ಕಾಲಿಗೆ ಗಾಯವಾಗಿ ಸುಳ್ಯ ಪೇಟೆಯಲ್ಲಿ ಸುತ್ತಾಡುತ್ತಿದ್ದ ವೃದ್ದನನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆಗೆ ಸಹಕಾರ
ಸುಳ್ಯ ಪೇಟೆ ಪರಿಸರದಲ್ಲಿ ಕಳೆದ ಹಲವಾರು ದಿನಗಳಿಂದ ಕಾಲಿಗೆ ಗಂಭೀರ ಗಾಯವಾಗಿಕೊಂಡಿದ್ದ ವೃದ್ಧರೊಬ್ಬರು ಸುತ್ತಾಡಿಕೊಂಡಿದ್ದು ರಸ್ತೆಯ ಬದಿ ಮತ್ತು ಎಲ್ಲೆಂದರಲ್ಲಿ ಬಿದ್ದು ಕೊಂಡಿರುತ್ತಿದ್ದರು.














ಜೂನ್ 10 ರಂದು ಸುಳ್ಯದ ಲಯನ್ಸ್ ಸಭಾಭವನದ ಮುಂಭಾಗದ ರಸ್ತೆ ಬದಿ ಬಿದ್ದುಕೊಂಡಿದ್ದ ಇವರನ್ನು ಗಮನಿಸಿದ ಗುತ್ತಿಗೆದಾರ ರಾಜೇಶ್ ರವರು ಇವರ ಪರಿಸ್ಥಿತಿಯನ್ನು ನೋಡಿ ಆಟೋರಿಕ್ಷಾ ಒಂದರಲ್ಲಿ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದಾರೆ.
ಈ ಸಂದರ್ಭದಲ್ಲಿ ಇವರು ಧರಿಸಿದ್ದ ಬಟ್ಟೆಗಳು ಬಹಳ ಕೊಳಕು ಆಗಿದ್ದು ಅಲ್ಲದೆ ತಲೆ ಕೂದಲು ಗಡ್ಡ ಬಹಳಷ್ಟು ಬೆಳೆದು ಮಾನಸಿಕ ವ್ಯಕ್ತಿಯಂತೆ ಇದ್ದದ್ದನ್ನು ಕಂಡ ರಾಜೇಶ್ ರವರು ಇವರಿಗೆ ನೂತನ ಎರಡು ಜೊತೆ ಬಟ್ಟೆಯನ್ನು ಕೂಡ ಖರೀದಿಸಿ ನೀಡಿದ್ದಾರೆ.ಆಸ್ಪತ್ರೆಯ ಆರೋಗ್ಯ ಮಿತ್ರ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುವ ಮುರಳಿ ರವರ ಸಹಕಾರ ಪಡೆದು ಸಿಬ್ಬಂದಿಯ ಸಹಕಾರದಿಂದ ಇವರನ್ನು ಸ್ವಚ್ಛಗೊಳಿಸುವ ಕೆಲಸ ಮಾಡಿದ್ದು ಬಳಿಕ ಸುಳ್ಯ ಸವಿತ ಸಮಾಜ ಸಂಘದ ಸದಸ್ಯರಾಗಿರುವ ಗಣೇಶ ರವರನ್ನು ಆಸ್ಪತ್ರೆಗೆ ಕರೆಸಿ ಅವರ ತಲೆಕೂದಲು ಮತ್ತು ಗಡ್ಡವನ್ನು ಚೌರ ಮಾಡಿಸಿ ಬಳಿಕ ಆಸ್ಪತ್ರೆಯ ಆರೋಗ್ಯ ಸಹಾಯಕರಿಂದ ಕಾಲಿನ ಗಾಯಕ್ಕೆ ಚಿಕಿತ್ಸೆ ಕೊಡಿಸಿ ಅವರನ್ನು ಒಳರೋಗಿ ವಿಭಾಗದಲ್ಲಿ ದಾಖಲಿಸಿರುತ್ತಾರೆ.
ಗಾಯಗೊಂಡು ಅನಾಥರಾಗಿ ಸುತ್ತಾಡುತ್ತಿದ್ದ ಈ ವ್ಯಕ್ತಿ ಸಂಪಾಜೆ ನಿವಾಸಿ ಗಣೇಶ್ ಕಿರ್ಲಾಯ ಎಂದು ಇವರು ಹೇಳುತ್ತಿದ್ದು ಇವರ ಪತ್ನಿ ಹಾಗೂ ಮಕ್ಕಳು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಮತ್ತು ಕಳೆದ ಹಲವಾರು ವರ್ಷಗಳಿಂದ ಮಡಿಕೇರಿಯಲ್ಲಿ ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡಿದ್ದು, ಅರಂತೋಡು ಹಾಗೂ ಇನ್ನಿತರ ಕಡೆಗಳಲ್ಲಿಯೂ ಕೆಲಸ ನಿರ್ವಹಿಸಿಕೊಂಡಿದ್ದೆ ಎಂದು ಅವರ ಬಗ್ಗೆ ಸುದ್ದಿ ವರದಿಗಾರರೊಂದಿಗೆ ಹೇಳಿದ್ದಾರೆ.
ರಾಜೇಶ್ ರವರ ಮಾನವೀಯ ಗುಣಕ್ಕೆ ಸಾರ್ವಜನಿಕರಲ್ಲಿ ಪ್ರಸಂಶೆ ವ್ಯಕ್ತವಾಗಿದೆ.







