ಸಂಸದ ಬ್ರಿಜೇಶ್ ಚೌಟರ ನೇತೃತ್ವದಲ್ಲಿ ಶಾಸಕಿ ಭಾಗೀರಥಿ ಮುರುಳ್ಯರಿಂದ ಸಚಿವರಿಗೆ ಮನವಿ














ಕಾಣಿಯೂರು-ಸುಳ್ಯ-ನಾಪೋಕ್ಲು ಮಾರ್ಗವಾಗಿ ಮೈಸೂರಿಗೆ ನೂತನ ರೈಲು ಮಾರ್ಗ ನಿರ್ಮಾಣದ ಪ್ರಸ್ತಾವನೆಯ ಕುರಿತು ಕೇಂದ್ರ ರೈಲ್ವೆ ಸಚಿವ (ರಾಜ್ಯ) ರಾಗಿರುವ ವಿ.ಸೋಮಣ್ಣರಿಗೆ ಸಂಸದ ಕ್ಯಾ.ಬ್ರಿಜೇಶ್ ಚೌಟರ ನೇತೃತ್ವದಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮನವಿ ಸಲ್ಲಿಸಿದ್ದಾರೆ. ಜಿಲ್ಲೆಯ ಶಾಸಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಈ ಪ್ರಸ್ತಾಪಿತ ರೈಲು ಮಾರ್ಗವು ಮಂಗಳೂರು-ಹಾಸನ ರೈಲು ಮಾರ್ಗದಲ್ಲಿರುವ ‘ಕಾಣಿಯೂರು’ ನಿಲ್ದಾಣದಿಂದ (ಇದು ಹಿಂದೆ ಪ್ರಸ್ತಾಪಿಸಲಾದ ಕಾಣಿಯೂರು-ಕಾಣಂಗಾಡ್ ಮಾರ್ಗದ ಜಂಕ್ಷನ್ ಕೂಡ ಆಗಿತ್ತು) ಪ್ರಾರಂಭವಾಗಲಿದೆ. ಅಲ್ಲಿಂದ ಈ ಮಾರ್ಗವು ಸುಳ್ಯ ಮತ್ತು ನಾಪೋಕ್ಲು ಮೂಲಕ ಹಾದುಹೋಗಿ, ಪ್ರಸ್ತಾಪಿತ ಕುಶಾಲನಗರ-ಮೈಸೂರು ರೈಲು ಮಾರ್ಗವನ್ನು ಕುಶಾಲನಗರದಲ್ಲಿ ಸಂಪರ್ಕಿಸಲಿದೆ. ತನ್ಮೂಲಕ ಮೈಸೂರು ಮತ್ತು ಮುಂದಿನ ಊರುಗಳಿಗೆ ನೇರ ಸಂಪರ್ಕ ಕಲ್ಪಿಸುವ ಗುರಿಯನ್ನು ಹೊಂದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ತಾಲೂಕು ಆಗಿದ್ದರೂ, ಸುಳ್ಯ ತಾಲೂಕಿನಲ್ಲಿ ಪ್ರಸ್ತುತ ಯಾವುದೇ ರೈಲು ಹಳಿ ಅಥವಾ ರೈಲು ನಿಲ್ದಾಣವಿಲ್ಲ. ಆದ್ದರಿಂದ ಈ ಮನವಿಯನ್ನು ಪುರಸ್ಕರಿಸಿ ಈ ಯೋಜನೆ ನೀಡಬೇಕಾಗಿ ಮನವಿ ಮಾಡಿಕೊಳ್ಳಲಾಗಿದೆ.
ಧಾರ್ಮಿಕವಾಗಿ ಈ ಪ್ರದೇಶವು ಅತ್ಯಂತ ಮಹತ್ವದ್ದಾಗಿದ್ದು, ವಿಶ್ವಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವು ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿದೆ. ಇಲ್ಲಿಗೆ ದೇಶಾದ್ಯಂತ ಲಕ್ಷಾಂತರ ಭಕ್ತರು ಪ್ರತಿವರ್ಷ ಆಗಮಿಸುತ್ತಾರೆ. ರೈಲು ಸಂಪರ್ಕದ ಕೊರತೆಯಿಂದಾಗಿ ಯಾತ್ರಿಕರು ರಸ್ತೆ ಮಾರ್ಗವನ್ನೇ ಅವಲಂಬಿಸಬೇಕಾಗಿದೆ, ಇದು ಸಂಚಾರ ದಟ್ಟಣೆ ಮತ್ತು ತೊಂದರೆಗೆ ಕಾರಣವಾಗಿದೆ. ಸುಳ್ಯದ ಮೂಲಕ ಹಾದುಹೋಗುವ ರೈಲು ಮಾರ್ಗವು ಈ ಪ್ರಮುಖ ಯಾತ್ರಾಸ್ಥಳಕ್ಕೆ ಉತ್ತಮ ಸಂಪರ್ಕ ಕಲ್ಪಿಸಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.







