













ಕನ್ನಡದ ಹಿರಿಯ ಸಾಹಿತಿ ಡಾ. ಬಿ. ಪ್ರಭಾಕರ ಶಿಶಿಲ ರಚಿಸಿದ ವಿಶಿಷ್ಟ ಕಾದಂಬರಿ ಚಿದಗ್ನಿಯನ್ನು ವಿದ್ವಾನ್ ವೇಲೂರಿ ಕೃಷ್ಣಮೂರ್ತಿ ತೆಲುಗಿಗೆ ಅನುವಾದಿಸುತ್ತಿದ್ದಾರೆ.
ಶ್ರೀಯುತ ವೇಲೂರಿಯವರು ಡಾ. ಶಿಶಿಲರ ಪುಂಸ್ತ್ರೀ, ಮತ್ಸ್ಯಗಂಧಿ ಮತ್ತು ಮೂಗು ಕಾದಂಬರಿಗಳನ್ನು ಈಗಾಗಲೇ ತೆಲುಗಿಗೆ ಭಾಷಾಂತರಿಸಿದ್ದು, ಅವು ತೆಲಂಗಾಣ ಮತ್ತು ಆಂಧ್ರ ಪ್ರದೇಶಗಳಲ್ಲಿ ಭಾರೀ ಯಶಸ್ಸನ್ನು ಕಂಡಿವೆ.
ಶಿಶಿಲರ ಚಿದಗ್ನಿಯು ಲಲಿತಾ ಸಹಸ್ರನಾಮವನ್ನು ಅಳವಡಿಸಿ ರಚಿಸಿದ ಮೊತ್ತ ಮೊದಲ ಕಾದಂಬರಿಯಾಗಿದೆ. ೨೦೨೩ರಲ್ಲಿ ಧಾರವಾಡದ ಮನೋಹರ ಗ್ರಂಥಮಾಲಾದ ರಮಾಕಾಂತ ಜೋಶಿಯವರು ಈ ಕಾದಂಬರಿಯನ್ನು ಹೊರತಂದಿದ್ದು, ಇದರ ಎರಡನೇ ಆವೃತ್ತಿ ಶೀಘ್ರದಲ್ಲೇ ಹೊರಬರಲಿದೆ. ಚಿದಗ್ನಿಯನ್ನು ಶ್ರೀ ಕೆ.ವಿ. ಕುಮಾರನ್ ಅವರು ಮಲೆಯಾಳಂಗೆ ಅನುವಾದಿಸಿದ್ದು, ಕೇರಳದಲ್ಲೂ ಅದು ನೆಲೆಯನ್ನು ಕಂಡುಕೊಳ್ಳುತ್ತಿದೆ. ಲಲಿತಾಂಬಿಕಾ ದೇವಿಯ ಸಾಕ್ಷಾತ್ಕಾರಕ್ಕಾಗಿ ಸಾಧಕನೊಬ್ಬ ಮಾಡುವ ಪ್ರಯತ್ನಗಳು ಮನೋವೈಜ್ಞಾನಿಕವಾಗಿ ಉಂಟು ಮಾಡುವ ಪರಿಣಾಮಗಳನ್ನು ಚಿದಗ್ನಿಯು ಹೃದಯಂಗಮವಾಗಿ ಚಿತ್ರಿಸುತ್ತದೆ.







