಿಕಲ್ ಅಕೌಂಟಿಂಗ್ ಸೇರಿದಂತೆ ವಿವಿಧ ಉದ್ಯೋಗಾಧಾರಿತ ವಿಷಯಗಳ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ವಿದ್ಯಾಮಾತಾ ಅಕಾಡೆಮಿಯ ನಿರ್ದೇಶಕಿ ಶ್ರೀಮತಿ ರಮ್ಯಾ ಭಾಗ್ಯೇಶ್ ರೈರವರು ಸಂಸ್ಥೆಯ ಸಾಧನೆಯನ್ನು ಮೆಲುಕು ಹಾಕಿ ಮುಂದಿನ ಯೋಜನೆಯ ಕುರಿತು ಬೆಳಕು ಚೆಲ್ಲಿದರು ಅದೇ ರೀತಿ ಜೂನ್ ತಿಂಗಳಿನಿಂದ ವಿದ್ಯಾಮಾತಾದಲ್ಲಿ ಪ್ರಾರಂಭವಾಗುವ ನವೋದಯ, ಸೈನಿಕ, ಮೊರಾರ್ಜಿ ಶಾಲೆ ಸೇರಿದಂತೆ ವಿವಿಧ ವಸತಿ ಶಾಲೆಗಳ ಪ್ರವೇಶ ಪರೀಕ್ಷೆಗಳಿಗೆ ತರಬೇತಿ ಹಾಗೂ ಮಾಥ್ಸ್ ಕ್ಲಬ್, ಅಬಾಕಸ್, ವೇದಿಕ್ ಮಾಥ್ಸ್, ಮಾನಸಿಕ ಸಾಮರ್ಥ್ಯದ ತರಬೇತಿಯ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಪೋಷಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.







